ವಿಜಯವಾಣಿ ಸುದ್ದಿಜಾಲ ಬಂಟ್ವಾಳ
ಮಳೆ ಬಂದ ಮೇಲೆ ಕಾರ್ಯಪ್ರವೃತ್ತರಾಗುವ ಬದಲು ಸಮಸ್ಯೆಗಳೇ ಬಾರದಂತೆ ಕಾರ್ಯನಿರ್ವಹಿಸಲು ಅಧಿಕಾರಿಗಳು ಇಂದಿನಿಂದಲೇ ಕಾರ್ಯೋನ್ಮುಖರಾಗಬೇಕು ಎಂದು ಬಂಟ್ವಾಳ ತಹಸೀಲ್ದಾರ್ ಡಿ.ಅರ್ಚನಾ ಭಟ್ ತಿಳಿಸಿದರು.
ಬಂಟ್ವಾಳ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಮುಂಗಾರು ಮುನ್ನೆಚ್ಚರಿಕೆ ಕುರಿತು ಪಿಡಿಒಗಳು ಹಾಗೂ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರೊಂದಿಗೆ ಸಭೆ ನಡೆಸಿ ಮಾತನಾಡಿದರು.
ಅಧಿಕಾರಿಗಳು ಮಳೆಗಾಲ ಎದುರಿಸಲು ಸನ್ನದ್ಧರಾಗಬೇಕು, ಮೇ 2ರೊಳಗೆ ಅಪಾಯಕಾರಿ ಜಾಗ ಗುರುತಿಸಿ ವರದಿ ನೀಡಬೇಕು, ಅನಾಹುತಗಳು ಆಗದಿರುವಂತೆ ಮುಂಜಾಗರೂಕತೆ ವಹಿಸಬೇಕು ಎಂದರು.
ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಸಚಿನ್ ಕುಮಾರ್ ಮಾತನಾಡಿ, ಸೂಚನೆಗಳನ್ನು ಕಟ್ಟುನಿಟ್ಟಾಗಿ ಅಧಿಕಾರಿಗಳು ಪಾಲಿಸಬೇಕು. ಮಳೆಗಾಲ ಸಂದರ್ಭ ಸಮಸ್ಯೆಗಳು ಉಂಟಾಗದಂತೆ ಎಚ್ಚರಿಕೆ ವಹಿಸಬೇಕು ಎಂದರು.
ಪ್ರವಾಹ ಬಂದಾಗ ಎಚ್ಚರ: ನೇತ್ರಾವತಿ ನದಿ ಸಹಿತ ತಾಲೂಕಿನ ನದಿ, ಹಳ್ಳಗಳ ಸಮೀಪ ಸಾರ್ವಜನಿಕರು ಅಪಾಯಕಾರಿ ಜಾಗಗಳಿಗೆ ಹೋಗದಂತೆ ಕಟ್ಟುನಿಟ್ಟಿನ ಕ್ರಮಗಳನ್ನು ಸ್ಥಳೀಯಾಡಳಿತಗಳು ಕೈಗೊಳ್ಳಬೇಕು ಎಂದು ಪುರಸಭೆ ಅಧಿಕಾರಿಗಳು ಹಾಗೂ ಗ್ರಾಪಂ ಪಿಡಿಒಗಳಿಗೆ ತಹಸೀಲ್ದಾರ್ ಸೂಚನೆ ನೀಡಿದರು. ವಿಶೇಷವಾಗಿ ಪುರಸಭೆಯ ಜಾಗಗಳು, ಗ್ರಾಮಗಳಾದ ನಾವೂರು, ಅಜಿಲಮೊಗರು ಮೊದಲಾದ ಜಾಗಗಳಲ್ಲಿ ಎಚ್ಚರಿಕೆ ವಹಿಸಬೇಕು, ಸೂಚನಾ ಫಲಕಗಳನ್ನು ಹಾಕಬೇಕು ಎಂದರು.
ಸುಸ್ಥಿತಿಯಲ್ಲಿ ಕಾಳಜಿ ಕೇಂದ್ರ
ತಾಲೂಕಿನಲ್ಲಿ ಕಾಳಜಿ ಕೇಂದ್ರಗಳ ಕುರಿತು ವರದಿ ಪಡೆದು ಅವುಗಳನ್ನು ಸುಸ್ಥಿತಿಯಲ್ಲಿಡಬೇಕು. ನೆರೆ ಬಂದಾಗ ಬೋಟ್‌ಗಳನ್ನು ಸನ್ನದ್ಧ ಸ್ಥಿತಿಯಲ್ಲಿಟ್ಟುಕೊಳ್ಳಬೇಕು. ಈಜುಗಾರರು, ಮುಳುಗುತಜ್ಞರೊಂದಿಗೆ ಸಿದ್ಧಗೊಳಿಸಬೇಕು. ಕಳೆದ ವರ್ಷ ನೆರೆ ಬಂದ ವೇಳೆ ತೊಂದರೆ ಅನುಭವಿಸಿದ ಗೂಡಿನಬಳಿ ಕುಟುಂಬಗಳನ್ನು ಮೊದಲೇ ಸ್ಥಳಾಂತರ ಮಾಡುವಂತೆ ತಹಸೀಲ್ದಾರ್ ನಿರ್ದೇಶನ ನೀಡಿದರು.
ಹೆದ್ದಾರಿ ಮುನ್ನೆಚ್ಚರ
ಕಳೆದ ಮಳೆಗಾಲ ಸಂದರ್ಭ ರಾಷ್ಟ್ರೀಯ ಹೆದ್ದಾರಿಯ ಹಲವು ಭಾಗಗಳಲ್ಲಿ ನಿರ್ಮಾಣ ಕಾರ್ಯದ ಅವ್ಯವಸ್ಥೆಗಳಿಂದ ತೊಂದರೆಗಳುಂಟಾಗಿತ್ತು. ಈ ಬಾರಿ ಮರುಕಳಿಸಬಾರದು ಎಂಬ ನಿಟ್ಟಿನಲ್ಲಿ ಹೈವೆ ಕಾಮಗಾರಿ ಸಂಬಂಧಿಸಿದ ಗುತ್ತಿಗೆದಾರರ ಪ್ರತಿನಿಧಿಯನ್ನು ಸ್ಥಳಕ್ಕೆ ಕರೆಸಿ ಸೂಚನೆಗಳನ್ನು ನೀಡಲಾಯಿತು. ಗೋಳ್ತಮಜಲು ಗ್ರಾಪಂ ಕಟ್ಟಡವಿರುವ ಭಾಗ ಕುಸಿತದ ಸ್ಥಿತಿಯಲ್ಲಿದ್ದು, ತಡೆಗೋಡೆಯನ್ನು ಹೈವೆ ಕಂಪನಿ ನಿರ್ಮಿಸಿಕೊಡಬೇಕು ಎಂದು ಪಿಡಿಒ ವಿಜಯಶಂಕರ ಆಳ್ವ ಹೇಳಿದರು. ಫ್ಲೈಓವರ್‌ನಲ್ಲಿ ನೀರು ಹೊರಚೆಲ್ಲದಂತೆ ಗಮನಹರಿಸಬೇಕು. ಕಾಮಗಾರಿ ಆಗುವ ಜಾಗದಲ್ಲಿ ಜನರಿಗೆ ತೊಂದರೆ ಆಗದಂತೆ, ಎಚ್ಚರಿಕೆಯಿಂದ ಕೆಲಸ ಮಾಡಬೇಕು ಎಂದು ತಹಸೀಲ್ದಾರ್ ಸೂಚಿಸಿದರು. ಆರು ತಿಂಗಳೊಳಗೆ ಹೆದ್ದಾರಿ ಕೆಲಸಗಳು ಮುಗಿಯುತ್ತವೆ. ಕಲ್ಲಡ್ಕ ಫ್ಲೈಓವರ್ ಮುಂದಿನ ತಿಂಗಳು ಸಂಚಾರಕ್ಕೆ ತೆರೆದುಕೊಳ್ಳುತ್ತದೆ ಎಂದು ನಿರ್ಮಾಣ ಕಂಪನಿ ಪ್ರತಿನಿಧಿ ಸಭೆಗೆ ತಿಳಿಸಿದರು.
ಫ್ಲೆಕ್ಸ್, ಬ್ಯಾನರ್ ತೆರವು
ಮಳೆ, ಗಾಳಿ ಸಂದರ್ಭ ಫ್ಲೆಕ್ಸ್, ಬ್ಯಾನರ್, ಬಂಟಿಂಗ್‌ಗಳು ಹೆದ್ದಾರಿ ಬದಿಯಲ್ಲಿ ವಾಹನ ಸಂಚಾರಕ್ಕೆ ಅಪಾಯಕಾರಿಯಾಗುವಂತಿವೆ. ಡಿಸಿ ಈಗಾಗಲೇ ಈ ಕುರಿತು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಇವುಗಳನ್ನು ಕೂಡಲೇ ತೆರವು ಮಾಡಬೇಕು ಎಂದು ಹೆದ್ದಾರಿ ಬದಿಯ ಪಿಡಿಒಗಳು ಹಾಗೂ ಪುರಸಭಾಧಿಕಾರಿಗಳಿಗೆ ತಹಸೀಲ್ದಾರ್ ಸೂಚಿಸಿದರು. ಗಾಳಿ ಮಳೆಗೆ ಹೆದ್ದಾರಿಗೆ ಬಿದ್ದು ವಾಹನ ಸವಾರರಿಗೆ ಅಪಾಯವಾದರೆ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವ ಎಚ್ಚರಿಕೆ ಚ್ಟ ನೀಡಿದರು.
ಪಾಣೇರ್ ಸಂಕ ಪರೀಕ್ಷೆ
ಬ್ರಿಟಿಷ್ ಸರ್ಕಾರದ ಕಾಲದಲ್ಲಿ ನಿರ್ಮಾಣವಾದ ಪಾಣೆಮಂಗಳೂರು ಸೇತುವೆಯ ಸಾಮರ್ಥ್ಯ ಪರೀಕ್ಷೆಗಾಗಿ ಪುರಸಭೆ ಇಂಜಿನಿಯರ್‌ಗೆ ಸೂಚಿಸಲಾಗಿತ್ತು. ಇನ್ನೂ ವರದಿ ನೀಡಿಲ್ಲವೇಕೆ? ಕೆಲಸ ಮಾಡಲು ಸಾಧ್ಯವಾಗದಿದ್ದರೆ, ಸಸ್ಪೆಂಡ್ ಮಾಡಿ ಎಂದು ಮುಖ್ಯಾಧಿಕಾರಿ ನಜೀರ್ ಅವರಿಗೆ ತಹಸೀಲ್ದಾರ್ ಚ್ಟ ಸೂಚಿಸಿದರು.
ಕಲ್ಲು ಕ್ವಾರಿ ಗಮನವಿರಲಿ
ಸಜೀಪ, ಕಲ್ಲಗುಂಡಿ, ಬೆಂಜನಪದವು ಸಹಿತ ತಾಲೂಕಿನ ಹಲವೆಡೆ ತೆರೆದ ಕ್ವಾರಿಗಳು ಹಾಗೂ ಕಾಮಗಾರಿ ನಿಲ್ಲಿಸಿದ ಕ್ವಾರಿಗಳು ಅಪಾಯದ ಸ್ಥಿತಿಯಲ್ಲಿದ್ದರೆ ಅವುಗಳನ್ನು ಗುರುತಿಸಿ, ಗುಂಡಿ ಮುಚ್ಚಿಸಲು ಮಾಲೀಕರಿಗೆ ಕಟ್ಟುನಿಟ್ಟಿನ ಸೂಚನೆಯನ್ನು ತಹಸೀಲ್ದಾರ್ ನೀಡಿದ್ದಾರೆ. ಈ ಕುರಿತು ಪಿಡಿಒಗಳು ಕೂಡಲೇ ಕ್ರಮ ಕೈಗೊಂಡು ವರದಿ ನೀಡುವಂತೆ ತಿಳಿಸಿದರು. ಗುಂಡಿಗಳನ್ನು ಮುಚ್ಚಿಸಲು ಮಾಲೀಕರಿಗೆ ನೋಟಿಸ್ ನೀಡಿ ಮತ್ತು ಅಪಾಯಗಳಾದರೆ ಅವರ ಮೇಲೆ ಕಾನೂನು ಕ್ರಮ ಜರುಗಿಸಿ ಎಂದರು.