ಗದಗ: ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ನದಿ ಹಾಗೂ ಹಳ್ಳಗಳ ಪಾತ್ರದಲ್ಲಿ ವಾಸಿಸುವ ಜನರು ಸುರಕ್ಷಿತ ತಾಣಗಳಿಗೆ ಸ್ಥಳಾಂತರವಾಗಬೇಕು. ಅಧಿಕಾರಿಗಳು ಕೇಂದ್ರ ಸ್ಥಳದಲ್ಲಿಯೇ ಇದ್ದು ಪರಿಸ್ಥಿತಿಯನ್ನು ಸಮರ್ಪಕವಾಗಿ ನಿರ್ವಹಿಸುವಂತೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಅವರು ತಿಳಿಸಿದ್ದಾರೆ.
ಜನ-ಜಾನುವಾರುಗಳು ಜೀವ ಹಾನಿ ಆಗದಂತೆ ಮುಂಜಾಗೃತೆ ಕ್ರಮಗಳನ್ನು ವಹಿಸಬೇಕು. ತಗ್ಗು ಪ್ರದೇಶದಲ್ಲಿ ವಾಸಿಸುತ್ತಿರುವ ಜನ-ಜಾನುವಾರುಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕು. ಜಿಲ್ಲೆಯಲ್ಲಿ ಯಾವುದೇ ಕಾರಣಕ್ಕೂ ಮಳೆ ಹಾಗೂ ಪ್ರವಾಹದಿಂದ ಜನ-ಜಾನುವಾರು ಜೀವ ಹಾನಿ ಆಗದಂತೆ ನಿಗಾವಹಿಸಬೇಕು ಎಂದು ತಿಳಿಸಿರುತ್ತಾರೆ.
ಶಿಥಿಲಾವಸ್ಥೆಯಲ್ಲಿರುವ ಮಣ್ಣಿನ ಮನೆಯಲ್ಲಿ ವಾಸಿಸುವ ಕುಟುಂಬಗಳನ್ನು ಗುರುತಿಸಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಕಾರ್ಯ ನಡೆಯಬೇಕು. ವಿಧ್ಯುತ್ ಕಂಬಗಳಿಗೆ ಜಾನುವಾರುಗಳನ್ನು ಕಟ್ಟದಂತೆ ಹಾಗೂ ಜನರು ಸ್ಪರ್ಶಿಸದಂತೆ ಜಾಗೃತಿ ಮೂಡಿಸಬೇಕು. ಅಗತ್ಯ ಬಿದ್ದಲ್ಲಿ ಕಾಳಜಿ ಕೇಂದ್ರಗಳನ್ನು ತೆರೆದು ಜನ ಜಾನುವಾರುಗಳನ್ನು ಸ್ಥಳಾಂತರಿಸಿ ಸಂಭವನೀಯ ಜೀವಹಾನಿ ತಡೆಗಟ್ಟಬೇಕು. ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಮಳೆ ನೀರು ಸರಾಗವಾಗಿ ಹರಿದು ಹೋಗಲು ಎಲ್ಲ ಚರಂಡಿ ಹಾಗೂ ರಾಜ ಕಾಲುವೆಗಳನ್ನು ಸ್ವಚ್ಛಗೊಳಿಸಲು ಸ್ಥಳಿಯ ಆಡಳಿತಕ್ಕೆ ಸೂಚಿಸಲಾಗಿದೆ. ಒಟ್ಟಾರೆಯಾಗಿ ಎಲ್ಲ ಅಧಿಕಾರಿ ಸಿಬ್ಬಂದಿಗಳೆಲ್ಲರೂ ನಿರಂತರವಾಗಿ ಸಮನ್ವಯ ಸಾಧಿಸುವದರ ಮೂಲಕ ಎದುರಾಗಬಹುದಾದ ಪ್ರವಾಹ ಪರಿಸ್ಥಿತಿಯನ್ನು ಸಮರ್ಪಕವಾಗಿ ನಿಭಾಯಿಸಲು ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಅತೀವೃಷ್ಠಿ ನಿರ್ವಹಣೆಗಾಗಿ ಸಿದ್ಧತೆ: ಜಿಲ್ಲೆಯಲ್ಲಿ ಪ್ರವಾಹ ಸಂಭವಿಸಬಹುದಾದ 25 ಗ್ರಾಮ ಪಂಚಾಯತಗಳಲ್ಲಿ ವಿಪತ್ತು ನಿರ್ವಹಣಾ ಯೋಜನೆ ತಯಾರಿಸಲಾಗಿದೆ. ಪ್ರವಾಹ ಪರಿಸ್ಥಿತಿ ನಿರ್ವಹಣೆಗಾಗಿ ಜಿಲ್ಲಾ ಹಾಗೂ ತಾಲೂಕು ಮಟ್ಟದ ನೋಡೆಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಜಿಲ್ಲೆಯಲ್ಲಿ 56 ಕಾಳಜಿ ಕೇಂದ್ರಗಳನ್ನು ಗುರುತಿಸಲಾಗಿದ್ದು ಪ್ರತಿ ಕೇಂದ್ರಕ್ಕೂ ಪ್ರತ್ಯೇಕ ನೋಡೆಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಬೆಳೆ ಹಾಗೂ ಮನೆ ಹಾನಿ ಸಂಭವಿಸಿದ್ದಲ್ಲಿ ಸಮೀಕ್ಷೆಗಾಗಿ ಪ್ರತ್ಯೇಕ ತಂಡಗಳನ್ನು ರಚಿಸಲಾಗಿದೆ.
ಮಳೆ ವಿವರ: ಜುಲೈ 1 ರಿಂದ ಈವರೆಗೆ ಜಿಲ್ಲೆಯಲ್ಲಿ 91 ಮೀ.ಮೀ. ಮಳೆಯಾಗಿದ್ದು ವಾಡಿಕೆ ಮಳೆ 51 ಮೀ.ಮೀ ಇದ್ದು ಶೇ. 79 ರಷ್ಟು ಹೆಚ್ಚಿಗೆ ಮಳೆಯಾಗಿದೆ. ಮಳೆಯಿಂದಾಗಿ ಜಿಲ್ಲೆಯಲ್ಲಿ 24 ಮನೆಗಳು ಭಾಗಶ: ಹಾನಿಗಿಡಾಗಿವೆ.
ಜಲಾಶಯ ಮಟ್ಟ: ನವೀಲು ತೀರ್ಥ ಜಲಾಶಯ 37.785 ಟಿ.ಎಂ.ಸಿ. ಸಾಮಥ್ರ್ಯ ಹೊಂದಿದ್ದು ಈವರೆಗೆ 9.314 ಟಿ.ಎಂ.ಸಿ. ನೀರು ಸಂಗ್ರವಾಗಿದೆ. ನೀರಿನ ಒಳ ಹರಿವು 21247 ಕ್ಯೂಸೆಕ್ಸ ಇದ್ದು ಹೊರ ಹರಿವು 194 ಕ್ಯೂಸೆಕ್ಸ ಇದೆ. ಭದ್ರಾ ಜಲಾಶಯ 71.535 ಟಿ.ಎಂ.ಸಿ. ಸಾಮಥ್ರ್ಯ ಹೊಂದಿದ್ದು ಈ ವರೆಗೆ 29.653 ಟಿ.ಎಂ.ಸಿ. ನೀರು ಸಂಗ್ರಹವಾಗಿದ್ದು ನೀರಿನ ಒಳ ಹರಿವು 39348 ಕ್ಯೂಸೆಕ್ಸ ಇದ್ದು ಹೊರ ಹರಿವು 167 ಕ್ಯೂಸೆಕ್ಸ ಇದೆ.
ಬಿತ್ತನೆ ಪ್ರದೇಶದ ವಿವರ: ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಲ್ಲಿ 309810 ಹೆಕ್ಟೆರ ಪ್ರದೇಶದಲ್ಲಿ ಬಿತ್ತನೆಯ ಗುರಿ ಹೊಂದಲಾಗಿದ್ದು ಈ ಪೈಕಿ 101905 ಹೆಕ್ಟೆರ ಪ್ರದೇಶದಲ್ಲಿ ಬಿತ್ತನೆಯಾಗಿದ್ದು ಶೇ. 32.89 ರಷು ಬಿತ್ತನೆಯಾಗಿದೆ. ಅದೇ ರೀತಿ 60575 ಹೆಕ್ಟೆರ ಪ್ರದೇಶದಲ್ಲಿ ತೋಟಗಾರಿಕೆ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿತ್ತು. ಈ ಪೈಕಿ 14294 ಹೆಕ್ಟೆರ ಪ್ರದೇಶದಲ್ಲಿ ಬಿತ್ತನೆಯಾಗಿದ್ದು ಶೇ. 23.60 ರಷ್ಟು ಗುರಿ ಸಾಧನೆಯಾಗಿದೆ.