ಜಿಲ್ಲೆ

ಡಿ.5ರಂದು ಹಾಸನದಲ್ಲಿ ಸ್ವಾಭಿಮಾನಿ ಸಮಾವೇಶ: ಕುರುಬರ ಸಂಘದ ಜಿಲ್ಲಾಧ್ಯಕ್ಷ ಎಂ.ಎಲ್.ಸುರೇಶ್ ಮಾಹಿತಿ

ಮಂಡ್ಯ: ಅಹಿಂದ ಸಂಘಟನೆಗಳ ನೇತೃತ್ವದಲ್ಲಿ ಡಿ.5ರಂದು ಹಾಸನದಲ್ಲಿ ಸಿದ್ದರಾಮಯ್ಯ ಸ್ವಾಭಿಮಾನಿ ಸಮಾವೇಶ ಆಯೋಜಿಸಲಾಗಿದ್ದು, ಮಂಡ್ಯ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಬೇಕು ಎಂದು ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಎಂ.ಎಲ್.ಸುರೇಶ್ ಮನವಿ ಮಾಡಿದರು.

ನಗರದ ಕನಕ ಭವನದಲ್ಲಿ ಅಹಿಂದ ಹಾಗೂ ಎಲ್ಲ ವರ್ಗದ ಮುಖಂಡರ ನೇತೃತ್ವದಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಮೈಸೂರು ವಿಭಾಗದ 6 ಜಿಲ್ಲೆಗಳ ಸಿದ್ದರಾಮಯ್ಯ ಅಭಿಮಾನಿಗಳು, ಅಹಿಂದ ಸಂಘಟನೆಗಳ ಕಾರ್ಯಕರ್ತರು, ಮುಖಂಡರು ಸೇರಿದಂತೆ ಲಕ್ಷಾಂತರ ಜನರು ಸಮಾವೇಶದಲ್ಲಿ ಭಾಗವಹಿಸುತ್ತಿದ್ದಾರೆ. ಮಂಡ್ಯ ಜಿಲ್ಲೆಯಿಂದ 50 ಸಾವಿರ ಜನರು ಪಾಲ್ಗೊಂಡು ಶಕ್ತಿ ಪ್ರದರ್ಶನದ ಮೂಲಕ ಅಹಿಂದ ಸಮುದಾಯದ ಸ್ವಾಭಿಮಾನದ ಸಂದೇಶ ಸಾರಬೇಕು ಎಂದರು.

15 ಬಾರಿ ಬಜೆಟ್ ಮಂಡಿಸಿದ ಸಿದ್ದರಾಮಯ್ಯ ಹಣ, ಆಸ್ತಿಗಾಗಿ ಆಸೆಪಟ್ಟವರಲ್ಲ. ಬಡವರಿಗೆ ಸಹಾಯ ಮಾಡಿದ್ದಾರೆ. ಸಿದ್ದರಾಮಯ್ಯ ಅವರು ಕಳಂಕಿತರಲ್ಲ. ಸಾಮಾಜಿಕ ನ್ಯಾಯದ ಹರಿಕಾರರು ಎಂದು ರಾಜ್ಯಕ್ಕೆ ತಿಳಿಸಬೇಕು. ಜಿಲ್ಲಾದ್ಯಂತ ಮುಖಂಡರು ಪ್ರವಾಸ ಮಾಡಿ ಕರಪತ್ರಗಳನ್ನು ಹಂಚಿ ಸಮಾವೇಶದ ಉದ್ದೇಶವನ್ನು ಜನರಿಗೆ ತಿಳಿಸಬೇಕು. ಸಮಾವೇಶದ ಬರುವ ಜನರಿಗೆ ವಾಹನದ ವ್ಯವಸ್ಥೆ, ಊಟದ ವ್ಯವಸ್ಥೆಯನ್ನು ಏರ್ಪಡಿಸಲಾಗಿದೆ ಎಂದು ಹೇಳಿದರು.

ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ಎಲ್.ಸಂದೇಶ್ ಮಾತನಾಡಿ, ಜಾತಿವಾದಿ ಮತ್ತು ಕೋಮುವಾದಿಗಳನ್ನು ಸದೆ ಬಡಿಯಬೇಕಾದರೆ ಸಿದ್ದರಾಮಯ್ಯ ಅವರನ್ನು ಅಸ್ಮಿತೆಯಾಗಿ ತೆಗೆದುಕೊಂಡು ಹೋಗಬೇಕು. ಹಾಸನದಲ್ಲಿ ನಡೆಯುವ ಸ್ವಾಭಿಮಾನಿ ಸಮಾವೇಶದ ಬಗ್ಗೆ ಜಿಲ್ಲೆಯಲ್ಲಿ ಪ್ರತಿ ಮನೆಗೆ ತಿಳಿಸಿ ಜಾಗೃತಿ ಮೂಡಿಸಿ. ಜಾತ್ಯಾತೀತವಾಗಿರುವ ವ್ಯಕ್ತಿ ಸಿದ್ದರಾಮಯ್ಯ ಅವರು ಮಾನವತವಾದಿ ಎಂದು ಹೇಳಿದರು.

ದಸಂಸ ಮುಖಂಡ ಗುರುಪ್ರಸಾದ್ ಕೆರಗೋಡು, ಜಿಲ್ಲಾ ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ಕೆ.ಎಚ್.ನಾಗರಾಜು, ರಾಜ್ಯ ಕುರುಬರ ಸಂಘದ ಮಾಜಿ ಅಧ್ಯಕ್ಷ ಸುಬ್ಬಣ್ಣ, ಬಸವಯ್ಯ, ಅಮ್ಜದ್ ಪಾಷ, ಪ್ರಫುಲ್ಲಚಂದ್ರ, ಡಿ.ಎಲ್.ಶಂಕರಲಿಂಗೇಗೌಡ, ಎನ್. ದೊಡ್ಡಯ್ಯ, ಮಹೇಶ್, ಸಾತನೂರು ರಾಜು, ಶ್ರೀನಿವಾಸ್, ಎನ್.ಸೋಮಶೇಖರ್, ಹನುಮಂತಯ್ಯ, ವನೇಶ್, ನಾಗರತ್ನಾ, ವೀಣಾ ಶಂಕರ್, ಸಿ.ಡಿ.ವಿಜಯಕುಮಾರ್, ಅಶೋಕ್, ಕೃಷ್ಣ ಇತರರಿದ್ದರು.