ಕುರುಬ ಸಮುದಾಯದ ಮುಖಂಡರ ಸಭೆ 
ಜಿಲ್ಲೆ

ಪ್ರಗತಿಯಲ್ಲಿ ಮೋದಿ ಸಾಧನೆ ಮೈಲಿಗಲ್ಲು


ವಿಜಯವಾಣಿ ಸುದ್ದಿಜಾಲ ದೇವನಹಳ್ಳಿ
ನರೇಂದ್ರ ಮೋದಿ ಅವರ ದೂರದೃಷ್ಟಿ ಯೋಜನೆಗಳಿಂದಾಗಿ ದೇಶ ಅಭಿವೃದ್ಧಿಯಲ್ಲಿ ಮೈಲುಗಲ್ಲು ಸಾಧಿಸಿದೆ. ಮುಂದಿನ ದಿನಗಳಲ್ಲಿ ದೇಶದ ಮತ್ತಷ್ಟು ಅಭಿವೃದ್ಧಿಗೆ ಮೋದಿ ಅವರನ್ನು ಬೆಂಬಲಿಸಬೇಕಿದೆ ಎಂದು ಮಾಜಿ ಸಚಿವ ಎಂಟಿಬಿ ನಾಗರಾಜ್ ಹೇಳಿದರು.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ತಾಲೂಕು ಕುರುಬ ಸಮುದಾಯದ ಮುಖಂಡರ ಸಭೆಯಲ್ಲಿ ಮಾತನಾಡಿದರು. ದಿನದ 24ಗಂಟೆ ದೇಶದ ಬಗ್ಗೆ ಚಿಂತನೆ ಮಾಡುವ ಪ್ರಧಾನಿ ಯಾರಾದರೂ ಇದ್ದರೆ ಅದು ನರೇಂದ್ರ ಮೋದಿ ಮಾತ್ರ. ನರೇಂದ್ರ ಮೋದಿ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಯುವಕರೂ ನಾಚುವಂತೆ ಮತಪ್ರಚಾರ ಮಾಡುತ್ತಿದ್ದಾರೆ. ಅವರಲ್ಲಿನ ಇಚ್ಛಾಶಕ್ತಿ ಎಲ್ಲ ಕಾರ್ಯಕರ್ತರಿಗೂ ಸ್ಫೂರ್ತಿಯಾಗಿದೆ ಎಂದರು.
10 ವರ್ಷಗಳಲ್ಲಿ ಭಾರತ ಕ್ಷಿಪ್ರ ಅಭಿವೃದ್ಧಿ ಕಂಡಿದೆ. ಡಿಜಿಟಲ್ ಇಂಡಿಯಾದ ಉಪಕ್ರಮವು ನಾಗರಿಕರ ಜೀವನವನ್ನು ತ್ವರಿತವಾಗಿ ಪರಿವರ್ತಿಸಿದೆ. ಈ ಹಿಂದೆ ದೇಶ ಕಳಪೆ ರಸ್ತೆ ಸೌಲಭ್ಯಗಳಿಗೆ ಹೆಸರುವಾಸಿಯಾಗಿತ್ತು. ಈಗ ಅದನ್ನು ಎಕ್ಸ್‌ಪ್ರೆಸ್‌ವೇಯಾಗಿ ಬದಲಾಯಿಸಲಾಗಿದೆ. ಮುಂಬರುವ ದಿನಗಳಲ್ಲಿ ಭಾರತದ ಎಕ್ಸ್‌ಪ್ರೆಸ್ ವೇಗಳು, ಜಲಮಾರ್ಗಗಳು ಮತ್ತು ವಾಯುಮಾರ್ಗ ನಿರ್ಮಿಸುವ ಮೂಲಕ ಜಗತ್ತೇ ನಿಬ್ಬೆರಗಾಗುವಂತೆ ಬೆಳೆಯಲಿದೆ. ಇದೆಲ್ಲ ಸಾಕಾರವಾಗಲು ಮತ್ತೊಮ್ಮೆ ಮೋದಿ ಪ್ರಧಾನಿಯಾಗಬೇಕು ಎಂದರು.
ಬಿಜೆಪಿ ಸಂಕಲ್ಪ ಪತ್ರದಲ್ಲಿ ನಮ್ಮ ಶ್ರೀಮಂತ ಕನ್ನಡ ಭಾಷೆ ಸೇರಿ ಪ್ರಾದೇಶಿಕ ಭಾಷೆಗಳನ್ನು ಉತ್ತೇಜಿಸುವುದಾಗಿ ಭರವಸೆ ನೀಡಿದೆ. ಪ್ರವಾಸೋದ್ಯಮ ಮತ್ತು ಉದ್ಯೋಗವನ್ನು ಹೆಚ್ಚಿಸಲು ಮೈಸೂರು, ಹಂಪಿ ಮತ್ತು ಬಾದಾಮಿಯಂತಹ ಪಾರಂಪರಿಕ ತಾಣಗಳ ಅಭಿವೃದ್ಧಿಗೆ ಕೆಲಸ ಮಾಡುತ್ತದೆ ಎಂದರು. ದೇಶದ ಭದ್ರತೆ, ಏಕತೆ, ಒಂದು ದೇಶ ಒಂದು ಚುನಾವಣೆಗಾಗಿ ಬಿಜೆಪಿ ಬೆಂಬಲಿಸಿ ಎಂದು ಕರೆ ನೀಡಿದರು.