ಮಂಡ್ಯ: ನಾಡು ಕಂಡ ಶ್ರೇಷ್ಟ ಸಾಹಿತಿ ಕೆ.ಎಸ್.ನರಸಿಂಹಸ್ವಾಮಿ ಅವರು ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳನ್ನು ಶಾಶ್ವತವಾಗಿ ಉಳಿಸಿಕೊಳ್ಳಬೇಕಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಕೆ.ಎಸ್.ನರಸಿಂಹಸ್ವಾಮಿ ಸ್ಮಾರಕ ನಿರ್ಮಾಣ ಮಾಡುವ ಸಂಬಂಧ ಸಭೆಯ ಅಧ್ಯಕ್ಷತೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸ್ಮಾರಕ ನಿರ್ಮಾಣದ ಕುರಿತು ರಾಜ್ಯಮಟ್ಟದಲ್ಲಿ ಸಭೆ ಆಯೋಜಿಸಿ ಸರ್ಕಾರದ ಮುಂದೆ ಪ್ರಸ್ತಾವನೆ ಸಲ್ಲಿಸುವಂತೆ ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರು ಸೂಚಿಸಿದ್ದಾರೆ ಎಂದು ತಿಳಿಸಿದರು.
ಕೆ.ಎಸ್.ನರಸಿಂಹಸ್ವಾಮಿ ಅವರ ಮನೆ ಮಾರಾಟವಾಗಿದೆ. ಮಾಲೀಕರು ಮನೆಯನ್ನು ಬಿಟ್ಟುಕೊಡಲು ತಯಾರಾಗಿದ್ದು, ಪರ್ಯಾಯ ಸರ್ಕಾರಿ ಜಾಗ ನೀಡಿ ಮನೆಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಹೆಸರಿಗೆ ಮಾಡಲಾಗುವುದು. ನಂತರ ಮನೆಯನ್ನು ಸ್ಮಾರಕವಾಗಿ ಪರಿವರ್ತಿಸಿ ಅವರಿಗೆ ಸಂಬಂಧಪಟ್ಟ ಎಲ್ಲ ವಸ್ತುಗಳನ್ನು ಅಲ್ಲಿ ಶೇಖರಿಸಿ ಇಡಲಾಗುವುದು. ಕೆ.ಎಸ್.ನರಸಿಂಹಸ್ವಾಮಿ ಟ್ರಸ್ಟ್‌ನಿಂದ ಸ್ಮಾರಕ ನಿರ್ವಹಣೆ ಮತ್ತು ಜವಾಬ್ದಾರಿಯನ್ನು ನೋಡಿಕೊಳ್ಳಲಾಗುವುದು ಎಂದರು.
ಮಾತ್ರವಲ್ಲದೆ ಕೆಎಸ್‌ನ ಹೆಸರಿನಲ್ಲಿ ರಂಗಮಂದಿರ ನಿರ್ಮಾಣ ಮಾಡಲಾಗುವುದು. ಮೇಲುಕೋಟೆ ಸಮೀಪದಲ್ಲಿ ಇರುವ ಸೂಕ್ತ ಸರ್ಕಾರಿ ಜಾಗ ಗುರುತಿಸಿ ಅಲ್ಲಿ ಬಯಲು ರಂಗಮಂದಿರ ಸ್ಥಾಪನೆ ಮಾಡಲಾಗುವುದು. ಕಿಕ್ಕೇರಿ ಕೆರೆಯನ್ನು ಕೆ.ಎಸ್.ನರಸಿಂಹಸ್ವಾಮಿ ಸರೋವರವೆಂದು ಮರುನಾಮಕರಣ ಮಾಡುವುದರ ಜತೆಗೆ ವಾಯು ವಿಹಾರ, ದೀಪ ವ್ಯವಸ್ಥೆ ಹಾಗೂ ಮುಂತಾದ ಕ್ರಮಗಳ ಕುರಿತು ಡಿ.ಪಿ.ಆರ್ ಸಿದ್ಧಪಡಿಸಿ ನೀರಾವರಿ ನಿಗಮಕ್ಕೆ ಪ್ರಸ್ತಾವನೆ ಸಲ್ಲಿಸಿ. ಗ್ರಾಮ ಪಂಚಾಯಿತಿ ವತಿಯಿಂದ ಇರುವ ಅನುದಾನ ಉಪಯೋಗಿಸಿಕೊಂಡು ಸ್ವಾಗತ ಕಮಾನು ನಿರ್ಮಾಣ ಮಾಡಿ. ಇಷ್ಟೆಲ್ಲ ಕಾರ್ಯಾಗಳನ್ನು ಶೀಘ್ರವಾಗಿ ಮಾಡಿ ಮುಗಿಸಬೇಕು. ಇಲ್ಲವಾದಲ್ಲಿ ಶಿಸ್ತಿನ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಸಭೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ವಿ.ನಂದೀಶ್, ಕಾವೇರಿ ನಿರಾವರಿ ನಿಮಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಎಂ.ಮಂಜುನಾಥ್, ಕೆ.ಎಸ್.ನರಸಿಂಹಸ್ವಾಮಿ ಟ್ರಸ್ಟ್ ಅಧ್ಯಕ್ಷ ಕಿಕ್ಕೇರಿ ಕೃಷ್ಣಮೂರ್ತಿ, ಸದಸ್ಯರಾದ ತಿಮ್ಮರಾಜು, ಶ್ರೀನಿವಾಸ್, ಡಾ.ಮೇಖಲಾ ವೆಂಕಟೇಶ್ ಇತರರಿದ್ದರು.