ಜಿಲ್ಲೆ

ಸಕ್ಕರೆನಾಡಲ್ಲಿ ಜೋರಾಯ್ತು ಬಾಡೂಟದ ಗದ್ದಲ: ಸಾಮಾಜಿಕ ಜಾಲತಾಣದಲ್ಲಿ ಚರ್ಚೆ

ಮಂಡ್ಯ: ನಗರದ ಹೊರವಲಯದಲ್ಲಿ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾಂಸಾಹಾರ ನೀಡುವ ವಿಚಾರ ಸಾಕಷ್ಟು ಸದ್ದು ಮಾಡುತ್ತಿದೆ. ಈ ನಡುವೆ ವಿವಿಧ ಸಂಘಟನೆಗಳನ್ನೊಳಗೊಂಡ ಬಾಡೂಟದ ಬಳಗವನ್ನೇ ಪ್ರಾರಂಭಿಸಿದರೆ, ಸಾಮಾಜಿಕ ಜಾಲತಾಣದಲ್ಲಿ ಪರ ಮತ್ತು ವಿರೋಧದ ಚರ್ಚೆ ನಡೆಯುತ್ತಿದೆ.

ಮಾಂಸಾಹಾರ ನೀಡುವ ವಿಚಾರ ವಿವಾದದ ಸ್ವರೂಪ ತೆಗೆದುಕೊಳ್ಳುತ್ತಿದೆ. ಈ ನಡುವೆ ಬಾಡೂಟದ ಬಳಗದ ಸದಸ್ಯರು, ಸಮ್ಮೇಳನದಲ್ಲಿ ಕಡ್ಡಾಯವಾಗಿ ಮಾಂಸದೂಟ ನೀಡಬೇಕು ಹಾಗೂ ವಾಣಿಜ್ಯ ಮಳಿಗೆಗಳಲ್ಲಿ ಮಾಂಸಹಾರಿ ತಿನಿಸುಗಳ ಮಾರಾಟಕ್ಕೆ ಅವಕಾಶ ಕಲ್ಪಿಸಬೇಕೆಂದು ಒತ್ತಾಯಿಸಿತು.

ಜಿಲ್ಲಾಧಿಕಾರಿ ಕಚೇರಿ ಮುಂಭಾಗದ ಕಾವೇರಿ ಉದ್ಯಾನದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಹಲವು ಹೊತ್ತು ಚರ್ಚೆ ನಡೆಯಿತು. ಸಮ್ಮೇಳನ ಹೊರಡಿಸಿರುವ ನಿಬಂಧನೆಗಳಲ್ಲಿ ಬಾಡೂಟವನ್ನು ನಿಷೇದಿಸಲಾಗಿದೆ ಎಂಬ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ ಮುಖಂಡರು, ಮಾಂಸಹಾರ ಅಪರಾಧವೆಂಬಂತೆ ಬಿಂಬಿಸಲಾಗಿದೆ. ಈ ಮೂಲಕ ಬಹುಜನರ ಮಾಂಸಹಾರಿ ಸೇವನೆಗೆ ಅಪಮಾನ ಮಾಡಿದಂತಾಗಿದೆ. ಆಹಾರದ ಹಕ್ಕನ್ನು ಅವಮಾನಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವಿವಿಧ ಜಿಲ್ಲೆ, ಹೊರ ರಾಜ್ಯಗಳಿಂದ ಆಗಮಿಸುವ ಸಾಹಿತ್ಯ ಪ್ರಿಯರಿಗೆ ಈಗಾಗಲೇ ಉತ್ತರ ಮತ್ತು ದಕ್ಷಿಣ ಕರ್ನಾಟಕ ಶೈಲಿಯ ಆಹಾರವನ್ನು ಉಣಬಡಿಸಲು ಆಹಾರ ಸಮಿತಿ ನಿರ್ಧರಿಸಿದೆ. ಆದರೆ, ಮಂಡ್ಯ ನೆಲದ ಆಹಾರ ಸಂಸ್ಕೃತಿಯಾದ ಮಾಂಸಹಾರ ಸೇವನೆಗೆ ಅವಕಾಶ ನೀಡದಿರುವುದು ಸರಿಯಲ್ಲ. ಅಲ್ಲದೆ, ಮಾಂಸಹಾರ ಸೇವನೆಯನ್ನು ಕೀಳಾಗಿ ಕಾಣುತ್ತಿರುವುದು ಒಪ್ಪುವಂತದ್ದಲ್ಲ. ಈ ಕಾರಣದಿಂದ ಸಮ್ಮೇಳನದಲ್ಲಿ ಕಡ್ಡಾಯವಾಗಿ ಬಾಡೂಟ ವ್ಯವಸ್ಥೆ ಮಾಡಬೇಕೆಂದು ಆಗ್ರಹಿಸಿದರು.

ಇದೂವರೆಗೂ ನಡೆದಿರುವ ಎಲ್ಲ ಸಮ್ಮೇಳನಗಳಲ್ಲೂ ಸಸ್ಯಹಾರವನ್ನು ಮಾತ್ರವೇ ನೀಡಲಾಗುತ್ತಿದ್ದು, ಆಯಾ ನೆಲದ ಸಂಸ್ಕೃತಿಗೆ ಅನುಗುಣವಾಗಿ ಆಹಾರವನ್ನು ಕೊಡಲಾಗಿದೆ. ಅದೇ ಪರಂಪರೆಯನ್ನು ಮಂಡ್ಯದಲ್ಲೂ ಮುಂದುವರಿಸುವುದಾಗಿ ಹೇಳುತ್ತಲೇ ಬಹುಜನರ ಆಹಾರ ಸಂಸ್ಕೃತಿಯಾದ ಮಾಂಸಹಾರ ಸೇವನೆಗೆ ತಡೆಯುಂಟುಮಾಡುವ ಅಥವಾ ಸಮ್ಮೇಳನಗಳಲ್ಲಿ ಮಾಂಸಹಾರ ಸೇವನೆಗೆ ಅವಕಾಶ ನೀಡದಂತೆ ಮಡಿವಂತಿಕೆಯನ್ನು ಪಾಲಿಸುವ ಒಳತಂತ್ರಗಳು ನಡೆಯುತ್ತಿದೆ. ಮಂಡ್ಯ ಭಾಗದ ಮುದ್ದೆ ಮತ್ತು ನಾಟಿಕೋಳಿ ಸಾರಿಗೆ ವಿಶೇಷ ಮಾನ್ಯತೆ ಇದ್ದು, ಈ ಆಹಾರ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಉದ್ದೇಶದಿಂದ ಸಮ್ಮೇಳನದಲ್ಲಿ ಮಾಂಸಹಾರದ ಕಡ್ಡಾಯವನ್ನು ಒತ್ತಾಯಿಸುತ್ತಿದ್ದೇವೆ ವಿನಃ ಇದರಲ್ಲಿ ಸಸ್ಯಹಾರಿಗಳನ್ನು ಗುರಿಯಾಗಿಸುವ ಯಾವುದೇ ಉದ್ದೇಶವಿಲ್ಲ. ಅಲ್ಲದೆ, ಸಸ್ಯಹಾರಿಗಳಿಗೆ ಪ್ರಿಯವಾದ ಎಲ್ಲ ಬಗೆಯ ಭೋಜನಗಳನ್ನು ಸವಿಯಲು ಅವರಿಗೆ ಪ್ರತ್ಯೇಕ ಅವಕಾಶವಿರುವುದರಿಂದ ಮಾಂಸಪ್ರಿಯರಿಗೂ ಸಮ್ಮೇಳನ ಸಮಾನ ಆಧ್ಯತೆ ನೀಡಬೇಕೆಂದು ಬಳಗದ ಸದಸ್ಯರು ಒತ್ತಾಯಿಸಿದರು.

ಈಗಾಗಲೇ ಈ ಬಗ್ಗೆ ಜಿಲ್ಲಾಡಳಿತದ ಮತ್ತು ಸಮ್ಮೇಳನದ ಮುಖ್ಯಸ್ಥರ ಗಮನ ಸೆಳೆಯಲಾಗಿದ್ದು, ಡಿ.9ರಂದು ಜಿಲ್ಲಾಧಿಕಾರಿ ಭೇಟಿ ಮಾಡಿ ಮನವಿ ಸಲ್ಲಿಸಲಾಗುವುದು. ಆಹಾರ ಸಮಿತಿ ಅಧ್ಯಕ್ಷರು, ಸ್ವಾಗತ ಸಮಿತಿ ಅಧ್ಯಕ್ಷರು ಮತ್ತು ಪರಿಷತ್ ಅಧ್ಯಕ್ಷರ ಗಮನಕ್ಕೂ ತರಲಾಗುವುದು. ಒಂದು ವೇಳೆ ನಮ್ಮ ಒತ್ತಾಯಕ್ಕೆ ಸ್ಪಂದಿಸದಿದ್ದರೆ ಸ್ವಯಂಪ್ರೇರಿತವಾಗಿ ಸಮ್ಮೇಳನದ ಮೊದಲನೇ ದಿನ ಮೊಟ್ಟೆ ವಿತರಣೆ, ಎರಡನೇ ದಿನ ಮುದ್ದೆ ನಾಟಿ ಕೋಳಿ ಸಾರು, ಮೂರನೇ ದಿನ ಬಿರಿಯಾನಿಯನ್ನು ವಿತರಿಸುವ ಚಿಂತನೆಯನ್ನು ನಡೆಸಲಾಗಿದೆ. ಇದಕ್ಕೆ ಪೂರಕವಾಗಿ ಮನೆಗೊಂದು ಕೋಳಿಯನ್ನು ಸಂಗ್ರಹಿಸುವ ಅಭಿಯಾನವನ್ನು ನಡೆಸುವುದಾಗಿ ಮುಖಂಡರು ಎಚ್ಚರಿಕೆ ನೀಡಿದರು.

ವಿವಿಧ ಸಂಘಟನೆಗಳ ಮುಖಂಡರಾದ ಟಿ.ಎಲ್. ಕೃಷ್ಣೇಗೌಡ, ಸಿ.ಕುಮಾರಿ, ಟಿ.ಡಿ.ನಾಗರಾಜು, ಸಿ.ಎಂ.ದ್ಯಾವಪ್ಪ, ಸಿ.ಆರ್.ರಮೇಶ್, ಎಲ್.ಸಂದೇಶ್, ಎಚ್.ಡಿ.ಜಯರಾಂ, ಎಂ.ಬಿ. ನಾಗಣ್ಣಗೌಡ, ಲಕ್ಷ್ಮಣ್ ಚೀರನಹಳ್ಳಿ, ಶಂಕರಲಿಂಗೇಗೌಡ, ಲಂಕೇಶ್, ಕೀಲಾರ ಸುರೇಶ, ಕೀಲಾರ ಕೃಷ್ಣೇಗೌಡ, ಟಿ.ಯಶ್ವಂತ್, ಸುಂಡಹಳ್ಳಿ ಮಂಜುನಾಥ್, ಚಂದಗಾಲು ವಿಜಯಕುಮಾರ್, ಸಂತೋಷ್, ನರಸಿಂಹಮೂರ್ತಿ, ಜಿ.ಎನ್. ಕೆಂಪರಾಜು, ಶಿವರಾಂ ಇತರರಿದ್ದರು.