ಮಂಡ್ಯ: ಅಲ್ಪಸಂಖ್ಯಾತರ ವರ್ಗಕ್ಕೆ ಸೇರಿದ ಮಕ್ಕಳು ಹೆಚ್ಚಾಗಿ ಭಾಷಾ ವಿಷಯಗಳಲ್ಲಿ ಕಡಿಮೆ ಅಂಕಗಳನ್ನು ಪಡೆಯುತ್ತಿದ್ದಾರೆ. ಆದ್ದರಿಂದ ಶೈಕ್ಷಣಿಕವಾಗಿ ಹಿಂದುಳಿದ ವಿದ್ಯಾರ್ಥಿಗಳ ಕುರಿತು ಹೆಚ್ಚಿನ ನಿಗಾ ವಹಿಸಿ ವಿಶೇಷ ತರಗತಿ ಮಾಡಿ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ‘ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಪ್ರಧಾನ ಮಂತ್ರಿಗಳ ಹೊಸ 15 ಅಂಶಗಳ ಕಾರ್ಯಕ್ರಮದ 2024-25ನೇ ಸಾಲಿನ ಪ್ರಗತಿ ಪರಿಶೀಲನೆ ಸಭೆ’ಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಲ್ಪಸಂಖ್ಯಾತ ವಸತಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ತೃಪ್ತಿಕರವಾಗಿಲ್ಲ. ವಸತಿ ಶಾಲೆಗಳ ಮುಖ್ಯಸ್ಥರು ವಿಶೇಷ ಮುತುವರ್ಜಿ ವಹಿಸಿ ಮಕ್ಕಳಿಗೆ ಸರಿಯಾದ ನಿಟ್ಟಿನಲ್ಲಿ ಶೈಕ್ಷಣಿಕ ಕ್ರಮ ತೆಗೆದುಕೊಳ್ಳುವಂತೆ ತಿಳಿಸಿದರು.
ತರಗತಿಗಳಿಗೆ ದೀರ್ಘಕಾಲ ಗೈರಾಗಿರುವ ವಿದ್ಯಾರ್ಥಿಗಳ ಪಟ್ಟಿ ತೆಗೆದುಕೊಂಡು ಅವರ ಮನೆಗಳಿಗೆ ಭೇಟಿ ನೀಡಬೇಕು. ಶಾಲೆಗೆ ಗೈರಾಗಲು ಕಾರಣದ ಕುರಿತು ಪರಿಶೀಲನೆ ನಡೆಸಿ ಅವರನ್ನು ಶಾಲೆಗೆ ಕರೆತನ್ನಿ. 2024-25ನೇ ಸಾಲಿನ ಎಸ್‌ಎಸ್‌ಎಲ್ಸಿ ಪರೀಕ್ಷೆಯನ್ನು 1,216 ಅಲ್ಪಸಂಖ್ಯಾತ ಮಕ್ಕಳು ಬರೆದಿದ್ದು, ಈ ಪೈಕಿ 651 ವಿದ್ಯಾರ್ಥಿಗಳು ಮಾತ್ರ ಉತ್ತೀರ್ಣರಾಗಿದ್ದಾರೆ. ಅಂದರೆ ಶೇ.53.54 ರಷ್ಟು ಫಲಿತಾಂಶ ಕಂಡುಬಂದಿದೆ. ಪಾಲಕರೊಂದಿಗೆ ಚರ್ಚಿಸಿ ವಿದ್ಯಾರ್ಥಿಗಳನ್ನು ಶೈಕ್ಷಣಿಕವಾಗಿ ಮುಂದೆ ತರಲು ಸೂಕ್ತ ಕ್ರಮ ಕೈಗೊಳ್ಳಿ ಎಂದು ತಿಳಿಸಿದರು.
ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳು ತಮ್ಮ ಉನ್ನತ ವಿದ್ಯಾಭ್ಯಾಸ ಹಾಗೂ ಸ್ವ ಉದ್ಯೋಗಕ್ಕಾಗಿ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದಿಂದ ನೀಡಲಾಗುವ ಸಾಲ ಸೌಲಭ್ಯಗಳಾದ ಅರಿವು ಸಾಲ ಯೋಜನೆ, ಶ್ರಮಶಕ್ತಿ ಸಾಲ ಯೋಜನೆ, ವೃತ್ತಿ ಪ್ರೋತ್ಸಾಹ ಸಾಲ ಯೋಜನೆ, ಸ್ವಾವಲಂಬಿ ಸಾರಥಿ ಯೋಜನೆ ಹಾಗೂ ಮುಂತಾದ ಅಲ್ಪಸಂಖ್ಯಾತರ ಸಾಲ ಯೋಜನೆಗಳ ಕುರಿತು ವ್ಯಾಪಕವಾಗಿ ಪ್ರಚಾರ ಪಡಿಸಿ. ಸಾಲ ಸೌಲಭ್ಯಗಳನ್ನು ನೀಡಿ ಅಲ್ಪಸಂಖ್ಯಾತರ ಆರ್ಥಿಕ ಚಟುವಟಿಕೆಯನ್ನು ವೃದ್ಧಿಸಿ ಎಂದು ಹೇಳಿದರು.
2024-25ನೇ ಸಾಲಿನಲ್ಲಿ ಅಲ್ಪಸಂಖ್ಯಾತರ ಸಾಲದ ವಾರ್ಷಿಕ ಗುರಿ 274.95 ಕೋಟಿ ರೂ ಇದ್ದು, ಇದರಲ್ಲಿ 154.12 ಕೋಟಿ ರೂ ಸಾಲವನ್ನು ಅಲ್ಪಸಂಖ್ಯಾತರ ಆರ್ಥಿಕ ಅಭಿವೃದ್ಧಿಗೆ ನೀಡಲಾಗಿದೆ. ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ ನಿರ್ವಹಿಸಲಾಗುತ್ತಿರುವ ಕಾಮಗಾರಿಗಳ ಪ್ರಗತಿ ಕುಂಠಿತವಾಗಿದೆ. ಟೆಂಡರ್ ನೀಡಿರುವವರ ಜತೆ ಮಾತನಾಡಿ ಕಾಮಗಾರಿಗಳ ಕಾರ್ಯಗಳನ್ನು ಚುರುಕುಗೊಳಿಸಿ ಎಂದರು.
ಸಭೆಯಲ್ಲಿ ಜಿಪಂ ಉಪ ಕಾರ್ಯದರ್ಶಿ(ಆಡಳಿತ) ಪಿ.ಲಕ್ಷ್ಮೀ, ಯೋಜನಾಧಿಕಾರಿ ಧನುಷ್, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಮಧುಶ್ರೀ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸಿ.ಚೆಲುವಯ್ಯ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಶಿವರಾಮೇಗೌಡ, ಲೀಡ್‌ಬ್ಯಾಂಕ್ ವ್ಯವಸ್ಥಾಪಕ ಅರುಣ್‌ಕುಮಾರ್, ಶೇಖ್ ಉಬೇದುಲ್ಲಾ, ವಿನಯ್‌ಕುಮಾರ್ ಇತರರಿದ್ದರು.