ಜಿಲ್ಲೆ

ಹೃದಯಾಘಾತ ತಡೆ ಜಾಗೃತಿಗೆ 23 ರಂದು ವಾಕಥಾನ್

ಎ. ಆರ್. ರಘುರಾಮ

ಚನ್ನರಾಯಪಟ್ಟಣ : ಜಿಲ್ಲೆಯಲ್ಲಿ ಹೃದಯಾಘಾತ ಪ್ರಕರಣ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಜನರಿಗೆ ಆರೋಗ್ಯ ಜಾಗೃತಿ ವಡಿಸಲು ಜು.23ರಂದು ಪಟ್ಟಣದ ಮಿನಿ ವಿಧಾನಸೌಧದ ಆವರಣದಿಂದ ವಾಕಥಾನ್ ಆಯೋಜನೆಗೊಂಡಿದೆ. ಶಾಲಾ-ಕಾಲೇಜು ವಿದ್ಯಾರ್ಥಿಗಳು, ಸಂಘ- ಸಂಸ್ಥೆ ಪದಾಧಿಕಾರಿಗಳು, ವಿವಿಧ ಇಲಾಖೆ ಅಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಆರೋಗ್ಯ ಜಾಗೃತಿ ಕಾರ್ಯಕ್ರಮವನ್ನು ಯಶಗೊಳಿಸಬೇಕು ಎಂದು ತಹಸೀಲ್ದಾರ್ ಜಿ.ಎಸ್. ಶಂಕರಪ್ಪ ಹೇಳಿದರು.

ತಾಲೂಕು ಆಡಳಿತ ಮತ್ತು ಆರೋಗ್ಯ ಇಲಾಖೆ ವತಿಯಿಂದ ಹಮ್ಮಿಕೊಂಡಿರುವ ವಾಕಥಾನ್ ಪೂರ್ವ ಸಿದ್ಧತಾ ಸಭೆಯಲ್ಲಿ ಅವರು ಮಾತನಾಡಿದರು. ಇತ್ತೀಚಿನ ವರ್ಷಗಳಲ್ಲಿ 20-30 ವರ್ಷದ ಯುವಕರಲ್ಲಿ ಹೃದಯಾಘಾತ ಹೆಚ್ಚಾಗುತ್ತಿದೆ. ಇದನ್ನು ತಡೆಯಲು ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು. ಸಮಸ್ಯೆ ಎದುರಾದ ನಂತರ ತುರ್ತು ಕ್ರಮ ವಹಿಸುವುದಕ್ಕಿಂತಾ ಜಾಗೃತಿ ಮೂಡಿಸುವುದು ಶ್ರೇಷ್ಠ ಕಾರ್ಯ ಎಂದು ಅವರು ಅಧಿಕಾರಿಗಳಿಗೆ ತಿಳಿಸಿದರು. ತಾಲೂಕು ಆಡಳಿತ ಹಾಗೂ ಆರೋಗ್ಯ ಇಲಾಖೆ ಸಹಯೋಗದಲ್ಲಿ ಹೃದಯ ಸಂಬಂಧಿ ಆರೋಗ್ಯದ ಜಾಗೃತಿ ಮೂಡಿಸಲು ಸಂಕಲ್ಪ ಮಾಡಲಾಗಿದೆ.

ಜು. 23ರಂದು ಬೆಳಗ್ಗೆ 7ಕ್ಕೆ ತಾಲೂಕು ಆಡಳಿತ ಕಚೇರಿ ಆವರಣದಲ್ಲಿ ಶಾಸಕ ಸಿ.ಎನ್. ಬಾಲಕೃಷ್ಣ ಅವರು

ವಾಕಥಾನ್‌ಗೆ ಚಾಲನೆ ನೀಡಲಿದ್ದಾರೆ. ಬಾಗೂರು ರಸ್ತೆ, ಕೋಟೆ ಮಾರ್ಗವಾಗಿ ಚನ್ನರಾಯಪಟ್ಟಣದ ಹೊಸ ಬಸ್ ನಿಲ್ದಾಣದ ಮೂಲಕ ಸಂಚರಿಸಿ ನವೋದಯ ಸರ್ಕಲ್ನಲ್ಲಿ ಮಾನವ ಸರಪಳಿಯನ್ನು ನಿರ್ಮಿಸಲಾಗುತ್ತದೆ. ಮಾರ್ಗದ ಉದ್ದಕ್ಕೂ ವಾಕಥಾನ್ ಮಾಡುವವರು ಹೃದಯಾಘಾತ ತಡೆಗಟ್ಟುವ ಕುರಿತು ಭಿತ್ತಿಪತ್ರಗಳನ್ನು ಹಂಚಲಿದ್ದಾರೆ. ಘೋಷಣೆ ಕೂಗಿ ಸಾರ್ವಜನಿಕರಲ್ಲಿ ಅರಿವು ಮೂಡಿಸಲಿದ್ದಾರೆ. ನಂತರ ಮೈಸೂರು ರಸ್ತೆ ಪುಣ್ಯ ಆಸ್ಪತ್ರೆ ಹಾಗೂ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಮುಂಭಾಗ ಮೂಲಕ ಸಾಗಿ ತಾಲೂಕು ಆಡಳಿತ ಕಚೇರಿಯಲ್ಲಿ ವಾಕಥಾನ್ ಮುಕ್ತಾಯಗೊಳ್ಳಲಿದೆ ಎಂದು ತಹಸೀಲ್ದಾರ್ ಶಂಕರಪ್ಪ ವಿವರಿಸಿದರು.

ಸದೃಢರಾಗಬೇಕು: ಜನ ಮಾನಸಿಕ, ದೈಹಿಕವಾಗಿ ಸದೃಢರಾಗಬೇಕು, ಎಣ್ಣೆ ರಹಿತ ಆಹಾರವನ್ನೇ ಹೆಚ್ಚು ಸೇವಿಸಬೇಕು. ಮದ್ಯಪಾನ, ಮಾದಕ ವಸ್ತುಗಳನ್ನು ತ್ಯಜಿಸಬೇಕು. ಉತ್ತಮ ಆರೋಗ್ಯಕ್ಕಾಗಿ ನಡಿಗೆ, ವ್ಯಾಯಾಮ, ಪ್ರಾಣಾಯಾಮ ಮಾಡಬೇಕು. ಇದೆಲ್ಲವನ್ನೂ ರೂಢಿಸಿಕೊಂಡರೆ ಹೃದಯದ ಆರೋಗ್ಯವೂ ಉತ್ತಮವಾಗಿರುತ್ತದೆ ಎಂದು ಅವರು ಹೇಳಿದರು. ಬೀದಿ ಬದಿ, ಆಹಾರ ಮಳಿಗೆ (ಫುಡ್ ಕೋರ್ಟ್)ಗಳಲ್ಲಿ ದೊರಕುವ ಆಹಾರ ಬಹುತೇಕ ರಾಸಾಯನಿಕ ಮಿಶ್ರಿತ ವಾಗಿರುತ್ತದೆ. ಮನೆಯಲ್ಲಿ ತಯಾರಿಸುವ ಆಹಾರವನ್ನೇ ಹೆಚ್ಚಾಗಿ ಬಳಸಬೇಕು. ಪ್ರತಿ ನಿತ್ಯ ಕನಿಷ್ಠ 30 ನಿಮಿಷಗಳ ಕಾಲ ಯೋಗ ಮತ್ತು 8 ಗಂಟೆ ನಿದ್ರೆ ಮಾಡಬೇಕು. ಉತ್ತಮ ಆಹಾರ, ಉತ್ತಮ ನಿದ್ದೆಯೊಂದಿಗೆ ಉತ್ತಮ ಆಲೋಚನೆಯೂ ಆರೋಗ್ಯ ಪಾಲನೆಗೆ ಸಹಕಾರಿ ಆಗುತ್ತದೆ. ಈ ಬಗ್ಗೆ ಪಾಲಕರು ಜಾಗೃತರಾದರೆ ಮಕ್ಕಳ ಆರೋಗ್ಯವೂ ಉತ್ತಮವಾಗಿರುತ್ತದೆ ಎಂದು ಅವರು ಸಲಹೆ ನೀಡಿದರು.

*

ಅನಿರೀಕ್ಷಿತ ಭೇಟಿ ನೀಡಿ:

ಆಹಾರ ಸುರಕ್ಷತೆ ಕಾಯ್ದೆ ಅನ್ವಯ ವಿವಿಧ ಇಲಾಖೆಗಳ ಅಧಿಕಾರಿಗಳ ತಂಡ ರಚಿಸಿಕೊಂಡು ಹೋಟೆಲ್, ಬೇಕರಿ, ಬೀದಿಯಲ್ಲಿ ಮಾರುವ ತಿಂಡಿ ತಿನಿಸು, ಆಹಾರ ತಯಾರಿಸುವ ಘಟಕ, ಮಾರಾಟ ಕೇಂದ್ರಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲನೆ ನಡೆಸಿ ಎಂದು ತಹಸೀಲ್ದಾರ್ ಶಂಕರಪ್ಪ ಅವರು ಆಹಾರ ಸುರಕ್ಷತಾ ಅಧಿಕಾರಿಗಳಿಗೆ ಸೂಚಿಸಿದರು.

ಉಚಿತ ಸಪಾಸಣೆ: ತಾಲೂಕು ಆರೋಗ್ಯ ಅಧಿಕಾರಿ ಪಿ.ತೇಜಸ್ವಿನಿ ಮಾತನಾಡಿ ಜಿಲ್ಲಾದ್ಯಂತ ಗೃಹ ಅರೋಗ್ಯ ಯೋಜನೆ ಕಾರ್ಯ ಆರಂಭವಾಗಿದೆ. ತಾಲೂಕಿನ ಪ್ರತಿ ಹಳ್ಳಿಯ ಮನೆ ಮನೆಗೆ ಆರೋಗ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ, ಯೋಜನೆಯಡಿ 30 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತವಾಗಿ ತಪಾಸಣೆ ನಡೆಸುತ್ತಿದ್ದಾರೆ ಎಂದರು. ಅಸಾಂಕ್ರಾಮಿಕ ರೋಗಗಳಾದ ಮಧುಮೇಹ, ರಕ್ತದೊತ್ತಡ, ಬಾಯಿ, ಸ್ತನ, ಗರ್ಭಕಂಠದ ಕ್ಯಾನ್ಸರ್ ರೋಗಗಳ ತಪಾಸಣೆ, ಪತ್ತೆ ಮತ್ತು ನಿರ್ವಹಣೆ ಮಾಡಲಾಗುತ್ತದೆ. ಆಶಾ ಕಾರ್ಯಕರ್ತೆಯರು ಪ್ರತಿ ಮನೆಗೆ ತೆರಳಿ ವಿವಿಧ ರೋಗಗಳ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ. ರಕ್ತದೊತ್ತಡ, ಮಧುಮೇಹ ಇರುವವರಿಗೆ ಸ್ಥಳದಲ್ಲೆ ಔಷಧ ಗಳನ್ನ ಉಚಿತವಾಗಿ ಒದಗಿಸಲಾಗುತ್ತಿದೆ ಎಂದು ತೇಜಸ್ವಿನಿ ವಿವರಿಸಿದರು.

*

ಡೆಂೆ ಹರಡುವ ಸಾಧ್ಯತೆ ಹೆಚ್ಚಾಗಿದೆ:

ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಅನಿತಾ ಮಾತನಾಡಿ, ಮಳೆಗಾಲದ ಈ ಸಂದರ್ಭ ಡೆಂೆ ಹರಡುವ ಸಾಧ್ಯತೆ ಹೆಚ್ಚಾಗಿದೆ. ಹಾಗಾಗಿ ಜನರು ಮನೆಯ ಸುತ್ತಮುತ್ತಲಿನ ವಾತಾವರಣ ಸ್ವಚ್ಛವಾಗಿಟ್ಟುಕೊಳ್ಳಬೇಕು. ದೀರ್ಘಕಾಲ ನೀರು ನಿಲ್ಲುವುದನ್ನು ತಪ್ಪಿಸಬೇಕು. ಮನೆಯಲ್ಲಿರುವ ನೀರು ಸಂಗ್ರಹ ಪರಿಕರಗಳನ್ನು ಶುದ್ಧವಾಗಿ ಇಟ್ಟುಕೊಳ್ಳಬೇಕು ಎಂದರು.

ಮನೆ ಪರಿಸರದಲ್ಲಿ ಸೊಳ್ಳೆ ಉತ್ಪತ್ತಿ ಆಗದಂತೆ ಆಗಾಗ್ಗೆ ಔಷಧ ಸಿಂಪಡಿಸುತ್ತಿರಬೇಕು ಎಂದರು. ಘನ ತ್ಯಾಜ್ಯ ವಸ್ತುಗಳ ವಿಲೇವಾರಿ, ತೆಂಗಿನ ಚಿಪ್ಪು, ಖಾಲಿ ಬಾಟಲು, ಟೈರು, ಖಾಲಿ ಡ್ರಮ್ಗಳಲ್ಲಿ ಬಹುಕಾಲ ನೀರು ನಿಲ್ಲದಂತೆ ಗಮನ ಹರಿಸಬೇಕು. ಜ್ವರ, ನೆಗಡಿ ಇತರೆ ಯಾವುದೇ ರೋಗ ಲಕ್ಷಣ ಕಾಣಿಸಿಕೊಂಡರೆ ತಕ್ಷಣವೇ ಆಸ್ಪತ್ರೆಗೆ ಭೇಟಿ ನೀಡಿ ತಪಾಸಣೆಗೆ ಒಳಗಾಗಬೇಕು ಎಂದು ಅವರು ಸಲಹೆ ನೀಡಿದರು. ಪುರಸಭಾ ಮುಖ್ಯ ಅಧಿಕಾರಿ ಆರ್. ಯತೀಶ ಕುಮಾರ್, ಎಡಿಆರ್ ಎಲ್. ಲಾಲೂ ಪ್ರಸಾದ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ತ್ಯಾಗರಾಜು, ತಾಲೂಕು ಆರೋಗ್ಯ ಸುರಕ್ಷತಾ ಅಧಿಕಾರಿ ಶರತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವ್ಯವಸ್ಥಾಪಕಿ ಮಮತಾ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.

ಚಿತ್ರ ಶೀರ್ಷಿಕೆ 21 ಸಿಆರ್‌ಪಿ-1ಎ.

ವಾಕಥಾನ್ ಸಿದ್ಧತೆ ಕುರಿತು ಚನ್ನರಾಯಪಟ್ಟಣದ ಮಿನಿ ವಿಧಾನಸೌಧದ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪೂರ್ವ ಸಿದ್ಧತಾ ಸಭೆಯಲ್ಲಿ ತಹಶೀಲಾರ್ ಶಂಕರಪ್ಪ ಮಾತನಾಡಿದರು. ಪುರಸಭಾ ಮುಖ್ಯ ಅಧಿಕಾರಿ ಆರ್. ಯತೀಶ ಕುಮಾರ್, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಅನಿತಾ, ತಾಲೂಕು ಆರೋಗ್ಯ ಅಧಿಕಾರಿ ಪಿ.ತೇಜಸ್ವಿನಿ ಇತರರು ಇದ್ದರು.