ಜಿಲ್ಲೆ

ತಾತ್ಕಾಲಿಕ ಪಟಾಕಿ ಅಂಗಡಿಗಳಿಗೆ ಎನ್​ಒಸಿ ಕಡ್ಡಾಯ

ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಸೂಚನೆ

ದೀಪಾವಳಿ ನಿಮಿತ್ತ ಅಧಿಕಾರಿಗಳೊಂದಿಗೆ ಸಭೆ

ವಿಜಯವಾಣಿ ಸುದ್ದಿಜಾಲ ಉಡುಪಿ

ದೀಪಾವಳಿ ಹಬ್ಬ ಸಮೀಪಿಸುತ್ತಲಿದ್ದು, ಜಿಲ್ಲೆಯಲ್ಲಿ ತಾತ್ಕಾಲಿಕವಾಗಿ ಸುಡುಮದ್ದು ಮಾರಾಟ ಮಾಡುವವರು ಸಂಬಂಧಿತ ಇಲಾಖೆಯಿಂದ ಎನ್​ಒಸಿ ಪಡೆದು, ಮಾರ್ಗಸೂಚಿಯಂತೆ ಯಾವುದೇ ಅನಾಹುತ ಸಂಭವಿಸದಂತೆ ಸುರಕ್ಷತಾ ಕ್ರಮ ಅನುಸರಿಸುವಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಅಧಿಕಾರಿಗಳಿಗೆ ಸೂಚಿಸಿದರು.

ಉಡುಪಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೆಪ್ಟೆಂಬರ್​ 25ರಂದು ಆಯೋಜಿಸಿದ್ದ ದೀಪಾವಳಿ ಹಬ್ಬದ ನಿಮಿತ್ತ ತಾತ್ಕಾಲಿಕವಾಗಿ ಸುಡುಮದ್ದು ಮಾರಾಟ ಮಳಿಗೆ ತೆರೆಯಲು ಅನುಮತಿ ನೀಡುವ ಕುರಿತ ಸಭೆಯಲ್ಲಿ ಮಾತನಾಡಿದರು.

ಅ.10 ಕೊನೆಯ ದಿನ

ಜಿಲ್ಲೆಯಲ್ಲಿ ನಿಗದಿಪಡಿಸಿರುವ ತೆರೆದ ಪ್ರದೇಶಗಳಲ್ಲಿ ಹೊಸದಾಗಿ ಪಟಾಕಿ ಮಾರಾಟ ಮಳಿಗೆ ತೆರೆಯುವವರಿಗೆ ಅರ್ಜಿ ಸಲ್ಲಿಸಲು ಅ.10ರ ವರೆಗೆ ಅವಕಾಶವಿದೆ. ಅಗ್ನಿಶಾಮಕ, ಪೊಲೀಸ್​ ಇಲಾಖೆ, ತಹಸೀಲ್ದಾರರ ಕಚೇರಿ ಹಾಗೂ ಸ್ಥಳೀಯ ಸಂಸ್ಥೆಗಳಿಂದ ಪಡೆದ ಎನ್​ಒಸಿ ಪತ್ರವನ್ನೂ ಕಡ್ಡಾಯವಾಗಿ ಸಲ್ಲಿಸಬೇಕು ಎಂದರು.

ಸಭೆಯಲ್ಲಿ ಸಹಾಯಕ ಕಮಿಷನರ್​ ರಶ್ಮಿ, ಹೆಚ್ಚುವರಿ ಪೊಲೀಸ್​ ವರಿಷ್ಠಾಧಿಕಾರಿ ಸುಧಾಕರ ನಾಯಕ, ನಗರಸಭಾ ಆಯುಕ್ತ ಮಹಾಂತೇಶ ಹಂಗರಗಿ, ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು, ತಹಸೀಲ್ದಾರರು ಉಪಸ್ಥಿತರಿದ್ದರು.

ಕಾನೂನು ಕ್ರಮದ ಎಚ್ಚರಿಕೆ

ಪಟಾಕಿ ಮಾರಾಟದ ಸ್ಥಳಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಘನತ್ಯಾಜ್ಯದ ವೈಜ್ಞಾನಿಕ ವಿಲೇವಾರಿಗೆ ಸೂಕ್ತ ಕ್ರಮ ಜರುಗಿಸಲು ಸ್ಥಳೀಯ ಸಂಸ್ಥೆಗಳು ಕ್ರಮವಹಿಸಬೇಕು. ಶಾಲಾ-ಕಾಲೇಜು, ಆಸ್ಪತ್ರೆಗಳ ಸುತ್ತಮುತ್ತ ಪಟಾಕಿ ಬಳಸುವಂತಿಲ್ಲ. ಪಟಾಕಿಗಳ ಪ್ಯಾಕೆಟ್​ಗಳ ಮೇಲೆ ಹಸಿರು ಪಟಾಕಿಯ ಚಿನ್ಹೆ ಹಾಗೂ ಕ್ಯುಆರ್​ ಕೋಡ್​ ಇರುವುದು ಕಡ್ಡಾಯ. ಈ ಬಗ್ಗೆ ಪರಿಸರ ಅಧಿಕಾರಿಗಳು ಖಚಿತ ಮಾಡಿಕೊಳ್ಳಬೇಕು. ಒಂದು ವೇಳೆ ಹಸಿರು ಪಟಾಕಿ ಆಗಿರದಿದ್ದಲ್ಲಿ ಅಥವಾ ನಿಯಮ ಬಾಹಿರವಾಗಿ ಪಟಾಕಿ ದಾಸ್ತಾನು ಮಾಡಿದರೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿ ಸ್ವರೂಪಾ ಎಚ್ಚರಿಕೆ ನೀಡಿದರು.

ತಾತ್ಕಾಲಿಕ ಸುಡುಮದ್ದು ಮಾರಾಟ ಮಳಿಗೆಗೆ ಅನುಮತಿ ನೀಡುವ ಮೊದಲು ತಹಸಿಲ್ದಾರ್​ ನೇತೃತ್ವದ ಸಮಿತಿ ಖುದ್ದು ಸ್ಥಳ ಪರಿಶೀಲನೆ ಮಾಡಬೇಕು. ಸರ್ಕಾರದ ಸೂಚನೆಯಂತೆ ಹಸಿರು ಪಟಾಕಿಗಳನ್ನೇ ಬಳಸಬೇಕು. ಆಸ್ತಿ-ಪಾಸಿ, ಸಾರ್ವಜನಿಕ ಆರೋಗ್ಯಕ್ಕೆ ಹಾನಿ ಹಾಗೂ ಪರಿಸರ ಮಾಲಿನ್ಯವೂ ಆಗಕೂಡದು. | ಸ್ವರೂಪಾ ಟಿ.ಕೆ. ಉಡುಪಿ ಜಿಲ್ಲಾಧಿಕಾರಿ