ಮಂಡ್ಯ: ಜಿಲ್ಲೆಯಲ್ಲಿ ಪ್ರಸ್ತುತ ಯೂರಿಯಾ, ಡಿಎಪಿ, ಎಂಒಪಿ, ಎಸ್‌ಎಸ್‌ಪಿ, ಕಾಂಪ್ಲೆಕ್ಸ್ ಸೇರಿದಂತೆ 24,471 ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನು ಲಭ್ಯವಿದೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ರಸಗೊಬ್ಬರ ಸಮರ್ಪಕವಾಗಿ ನಿರ್ವಹಣೆ ಕುರಿತು ಅಧಿಕಾರಿಗಳೊಂದಿಗೆ ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರತಿ ತಾಲೂಕುವಾರು ತಹಸೀಲ್ದಾರ್ ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ರಸಗೊಬ್ಬರ ಅಂಗಡಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ. ರಸಗೊಬ್ಬರ ಅಂಗಡಿಗಳಲ್ಲಿ ಗೊಬ್ಬರ ದಾಸ್ತಾನುಗಳ ಉಳಿಕೆ ಹಾಗೂ ಗೊಬ್ಬರಗಳ ದರವನ್ನು ನಮೂದಿಸಿರುವ ಬಗ್ಗೆ ಪರಿಶೀಲಿಸಿ ಎಂದು ಸೂಚಿಸಿದರು.
ಕಾಳಸಂತೆ ಹಾಗೂ ರಸಗೊಬ್ಬರ ಅಂಗಡಿಗಳಲ್ಲಿ ಗೊಬ್ಬರಗಳನ್ನು ಹೆಚ್ಚಿನ ದರಕ್ಕೆ ಮಾರಾಟವಾಗದಂತೆ ಅಧಿಕಾರಿಗಳು ನಿಗಾ ವಹಿಸಬೇಕು. ರಸಗೊಬ್ಬರ ಮಾರಾಟಗಾರರೊಂದಿಗೆ ಸಭೆ ನಡೆಸಿ ರಸ ಗೊಬ್ಬರಗಳನ್ನು ಸಮರ್ಪಕವಾಗಿ ವಿತರಣೆ ಮಾಡುವಂತೆ ಅರಿವು ಮೂಡಿಸಿ ಎಂದು ಸಲಹೆ ನೀಡಿದರು.
ಪಶುಸಂಗೋಪನೆ ಇಲಾಖೆಯ ವತಿಯಿಂದ ಮೇವು ಬೆಳೆಗಳಿಗೆ ಯೂರಿಯಾ ಬಳಕೆಯನ್ನು ಕಡಿಮೆ ಮಾಡಿಸಬೇಕು. ಹಾಗೂ ರೇಷ್ಮೆ ಬೆಳೆಗಳಿಗೂ ಸಹ ಯೂರಿಯಾ ಬಳಕೆ ಮಾಡುವುದರಿಂದ ಗೂಡಿನ ಗುಣಮಟ್ಟ ಕುಂದುತ್ತದೆ ಎಂದು ರೈತರಲ್ಲಿ ಜಾಗೃತಿ ಮೂಡಿಸಬೇಕು. ಬೆಳೆ ನಾಟಿ ಮಾಡುವ ಸಂದರ್ಭದಲ್ಲಿ ರೈತರು ನ್ಯಾನೋ ಯೂರಿಯಾ, ಕಾಂಪ್ಲೆಕ್ಸ್ ಅನ್ನು ಬಳಸಿ. ಮೇಲು ಗೊಬ್ಬರದ ಸಂದರ್ಭದಲ್ಲಿ ಯೂರಿಯಾ ಬಳಸುವಂತೆ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಿ. ಅಧಿಕಾರಿಗಳು ಜಿಲ್ಲೆಯಲ್ಲಿ ರಸಗೊಬ್ಬರ ಕೊರತೆ ಉಂಟಾಗದಂತೆ ನೋಡಿಕೊಳ್ಳಿ ಎಂದು ತಿಳಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ, ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಇ.ತಿಮ್ಮಯ್ಯ, ಉಪವಿಭಾಗಾಧಿಕಾರಿಗಳಾದ ಶ್ರೀನಿವಾಸ್, ಎಂ.ಶಿವಮೂರ್ತಿ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ವಿ.ಎಸ್.ಅಶೋಕ್, ಮಂಡ್ಯ ತಹಸೀಲ್ದಾರ್ ವಿಶ್ವನಾಥ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.