ಜಿಲ್ಲೆ

ಮೈಸೂರಿನಲ್ಲಿ ‘ಮಿಷನ್ ಇಂದ್ರಧನುಷ್’ ಅಭಿಯಾನ ಯಶಸ್ವಿಗೆ ಸಭೆ

ಮೈಸೂರು: ನಗರದಲ್ಲಿ ಪರಿಣಾಮಕಾರಿಯಾಗಿ ‘ತೀವ್ರತರವಾದ ಮಿಷನ್ ಇಂದ್ರಧನುಷ್’ ಅಭಿಯಾನ ಹಮ್ಮಿಕೊಳ್ಳಲು ಆರೋಗ್ಯ ಇಲಾಖೆ ಹಾಗೂ ಪಾಲಿಕೆ ಅಧಿಕಾರಿಗಳ ಸಭೆ ಗುರುಮರ ಮೇಯರ್ ಶಿವಕುಮಾರ್ ಅಧ್ಯಕ್ಷತೆಯಲ್ಲಿ ಪಾಲಿಕೆಯ ಜಯಚಾಮರಾಜೇಂದ್ರ ಒಡೆಯರ್ ಸಭಾಂಗಣದಲ್ಲಿ ನಡೆಯಿತು.

ಪ್ರಸಕ್ತ ವರ್ಷ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮಡಿಯಲ್ಲಿ ನಿಯಮಿತವಾಗಿ ನೀಡಲಾಗುವ ಲಸಿಕೆಗಳಿಂದ ವಂಚಿತರಾದ ಗರ್ಭಿಣಿಯರು, 0-5 ವರ್ಷದ ಮಕ್ಕಳಿಗೆ ತೀವ್ರತರವಾದ ಮಿಷನ್ ಇಂದ್ರಧನುಷ್ ಅಭಿಯಾನ ಹಮ್ಮಿಕೊಂಡು ಲಸಿಕೆ ನೀಡಲಾಗುವುದು ಎಂದು ಡಿಎಚ್‌ಒ ಡಾ.ಪಿ.ಸಿ. ಕುಮಾರಸ್ವಾಮಿ ತಿಳಿಸಿದರು.

ವಿಶೇಷವಾಗಿ ದಢಾರ, ರುಬೆಲ್ಲಾ ಲಸಿಕಾಕರಣ, ಪಿಸಿವಿ ಲಸಿಕಾಕರಣ ಮತ್ತು ಇತ್ತೀಚೆಗೆ 3ನೇ ಡೋಸ್‌ಆಗಿ ಸೇರ್ಪಡೆಗೊಂಡಿರುವ ಎಫ್‌ಐಪಿವಿ ಲಸಿಕಾಕರಣದ ಪ್ರಗತಿ ಹೆಚ್ಚಿಸುವ ಸಲುವಾಗಿ ನಗರದಲ್ಲಿ ಮೂರು ಸುತ್ತುಗಳಲ್ಲಿ ಅಭಿಯಾನದ ಮೂಲಕ ಲಸಿಕೆ ನೀಡಲಾ ಗುವುದು. ಆ.7 ರಿಂದ 12ರವರೆಗೆ ಮೊದಲ ಸುತ್ತಿನಲ್ಲಿ ಲಸಿಕೆ ನೀಡಲಾಗುವುದು. ನಂತರ ಸೆಪ್ಟೆಂಬರ್ 11 ರಿಂದ 16ರವರೆಗೆ 2ನೇ ಸುತ್ತು, ಅಕ್ಟೋಬರ್ 9 ರಿಂದ 14ರವರೆಗೆ ಮೂರನೇ ಸುತ್ತಿನಲ್ಲಿ ಲಸಿಕೆ ನೀಡಲಾಗುವುದು ಎಂದರು.

ಈ ಮೂರು ಸುತ್ತುಗಳಲ್ಲಿ ನಡೆಯುವ ಅಭಿಯಾನದಲ್ಲಿ ಲಸಿಕೆಯಿಂದ ವಂಚಿತರಾದ ಗರ್ಭಿಣಿಯರು ಹಾಗೂ 0-5 ವರ್ಷದ ಮಕ್ಕಳನ್ನು ಯು-ವಿನ್ ಪೋರ್ಟಲ್ ಮೂಲಕ ನೋಂದಾಯಿಸಿಕೊಂಡು ಲಸಿಕಾಕರಣ ನಡೆಸಲಾಗುವುದು. ಈ ಅಭಿಯಾನ ಪ್ರಾರಂಭಗೊಳ್ಳುವ ಮುನ್ನ ಹೆಡ್ ಕೌಂಟ್ ಸಮೀಕ್ಷೆ ನಡೆಸಲಾಗುವುದು. ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಮಾರ್ಗಸೂಚಿಯನ್ವಯ ತರಬೇತಿ ನಡೆಸಲಾಗುವುದು ಎಂದರು.

ನಗರದಲ್ಲಿ ಲಸಿಕಾ ಅಭಿಯಾನವನ್ನು ಯಶಸ್ವಿಗೊಳಿಸಲು ಆರೋಗ್ಯ ಇಲಾಖೆ ಅಧಿಕಾರಿಗಳು ಪಾಲಿಕೆಯ ನೆರವು ಕೋರಿದರು. ಆರೋಗ್ಯ ಸಿಬ್ಬಂದಿಗೆ ತೆರಳಲು ವಾಹನ, ಮನೆ ಮನೆ ಪ್ರಚಾರಕ್ಕೆ ಅಗತ್ಯ ಸಹಕಾರ ನೀಡುವಂತೆ ಕೋರಿದರು. ಅಭಿಯಾನ ಯಶಸ್ವಿಗೊಳಿಸಲು ಪಾಲಿಕೆಯಿಂದ ಎಲ್ಲ ರೀತಿಯ ಸಹಕಾರವನ್ನು ನೀಡಲಾಗುವುದು ಎಂದು ಮೇಯರ್ ಶಿವಕುಮಾರ್ ಭರವಸೆ ನೀಡಿದರು. ಸಭೆಯಲ್ಲಿ ಆರೋಗ್ಯ ಇಲಾಖೆ ಆರ್‌ಸಿಎಚ್ ಅಧಿಕಾರಿ ಡಾ.ಜಯಂತ್, ಪಾಲಿಕೆ ಆರೋಗ್ಯಾಧಿಕಾರಿ ಡಾ.ಡಿ.ಜಿ.ನಾಗರಾಜ್ ಹಾಗೂ ಇತರರು ಇದ್ದರು.

ಏನಿದು ಅಭಿಯಾನ?

ಕೇಂದ್ರ ಸರ್ಕಾರ ಮಿಷನ್ ಇಂದ್ರಧನುಷ್ ಅಭಿಯಾನವನ್ನು 2014ರ ಡಿಸೆಂಬರ್ 25 ರಂದು ಆರಂಭಿಸಿತು. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದೆ. ಇಂದ್ರಧನುಷ್ ಎಂದರೆ ಇದು ಮಳೆಬಿಲ್ಲಿನ ಏಳು ಬಣ್ಣಗಳನ್ನು ಪ್ರತಿನಿಧಿಸುತ್ತದೆ. ಅಂದರೆ, ಮಕ್ಕಳಲ್ಲಿ ಕಾಣಿಸುವ ಅಪಾಯಕಾರಿ ಏಳು ರೋಗಗಳನ್ನು ಈ ಏಳು ಬಣ್ಣಗಳು ಪ್ರತಿನಿಧಿಸುತ್ತವೆ. ಒಣ ಕೆಮ್ಮು, ದಡಾರ, ಪೋಲಿಯೋ, ಡಿಫ್ತೀರಿಯಾ, ಹೆಪಟೆಟಿಸ್ ಬಿ, ಧನುರ್ವಾಯು ಮತ್ತು ಕ್ಷಯ ರೋಗದಿಂದ ಮಕ್ಕಳನ್ನು ರಕ್ಷಿಸುವುದು ಅಭಿಯಾನದ ಉದ್ದೇಶವಾಗಿದೆ.