ಅಫಜಲಪುರ: ಸರ್ಕಾರದಲ್ಲಿ ಕುಡಿಯುವ ನೀರಿಗೆ ಸಾಕಷ್ಟು ಅನುದಾನವಿದ್ದು, ನೀರಿನ ಸಮಸ್ಯೆ ಎದುರಾಗದಂತೆ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಮೇಲಾಧಿಕಾರಿಗಳ ಗಮನಕ್ಕೆ ತಂದು ಸ್ಥಳದಲ್ಲಿದ್ದು ಕರ್ತವ್ಯ ನಿರ್ವಹಿಸಬೇಕು. ಇಲ್ಲದಿದ್ದಲ್ಲಿ ಕ್ರಮ ಜರುಗಿಸಲಾಗುವುದು ಎಂದು ಜಿಪಂ ಸಿಇಒ ಭಂವರ್‌ಸಿಂಗ್ ಮೀನಾ ಹೇಳಿದರು.
ಪಟ್ಟಣದ ತಾಪಂ ಸಭಾಂಗಣದಲ್ಲಿ ಮಂಗಳವಾರ ಬರ ನಿರ್ವಹಣೆ ಕುರಿತು ಗ್ರಾಪಂ ಅಭಿವೃದ್ಧಿ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿ, ನೀರಿನ ಸಮಸ್ಯೆ ಗಂಭೀರವಿದ್ದ ಕಡೆ ಕೊಳವೆ ಬಾವಿ ಕೊರೆಸಿ. ಸಾಧ್ಯವಾಗದಿದ್ದರೆ ರೈತರಿಂದ ಕೊಳವೆ ಬಾವಿ ಖರೀದಿಸಿ. ಹಳ್ಳಿಗಳಲ್ಲಿನ ನೀರಿರುವ ಹಳೇ ಕಲ್ಯಾಣಿ, ಬಾವಿಗಳನ್ನು ಸ್ವಚ್ಛಗೊಳಿಸಿ ಪುನರ್ ಬಳಕೆ ಮಾಡಿಕೊಳ್ಳಿ. ಬರ ನಿರ್ವಹಣೆಗಾಗಿ ಪಿಡಿಒಗಳನ್ನು ಚುನಾವಣೆ ಕೆಲಸಕ್ಕೆ ಬಳಸುತ್ತಿಲ್ಲ. ಆದ್ದರಿಂದ ಸಮಸ್ಯೆ ಆಗದಂತೆ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದರು.
ಗ್ರಾಮೀಣ ಭಾಗದಲ್ಲಿ ನೀರು ಪೋಲಾಗದಂತೆ ಡಂಗೂರು ಸಾರಿಸಿ ಜಾಗೃತಿ ಮೂಡಿಸಬೇಕು. ಹೆಚ್ಚಿನ ನೀರಿನ ಸಮಸ್ಯೆ ಇರುವ ಗ್ರಾಮಗಳಿಗೆ ಟ್ಯಾಂಕರ್ ನೀರು ಪೂರೈಕೆಗೆ ಟೆಂಡರ್ ಕರೆದಿದ್ದು, ಶೀಘ್ರ ಕೆಲಸ ಪ್ರಾರಂಭಿಸಲಾಗುತ್ತದೆ. ನರೇಗಾ ಯೋಜನೆ ಅಡಿ ಕೆಲಸ ನೀಡಬೇಕು. ಸೂಕ್ತ ವ್ಯವಸ್ಥೆ ಮಾಡಬೇಕು ಎಂದರು.
ತಹಸೀಲ್ದಾರ್ ಸಂಜೀವಕುಮಾರ ದಾಸರ ಮಾತನಾಡಿದರು. ತಾಪಂ ಇಒ ಚಂದ್ರಶೇಖರ, ಕುಡಿಯುವ ನೀರು ಸರಬರಾಜು ಎಇಇ ಬಾಬುರಾವ ಜ್ಯೋತಿ, ನರೇಗಾ ಸಹಾಯಕ ಅಧಿಕಾರಿ ರಮೇಶ ಪಾಟೀಲ್, ಪಿಡಿಒಗಳಾದ ಈರಯ್ಯ ಹಿರೇಮಠ, ಸಾವಿತ್ರಿ ಮೇತ್ರಿ, ಮೇಘಾ ಕಲಶೆಟ್ಟಿ, ಮಹಾಂತೇಶ ಸಾಲಿಮಠ, ಪಾರ್ವತಿ ಪೂಜಾರಿ, ಮಹಾಂತೇಶ ಯಾಡಗಿ, ವಿದ್ಯಾಧರ ಕಾಂಬಳೆ, ಚಿದಾನಂದ ಆಲೆಗಾಂವ, ಆಖಂಡೆಪ್ಪ ಹುಗ್ಗಿ, ವಿದ್ಯಾರಾಣಿ ಸಿಂಪಿ ಇತರರಿದ್ದರು.