ಜಿಲ್ಲೆ

ನಿಯಮಾವಳಿಯಂತೆ ಕೆಲಸ ನಿರ್ವಹಿಸಿ...

ಶಾಸಕ ಯಶ್​ಪಾಲ್​ ಸುವರ್ಣ ಎಚ್ಚರಿಕೆ

ರೆಡಿಮಿಕ್ಸ್​ ಘಟಕಗಳ ಅಧಿಕಾರಿಗಳೊಂದಿಗೆ ಸಭೆ

ವಿಜಯವಾಣಿ ಸುದ್ದಿಜಾಲ ಉಡುಪಿ

ಮಣಿಪಾಲ ಕೈಗಾರಿಕಾ ಪ್ರದೇಶದಲ್ಲಿರುವ ರೆಡಿಮಿಕ್ಸ್​ ಕಾಂಕ್ರೀಟ್​ ಘಟಕಗಳ ವಿರುದ್ಧ ಸಣ್ಣ ಕೈಗಾರಿಕೆಗಳ ಸಂಘ ಹಾಗೂ ಸಾರ್ವಜನಿಕರಿಂದ ದೂರು ಕೇಳಿ ಬರುತ್ತಿವೆ. ನಗರಸಭೆಯ ನಿಯಮಾವಳಿಗಳಿಗೆ ಬದ್ಧವಾಗಿ ಹಾಗೂ ಸಾರ್ವಜನಿಕರಿಗೆ ತೊಂದರೆಯಾಗದ ರೀತಿಯಲ್ಲಿ ಕೆಲಸ ನಿರ್ವಹಿಸಬೇಕು ಎಂದು ಘಟಕಗಳ ಅಧಿಕಾರಿಗಳಿಗೆ ಶಾಸಕ ಯಶ್​ಪಾಲ್​ ಸುವರ್ಣ ಸೂಚನೆ ನೀಡಿದರು.

ಉಡುಪಿ ನಗರಸಭೆ ಕಚೇರಿಯಲ್ಲಿ ಮಣಿಪಾಲದ ರೆಡಿಮಿಕ್ಸ್​ ಘಟಕಗಳ ಅಧಿಕಾರಿಗಳೊಂದಿಗೆ ಶುಕ್ರವಾರ ಸಭೆ ನಡೆಸಿ, ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಲೋಡ್​ ಕಾಂಕ್ರೀಟ್​ ಹಾಕಿಕೊಂಡು ವಾಹನ ಸಂಚರಿಸುತ್ತಿರುವುದರಿಂದ ರಸ್ತೆಗಳೂ ಹದಗೆಟ್ಟಿವೆ. ಕೂಡಲೇ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಪರಿಸರ ಮಾಲಿನ್ಯ

ಘಟಕಗಳಲ್ಲಿ ಸಿಮೆಂಟ್​ ಧೂಳು, ತ್ಯಾಜ್ಯ ನೀರನ್ನು ಸಮರ್ಪಕ ವಿಲೇವಾರಿ ಮಾಡುತ್ತಿಲ್ಲ. ಅದರಿಂದ ಸುತ್ತಮುತ್ತಲಿನ ಪರಿಸರ ಮಾಲಿನ್ಯಗೊಂಡಿದೆ. ನಿಯಮ ಮೀರಿ ವಾಹನದಲ್ಲಿ ಹೆಚ್ಚಿನ ಕಾಂಕ್ರೀಟ್​ ಸಾಗಿಸುತ್ತಿರುವುದರಿಂದ ಅದು ರಸ್ತೆಯಲ್ಲಿ ಚೆಲ್ಲುತ್ತಿವೆ. ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರಿಗೆ ತೊಂದರೆಯಾಗುತ್ತಿದ್ದು, ಹಲವು ಅಪಘಾತಗಳು ಸಂಭವಿಸಿವೆ. ಕಾನೂನು ಚೌಕಟ್ಟಿನಲ್ಲಿ ಕಾರ್ಯಾಚರಣೆ ನಡೆಸಿ ಎಂದು ಸೂಚಿಸಿದರು.

ಉಡುಪಿ ನಗರಸಭಾ ಅಧ್ಯಕ್ಷ ಪ್ರಭಾಕರ್​ ಪೂಜಾರಿ, ಉಪಾಧ್ಯಕ್ಷೆ ರಜನಿ ಹೆಬ್ಬಾರ್​, ಸದಸ್ಯೆ ಕಲ್ಪನಾ ಸುಧಾಮ, ಉಡುಪಿ ಜಿಲ್ಲಾ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ಹರೀಶ್​ ಕುಂದರ್​, ನಗರಸಭೆಯ ಸಹಾಯಕ ಕಾರ್ಯಪಾಲಕ ಅಭಿಯಂತ ದುರ್ಗಾಪ್ರಸಾದ್​ ಹಾಗೂ ವಿವಿಧ ರೆಡಿಮಿಕ್ಸ್​ ಘಟಕಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ಗಮನ ಸೆಳೆದಿದ್ದ ವಿಜಯವಾಣಿ

ಪರ್ಕಳದ ರಸ್ತೆಯಲ್ಲಿ ರೆಡಿಮಿಕ್ಸ್​ ವಾಹನದಿಂದ ಕಾಂಕ್ರೀಟ್​ ಮಿಶ್ರಿತ ಜೆಲ್ಲಿಕಲ್ಲು ಬೀಳುತ್ತಿದ್ದು, ವಾಹನ ಸಂಚಾರಕ್ಕೆ ತೊಡಕಾಗುತ್ತಿರುವ ಕುರಿತು ಫೆ.17ರಂದು ವಾಹನ ಸವಾರರಿಗೆ ಪ್ರಾಣಭೀತಿ ಎಂಬ ಶೀರ್ಷಿಕೆಯಡಿ ವಿಜಯವಾಣಿ ವರದಿ ಪ್ರಕಟಿಸಿತ್ತು. ನಿತ್ಯವೂ ಅಪಘಾತ ಆಗುತ್ತಿರುವ ಕುರಿತು ಅಯ್ಯೋ ಪ್ರಾಬ್ಲಂ ಕಣ್ರೀ ಮೂಲಕ ಗಮನ ಸೆಳೆದಿತ್ತು.