ಜಿಲ್ಲೆ

ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆ ನಡೆಸಿ: ಜಿಲ್ಲಾಧಿಕಾರಿ ಡಾ.ಕುಮಾರ ಸೂಚನೆ

ಕೆ.ಎನ್.ರಾಘವೇಂದ್ರ

ಮಂಡ್ಯ: ಪೌರ ಕಾರ್ಮಿಕರ ಆರೋಗ್ಯ ದೃಷ್ಟಿಯಿಂದ ಮೂರು ತಿಂಗಳಿಗೊಮ್ಮೆ ಆರೋಗ್ಯ ಉಚಿತವಾಗಿ ತಪಾಸಣಾ ಮಾಡಲಾಗುತ್ತಿದೆ. ಅಗತ್ಯವಿದ್ದರೆ ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆ ಮಾಡಿಸಿ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಆಯೋಜಿಸಿದ್ದ ಸಫಾಯಿ ಕರ್ಮಚಾರಿಗಳಿಗೆ ಸಂಬಂಧಿಸಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪೌರ ಕಾರ್ಮಿಕ ಗೃಹ ಭಾಗ್ಯ ಯೋಜನೆಯಡಿ ಅರ್ಹ ಪೌರ ಕಾರ್ಮಿಕರಿಗೆ ಸವಲತ್ತು ನೀಡಿ. ಶಿಕ್ಷಣದ ಮಹತ್ವದ ಬಗ್ಗೆ ಪೌರ ಕಾರ್ಮಿಕರಿಗೆ ಅರಿವು ಮೂಡಿಸಿ. ಮುಖ್ಯವಾಗಿ ಪೌರ ಕಾರ್ಮಿಕರಿಗೆಂದೇ ನೀಡಲಾಗಿರುವ ಸುರಕ್ಷತಾ ಪರಿಕರಗಳನ್ನು ಧರಿಸಿ ಕೆಲಸ ನಿರ್ವಹಿಸುವಂತೆ ಕಟ್ಟುನಿಟ್ಟಾಗಿ ಸೂಚಿಸಿ ಎಂದರು.

ಸಫಾಯಿ ಕರ್ಮಚಾರಿಗಳ ಪ್ರತಿಭಾವಂತ ಮಕ್ಕಳನ್ನು ಗುರುತಿಸಿ ಸನ್ಮಾನಿಸಿ. ಅಧಿಕಾರಿಗಳು ಪೌರಕಾರ್ಮಿಕರೊಂದಿಗೆ ಸಭೆಗಳನ್ನು ಆಯೋಜಿಸಿ ಸುರಕ್ಷತಾ ಪರಿಕರಗಳ ಕುರಿತು ಅರಿವು ಮತ್ತು ಮಹತ್ವದ ಕುರಿತು ಜಾಗೃತಿ ಮೂಡಿಸಿ. ಸುರಕ್ಷತಾ ಪರಿಕರಗಳನ್ನು ಬಳಸದೆ ಕೆಲಸ ನಿರ್ವಹಿಸಬಾರದು ಎಂಬುದನ್ನು ಮನದಟ್ಟು ಮಾಡಿ ಎಂದರು.

ಖಾಸಗಿ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಪೌರಕಾರ್ಮಿಕರಿಗೆ ಇ.ಎಸ್.ಐ ಮತ್ತು ಪಿ.ಎಫ್ ಮೊತ್ತವನ್ನು ಕಡ್ಡಾಯವಾಗಿ ಸಂಸ್ಥೆಯವರು ನೀಡಬೇಕು. ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಯ ವ್ಯಾಪ್ತಿಯಲ್ಲಿ ಪೌರ ಕಾರ್ಮಿಕರಿಗೆ ವಿಶ್ರಾಂತಿ ಗೃಹ ನಿರ್ಮಾಣ ಮಾಡಬೇಕು. ಮಂಡ್ಯದಲ್ಲಿ ಈಗಾಗಲೇ ಒಂದು ಪೌರ ಕಾರ್ಮಿಕ ವಿಶ್ರಾಂತಿ ಗೃಹ ಚಾಲ್ತಿಯಲ್ಲಿದೆ. ಮುಂದಿನ ದಿನಗಳಲ್ಲಿ ಪುರಸಭೆ, ಪಟ್ಟಣ ಪಂಚಾಯಿತಿಯಲ್ಲಿ ವಿಶ್ರಾಂತಿ ಗೃಹಗಳನ್ನು ತೆರೆಯಲಾಗುವುದು ಎಂದು ಹೇಳಿದರು.

ಕೆಲ ಕಡೆ ನಿಗದಿಪಡಿಸಿದ ಉದ್ದೇಶಕ್ಕೆ ಹೊರತಾಗಿ ಬೇರೆ ಕೆಲಸಕ್ಕೆ ಪೌರ ಕಾರ್ಮಿಕರನ್ನು ಬಳಸಿಕೊಳ್ಳಲಾಗುತ್ತಿದೆ ಎಂಬ ದೂರು ಕೇಳಿ ಬರುತ್ತಿದೆ. ಅಧಿಕಾರಿಗಳು ನಿಗದಿಪಡಿಸಿದ ಉದ್ಯೋಗಗಳಿಗೆ ಮಾತ್ರ ಪೌರ ಕಾರ್ಮಿಕರನ್ನು ಬಳಸಿಕೊಳ್ಳಬೇಕು. ಒಂದು ವೇಳೆ ಇತರೆ ಕಾರ್ಯಗಳಿಗೆ ಅವರನ್ನು ಬಳಸಿಕೊಂಡರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್.ನಂದಿನಿ, ಅಪರ ಪೊಲೀಸ್ ವರಿಷ್ಠಾಧಿಕಾರಿ ಗಂಗಾಧರಸ್ವಾಮಿ, ಡಿವೈಎಸ್ಪಿ ಲಕ್ಷ್ಮೀಕಾಂತ್ ಪ್ರಸಾದ್, ಜಿಪಂ ಯೋಜನಾಧಿಕಾರಿ ಧನುಷ್, ತಹಸೀಲ್ದಾರ್ ವಿಶ್ವನಾಥ್, ಪೌರಾಯುಕ್ತೆ ಪಂಪಶ್ರೀ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಶ್ರೀನಿವಾಸ್ ಇತರರಿದ್ದರು.