ಮಡಿಕೇರಿ: ಕರಡು ಮತದಾರರ ಪಟ್ಟಿ ಪ್ರಕಟ ಸಂಬಂಧಿಸಿದಂತೆ ರಾಜಕೀಯ ಪಕ್ಷಗಳ ಮುಖಂಡರ ಜತೆ ಜಿಲ್ಲಾಧಿಕಾರಿ ವೆಂಕಟ್ ರಾಜಾರವರು ಸಭೆ ನಡೆಸಿದರು. ಈ ಸಂದರ್ಭದಲ್ಲಿ ಕರಡು ಮತದಾರರ ಪಟ್ಟಿಯನ್ನು ರಾಜಕೀಯ ಪಕ್ಷಗಳ ಪ್ರಮುಖರಿಗೆ ನೀಡಿದರು.
ಕರಡು ಮತದಾರರ ಪಟ್ಟಿಯಲ್ಲಿ ಆಕ್ಷೇಪಣೆಗಳು ಇದ್ದಲ್ಲಿ ಮಾಹಿತಿ ನೀಡಬಹುದಾಗಿದೆ. ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ, ಹೆಸರು ತಿದ್ದುಪಡಿ, ಸ್ಥಳಾಂತರ ಮತ್ತಿತರ ಸಂಬಂಧಿಸಿದಂತೆ ಮೊಬೈಲ್ ಅಪ್ಲಿಕೇಷನ್‌ನಲ್ಲಿ ಮತದಾರರ ಸಹಾಯವಾಣಿ (ವೋಟರ್ ಹೆಲ್ಫ್ ಲೈನ್)ನಲ್ಲಿ ನೇರವಾಗಿ ಸಲ್ಲಿಸಬಹುದಾಗಿದೆ. ಇಲ್ಲದಿದ್ದಲ್ಲಿ ತಹಶೀಲ್ದಾರರ ಕಚೇರಿಯ ಚುನಾವಣಾ ಶಾಖೆಗೆ ಭೇಟಿ ನೀಡಿ ಸರಿಪಡಿಸಿಕೊಳ್ಳಬಹುದಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಶಿಕ್ಷಕರ ಮತ್ತು ಪದವೀಧರರ ಕ್ಷೇತ್ರದ ಚುನಾವಣೆ ಬರಲಿದ್ದು, ಅರ್ಹರೆಲ್ಲರೂ ಮತದಾರರ ಪಟ್ಟಿಗೆ ಹೆಸರು ನೋಂದಣಿಗೆ ಅಗತ್ಯ ಸಹಕಾರ ನೀಡುವಂತೆ ರಾಜಕೀಯ ಪಕ್ಷಗಳ ಪ್ರಮುಖರಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ಪಕ್ಷದ ಜಿಲ್ಲಾ ವಕ್ತಾರ ತೆನ್ನಿರಾ ಮೈನಾ, ಕೊಡಗು ಜಿಲ್ಲೆಯ ಹಾಡಿಯ ಜನರು ಇನ್ನೂ ಸಹ ಆಧಾರ್ ಕಾರ್ಡ್ ಪಡೆದುಕೊಂಡಿಲ್ಲ. ಆದ್ದರಿಂದ ಆಧಾರ್ ಕಾರ್ಡ್ ಕೊಡಿಸಬೇಕಿದೆ ಎಂದು ಜಿಲ್ಲಾಧಿಕಾರಿಯಲ್ಲಿ ಮನವಿ ಮಾಡಿದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಆಧಾರ್ ಪಡೆಯದಿರುವ ಆದಿವಾಸಿ ಕುಟುಂಬಗಳಿಗೆ ಆಧಾರ್ ಕಾರ್ಡ್ ಪಡೆಯುವಂತಾಗಲು ಆಧಾರ್ ನೋಂದಣಿ ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗುವುದು. ಕರಡು ಮತದಾರರ ಪಟ್ಟಿ ಸಂಬಂಧಿಸಿದಂತೆ ತಿದ್ದುಪಡಿ ಮತ್ತಿತರ ಸಂಬಂಧ ಈಗಲೇ ಸರಿಪಡಿಸಿಕೊಳ್ಳುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ವೋಟರ್ ಹೆಲ್ಫ್‌ಲೈನ್‌ನಲ್ಲಿ ಗಮನಿಸಬಹುದು ಎಂದರು.
ಭಾರತೀಯ ಜನತಾ ಪಕ್ಷದ ಮುಖಂಡರಾದ ಅಪ್ಪಣ್ಣ, ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಎನ್.ವೀಣಾ ಇದ್ದರು.