ಜಿಲ್ಲೆ

ಪಶು ಚಿಕಿತ್ಸಾಲಯ ಮುಚ್ಚುವ ಪ್ರಯತ್ನ ಖಂಡನೀಯ

ಉಡುಪಿ: ರಾಜ್ಯ ಸರ್ಕಾರ ಜಿಲ್ಲೆಯ ಹೈನುಗಾರರ ಅಭಿಪ್ರಾಯ ಪಡೆಯದೇ 2019ನೇ ಸಾಲಿನ ಪಶುಗಣತಿ ಆಧಾರವಾಗಿ ಇಟ್ಟುಕೊಂಡು ಪಶು ಚಿಕಿತ್ಸಾಲಯಗಳನ್ನು ಮುಚ್ಚಲು ಮುಂದಾಗಿರುವುದು ಖಂಡನೀಯ. ಇದರಿಂದ ಬಡ ಹೈನುಗಾರರಿಗೆ ಸಮಸ್ಯೆ ಸೃಷ್ಟಿಯಾಗಿದೆ ಎಂದು ಶಾಸಕ ಯಶ್​ ಪಾಲ್​ ಸುವರ್ಣ ಹೇಳಿದ್ದಾರೆ.

ಮಂಗಳವಾರ ಬನ್ನಂಜೆ ಮಹಾಲಿಂಗೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಪಶು ಸಂಗೋಪನೆ ಇಲಾಖೆಯ ನೂತನ ನಿಯಮಾವಳಿಗಳ ಸಾಧಕ ಬಾಧಕಗಳ ಬಗ್ಗೆ ಹಾಲು ಉತ್ಪಾದಕರ ಸಹಕಾರ ಸಂಘಗಳ ಪ್ರತಿನಿಧಿಗಳ ಸಮಾಲೋಚನಾ ಸಭೆಯನ್ನುದ್ದೇಶಿಸಿ ಮಾತನಾಡಿದರು.

ರಾಜ್ಯ ಸರ್ಕಾರ 6 ತಿಂಗಳಿಂದ ಹಾಲಿನ ಪ್ರೋತ್ಸಾಹಧನವನ್ನು ಬಿಡುಗಡೆ ಮಾಡಿಲ್ಲ, ಹಸುಗಳಿಗೆ ಮಾರಣಾಂತಿಕ ಕಾಯಿಲೆ, ಹಸಿರು ಮೇವು, ನೀರಿನ ಕೊರತೆ ಮುಂತಾದ ಸಮಸ್ಯೆಗಳಿಂದ ಹೈನುಗಾರರು ಸಂಕಷ್ಟ ಎದುರಿಸುತ್ತಿದ್ದು, ಈಗಾಗಲೇ ಪಶುಸಂಗೋಪನಾ ಇಲಾಖೆ ಸಚಿವರಿಗೆ ಮನವಿ ಸಲ್ಲಿಸಲಾಗಿದೆ. ಸರ್ಕಾರ ಕೂಡಲೇ ಚಿಕಿತ್ಸಾಲಯ ಬಂದ್​ ಮಾಡುವ ನಿರ್ಧಾರವನ್ನು ಹಿಂಪಡೆಯುವಂತೆ ಆಗ್ರಹಿಸಿದರು.

ಸಭೆಯಲ್ಲಿ ಪಶು ಸಂಗೋಪನೆ ಇಲಾಖೆ ಉಪನಿರ್ದೇಶಕ ಡಾ. ರೆಡ್ಡಪ್ಪ, ಹಿರಿಯ ಪಶು ವೈದ್ಯಾಧಿಕಾರಿ ಡಾ. ಪ್ರಶಾಂತ್​ ಕುಮಾರ್​ ಶೆಟ್ಟಿ, ಡಾ. ಪ್ರದಿಪ್​, ದಕ್ಷಿಣ ಕನ್ನಡ ಹಾಲು ಒಕ್ಕೂಟದ ನಿರ್ದೇಶಕರಾದ ರವಿರಾಜ ಹೆಗ್ಡೆ, ಸಾಣೂರು ನರಸಿಂಹ ನಾಯಕ್​, ಬೋಳ ಸದಾಶಿವ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಒಕ್ಕೂಟದ ನಿರ್ದೇಶಕರಾದ ಕಮಾಲಾಕ್ಷ ಹೆಬ್ಬಾರ್​ ಸ್ವಾಗತಿಸಿ, ಶ್ಯಾಮ್​ ಪ್ರಸಾದ್​ ಭಟ್​ ನಿರೂಪಿಸಿದರು.