ಜಿಲ್ಲೆ

ರಜೆಯನ್ನು ಗೋಷ್ಠಿಯ ಜ್ಞಾನದೊಂದಿಗೆ ಪ್ರಾರಂಭಿಸಿ: ಜಿಲ್ಲಾಧಿಕಾರಿ ಡಾ.ಕುಮಾರ ಸಲಹೆ

ಮಂಡ್ಯ: ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ 3 ದಶಕದ ನಂತರ ಮಂಡ್ಯ ಜಿಲ್ಲೆಯಲ್ಲಿ ನಡೆಯುತ್ತಿದೆ. ಶಿಕ್ಷಣ ಸಂಸ್ಥೆ, ವಿದ್ಯಾರ್ಥಿಗಳು ಡಿ.20, 21 ಹಾಗೂ 22 ರಂದು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.

ನಗರದ ಜಿಲ್ಲಾ ಪಂಚಾಯಿತಿ ಕಚೇರಿಯ ಕಾವೇರಿ ಸಭಾಂಗಣದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆ ಮುಖ್ಯಸ್ಥರೊಂದಿಗೆ ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಡಿ.20ರಂದು ಬೆಳಗ್ಗೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಯಲಿದೆ. ಈ ವೇಳೆ ವಿವಿಧ ಜಿಲ್ಲೆಗಳ ಕಲಾತಂಡಗಳು ಭಾಗವಹಿಸಲಿದೆ. ಇಲ್ಲಿ ಮಕ್ಕಳಿಗೆ ವಿವಿಧ ಕಲಾ ಪ್ರಕಾರಗಳನ್ನು ನೋಡುವ ಅವಕಾಶ ಸಿಗಲಿದೆ. ಈ ಅಪರೂಪ ಹಾಗೂ ಅವಿಸ್ಮರಣೀಯ ಅವಕಾಶವನ್ನು ವಿದ್ಯಾರ್ಥಿಗಳು ಕಳೆದುಕೊಳ್ಳಬಾರದು. ವಿದ್ಯಾರ್ಥಿಗಳನ್ನು ಶಿಕ್ಷಕರು ಕರೆತಂದು ಮೆರವಣಿಗೆ ಸಾಗುವ ಎರಡು ಬದಿಯಲ್ಲಿ ಕುಳಿತುಕೊಂಡು ವೀಕ್ಷಿಸಲು ವ್ಯವಸ್ಥೆ ಮಾಡಿಕೊಳ್ಳಬೇಕು. ಕ್ಷೇತ್ರ ಶಿಕ್ಷಣಾಧಿಕಾರಿಗಳು ಇದಕ್ಕೆ ಯೋಜನೆ ರೂಪಿಸಿ ಎಂದರು.

ಮೂರು ದಿನ ನಡೆಯುವ ಸಮ್ಮೇಳನದಲ್ಲಿ ಸಂಪನ್ಮೂಲ ಹಾಗೂ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಹೆಸರಾಂತ ವ್ಯಕ್ತಿಗಳಿಂದ ಮೂರು ವೇದಿಕೆಗಳಲ್ಲಿ ಗೋಷ್ಠಿಗಳು ನಡೆಯಲಿದೆ. ಇವು ವಿದ್ಯಾರ್ಥಿಗಳಿಗೆ ಜ್ಞಾನದ ಭಂಡಾರ. ಶಿಕ್ಷಕರು ವಿದ್ಯಾರ್ಥಿಗಳೊಂದಿಗೆ ಭಾಗವಹಿಸಿ ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳವೇಕು. ಶುಕ್ರವಾರ ಮತ್ತು ಶನಿವಾರದ ಪಠ್ಯ ಚಟುವಟಿಕೆಗಳನ್ನು ಮುಂದಿನ ರಜೆ ದಿನಗಳೊಂದು ಸರಿದೂಗಿಸಿಕೊಳ್ಳಿ. ಪ್ರತಿದಿನ ರಾತ್ರಿ 7 ಗಂಟೆಯಿಂದ ಸಾಂಸ್ಕೃತಿಕ ಕಾರ್ಯಕ್ರಮ ಇರುತ್ತದೆ. ಬೆಳಗಿನ ತಿಂಡಿ, ಮಧ್ಯಾಹ್ನ ಹಾಗೂ ರಾತ್ರಿ ಊಟದ ವ್ಯವಸ್ಥೆ ಸಹ ಇರುತ್ತದೆ. ಸಮ್ಮೇಳನದ ದಿನಗಳಂದು ಮಕ್ಕಳನ್ನು ಸುರಕ್ಷಿತವಾಗಿ ಕರೆತಂದು, ಕರೆದುಕೊಂಡು ಹೋಗುವ ಜವಾಬ್ದಾರಿ ಶಿಕ್ಷಕರ ಮೇಲೆ ಇರುತ್ತದೆ ಎಂದು ಎಚ್ಚರಿಕೆ ನೀಡಿದ ಡಿಸಿ, ವಿದ್ಯಾರ್ಥಿಗಳಿಗೆ ಸಮ್ಮೇಳನದಲ್ಲಿ ಮುಖ್ಯ ಆಕರ್ಷಣೆ ಎಂದರೆ ಪುಸ್ತಕ ಮಳಿಗೆ. ಮಕ್ಕಳನ್ನು ಕರೆ ತರುವ ಮೊದಲು ಉತ್ತಮ ಪುಸ್ತಕಗಳನ್ನು ಓದುವ ಹವ್ಯಾಸದ ಬಗ್ಗೆ ತಿಳಿಸಿ. ಇದರಿಂದ ಮಕ್ಕಳು ಪುಸ್ತಕಗಳನ್ನು ಖರೀದಿಸಿ ಓದುವ ಮನೋಭಾವನೆ ಬೆಳಸಿಕೊಳ್ಳುತ್ತಾರೆ ಎಂದರು.

ಜಿಪಂ ಸಿಇಒ ಶೇಖ್ ತನ್ವೀರ್ ಆಸ್ಿ ಮಾತನಾಡಿ, ಮಂಡ್ಯ ಜಿಲ್ಲೆಯ ಜನರು ಪ್ರೀತಿ ವಿಶ್ವಾಸದಲ್ಲಿ ಮೇಲುಗೈ ಸಾಧಿಸಿದವರು. ಅತಿ ಹೆಚ್ಚು ಕನ್ನಡ ಮಾತನಾಡುವ ಜನರು ಮಂಡ್ಯದಲ್ಲಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ. 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಮುಂದಿನ ಪೀಳಿಗೆಯವರಿಗೂ ಕೂಡ ಮಾರ್ಗದರ್ಶನವಾಗುವ ರೀತಿಯಲ್ಲಿ ಇರಬೇಕು. ಪ್ರತಿಯೊಬ್ಬರೂ ಕೂಡ ನಮ್ಮ ಮನೆಗಳ ಹಬ್ಬವೆನ್ನುವಂತೆ ಭಾಗವಹಿಸಬೇಕು ಎಂದು ತಿಳಿಸಿದರು.

ಸಮ್ಮೇಳನದ ಸಂಚಾಲಕಿ ಡಾ.ಮೀರಾ ಶಿವಲಿಂಗಯ್ಯ ಮಾತನಾಡಿ, ಈ ಸಮ್ಮೇಳನ ಮುಂದಿನ ಪೀಳಿಗೆಗೆ ಒಂದು ಮಾರ್ಗ ದರ್ಶನವಾಗಿರಬೇಕು ಮತ್ತು ಪ್ರತಿಯೊಬ್ಬರ ಸವಿ ನೆನಪಿನಲ್ಲಿ ಉಳಿಯುತ್ತದೆ. ಕನ್ನಡದ ಸೇವೆಗಾಗಿ ಶಿಕ್ಷಕರು ತಮ್ಮ ಒಂದು ದಿನದ ಸಂಬಳ ನೀಡುತ್ತಿರುವುದು ಸಂತಸದ ಸಂಗತಿ. ಕರ್ನಾಟಕದಲ್ಲಿ ಮೊದಲು ಕನ್ನಡ ಎಂ.ಎ ಪದವಿ ಪಡೆದ ರಾ.ನರಸಿಂಹ ಚಾರ್ಯ ಅವರು ಸಹ ಮಂಡ್ಯ ಜಿಲ್ಲೆಯವರು ಎಂಬುದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ ಎಂದು ತಿಳಿಸಿದರು.

ಸಭೆಯಲ್ಲಿ ಮಂಡ್ಯ ಉಪವಿಭಾಗಾಧಿಕಾರಿ ಶಿವಮೂರ್ತಿ, ಡಿಡಿಪಿಐ ಎಚ್.ಶಿವರಾಮೇಗೌಡ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಸಿ.ಚೆಲುವಯ್ಯ ಇತರರಿದ್ದರು.