ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದಲ್ಲಿ ಶ್ರಾವಣ ಮಾಸದ ನಿಮಿತ್ತ ನಡೆದ ಬಸವ ಪಂಚಮಿ, ಸಾಮೂಹಿಕ ಇಷ್ಟಲಿಂಗ ಪೂಜೆ ಹಾಗೂ ಹುನಗುಂದ-ಇಳಕಲ್ಲ ತಾಲೂಕು ಪಂಚಮಸಾಲಿ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಬಸವಜಯ ಮತ್ಯುಂಜಯ ಸ್ವಾಮೀಜಿ ವಿದ್ಯಾರ್ಥಿಗಳನ್ನು ಸತ್ಕರಿಸಿ ಪ್ರಮಾಣ ಪತ್ರ ನೀಡಿದರು. 
ಜಿಲ್ಲೆ

ಬೆಳಗಾವಿಯಲ್ಲಿ ಸೆ.22 ರಂದು ಸಭೆ

ದತ್ತಾತ್ರೇಯ ಪಿ ಕುಲಕರ್ಣಿ

ಕೂಡಲಸಂಗಮ: ಬೆಳಗಾವಿಯಲ್ಲಿ ಡಿ.12 ರಂದು ಪಂಚಮಸಾಲಿ ರೈತರ ಟ್ರಾೃಕ್ಟರ್ ರ‌್ಯಾಲಿ ಹಾಗೂ ಸಾಮಾನ್ಯ ಜನರಿಂದ ಹಾಸಿಗೆ ಹೊದಿಕೆ ಹೋರಾಟ ಮಾಡುವ ಕುರಿತು ಚರ್ಚಿಸಲು ಬೆಳಗಾವಿ ಗಾಂಧಿ ಭವನದಲ್ಲಿ ಸೆ.22 ರಂದು ಪೂರ್ವಭಾವಿಸಭೆ ಕರೆಯಲಾಗಿದೆ ಎಂದು ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಬಸವಜಯ ಮತ್ಯುಂಜಯ ಸ್ವಾಮೀಜಿ ಹೇಳಿದರು.

ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದಲ್ಲಿ ಶ್ರಾವಣ ಮಾಸದ ನಿಮಿತ್ತ ಭಾನುವಾರ ನಡೆದ ಬಸವ ಪಂಚಮಿ, ಸಾಮೂಹಿಕ ಇಷ್ಟಲಿಂಗ ಪೂಜೆ ಹಾಗೂ ಹುನಗುಂದ-ಇಳಕಲ್ಲ ತಾಲೂಕು ಪಂಚಮಸಾಲಿ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿ, ಸಮಾಜದ ಶಾಸಕರಿಗೆ 2ಎ ಮೀಸಲಾತಿ ಕುರಿತು ಅಧಿವೇಶನದಲ್ಲಿ ಮಾತನಾಡಲು ಅವಕಾಶ ನೀಡದೆ ಇರುವುದರ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗುವುದು. ಅಂದು ಸಭೆ ಕೈಗೊಳ್ಳುವ ನಿರ್ಣಯಕ್ಕೆ ಸರ್ಕಾರ ಮಣಿಯದೆ ಇದ್ದರೆ ಬೆಳಗಾವಿ ಅಧಿವೇಶನದಲ್ಲಿ ರೈತರು, ವಕೀಲರು, ಸಮಾಜ ಬಾಂಧವರು ಒಗ್ಗೂಡಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಪ್ರತಿಭಾ ಪುರಸ್ಕಾರ, ಬಸವ ಪಂಚಮಿ ಸಮಾರಂಭಕ್ಕೂ ಪೂರ್ವದಲ್ಲಿ ಪಂಚಮಸಾಲಿ ಸಮಾಜದ ಮುಖಂಡರು, ಕಾರ್ಯಕರ್ತರಿಗೆ ಶ್ರೀಗಳು ಪಂಚಮುಖಿ ರುದ್ರಾಕ್ಷಿ ಕಂಕಣ ಕಟ್ಟಿ, ಇಷ್ಟಲಿಂಗ ದೀಕ್ಷೆ ನೀಡಿದರು. ಈ ಕಂಕಣವನ್ನು 2ಎ ಮೀಸಲಾತಿಗಾಗಿ ಕಟ್ಟಲಾಗಿದೆ. ಹೋರಾಟಕ್ಕೆ ಸಿದ್ಧರಾಗಿ ಎಂದು ಹೇಳಿದರು. ನಂತರ ಬಸವ ಭಜನೆ ನಡೆಯಿತು. ಎರಡು ಗಂಟೆ ಸಾಮೂಹಿಕ ಇಷ್ಟಲಿಂಗ ಪೂಜಾ ಕಾರ್ಯಕ್ರಮ ನಡೆಯಿತು.

ಎಸ್‌ಎಸ್‌ಎಲ್‌ಸಿ, ಪಿಯುಸಿ ಪರೀಕ್ಷೆಯಲ್ಲಿ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳನ್ನು ಶ್ರೀಗಳು ಸನ್ಮಾನಿಸಿ, ಪ್ರಮಾಣ ಪತ್ರ ನೀಡಿದರು. ಪಂಚಮಸಾಲಿ ಸಮಾಜದ ಹುನಗುಂದ ತಾಲೂಕಾಧ್ಯಕ್ಷ ಶಂಕ್ರಪ್ಪ ನೆಗಲಿ, ಇಳಕಲ್ಲ ತಾಲೂಕಾಧ್ಯಕ್ಷ ಮಹಾಂತಗೌಡ ಪಾಟೀಲ, ಮುಖಂಡರಾದ ಶೇಖಪ್ಪ ದೇಶಿ, ಬಸವರಾಜ ಗೌಡರ, ಶೇಖರಗೌಡ ಗೌಡರ ಇದ್ದರು.