ಮೈಸೂರು: ನಗರ ಪಾಲಿಕೆಯ ಜಯಚಾಮರಾಜೇಂದ್ರ ಒಡೆಯರ್ ಸಭಾಂಗಣದಲ್ಲಿ ಮಂಗಳವಾರ ಸಂಸದ ಪ್ರತಾಪ್ ಸಿಂಹ ಅಧ್ಯಕ್ಷತೆಯಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ವರ್ತುಲ ರಸ್ತೆಯ ಸ್ವಚ್ಛತೆಯ ಜವಾಬ್ದಾರಿಯನ್ನು ವಿವಿಧ ನಗರ ಸ್ಥಳೀಯ ಸಂಸ್ಥೆಗಳಿಗೆ ಹಂಚಿಕೆ ಮಾಡಲಾ ಯಿತು.
ವರ್ತುಲ ರಸ್ತೆಯ ಸ್ವಚ್ಛತೆಯನ್ನು ಯಾರು ನಿರ್ವಹಣೆ ಮಾಡಬೇಕು ಎಂಬ ಗೊಂದಲ ಹಲವಾರು ವರ್ಷಗಳಿಂದ ಮುಂದುವರೆ ದುಕೊಂಡು ಬಂದಿದ್ದು, ಈ ಗೊಂದಲಕ್ಕೆ ಇದೀಗ ತೆರೆ ಎಳೆಯಲಾಗಿದೆ. ವರ್ತುಲ ರಸ್ತೆಯ ಜೆಪಿನಗರ ರೈಲ್ವೆ ಅಂಡರ್‌ಪಾಸ್‌ನಿಂದ ತಿ.ನರಸೀಪುರ ಜಂಕ್ಷನ್‌ವರೆಗಿನ ಸ್ವಚ್ಛತೆಯ ಜವಾಬ್ದಾರಿಯನ್ನು ಕಡಗೊಳ ಪಟ್ಟಣ ಪಂಚಾಯಿತಿಗೆ ವಹಿಸಲಾಯಿತು.
ಅದೇ ರೀತಿ ತಿ.ನರಸೀಪುರ ಜಂಕ್ಷನ್‌ನಿಂದ ಮಣಿಪಾಲ್ ಆಸ್ಪತ್ರೆ ಜಂಕ್ಷನ್(ಬೆಂಗಳೂರು ರಸ್ತೆ)ವರೆಗೆ ನಗರ ಪಾಲಿಕೆಗೆ, ಮಣಿಪಾಲ ಆಸ್ಪತ್ರೆ ಜಂಕ್ಷನ್‌ನಿಂದ ಕೆಆರ್‌ಎಸ್ ರಸ್ತೆ ಜಂಕ್ಷನ್‌ವರೆಗೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ, ತಾಲೂಕು ಪಂಚಾಯಿತಿ ಹಾಗೂ ಸ್ಥಳೀಯ ಗ್ರಾಮ ಪಂಚಾಯಿಗಳಿಗೆ, ಕೆಆರ್‌ಎಸ್ ರಸ್ತೆ ಜಂಕ್ಷನ್‌ನಿಂದ ವಿಜಯನಗರ 4ನೇ ಹಂತದ (ಕನ್ನಡ ವೃತ್ತ)ದವರೆಗೆ ಹೂಟಗಳ್ಳಿ ನಗರಸಭೆಗೆ, ವಿಜಯನಗರ 4ನೇ ಹಂತದಿಂದ ಆದಿತ್ಯ ವೃತ್ತದವರೆಗೆ ಬೋಗಾದಿ ಪಟ್ಟಣ ಪಂಚಾಯಿತಿಗೆ, ಆದಿತ್ಯ ವೃತ್ತದಿಂದ ಜೆಪಿನಗರ ರೈಲ್ವೆ ಅಂಡರ್‌ಪಾಸ್‌ವರೆಗೆ ಶ್ರೀರಾಂಪುರ ಪಟ್ಟಣ ಪಂಚಾಯಿತಿಗೆ ಸ್ವಚ್ಛತೆ ಜವಾಬ್ದಾರಿ ನೀಡಲಾಯಿತು.
ನಗರ ಸ್ಥಳೀಯ ಸಂಸ್ಥೆಗಳು ತಮಗೆ ವಹಿಸಿರುವ ಸ್ವಚ್ಛತೆ ಜವಾಬ್ದಾರಿಯನ್ನು ಸರಿಯಾಗಿ ಪಾಲನೆ ಮಾಡಬೇಕು. ಸ್ವಚ್ಛತೆಯ ಜತೆಗೆ ರಸ್ತೆಯ ಸೌಂದರ್ಯ ವೃದ್ಧಿಗೂ ಅಗತ್ಯ ಕ್ರಮ ವಹಿಸಬೇಕು. ಇದಕ್ಕೆ ವಿವಿಧ ಸಂಘ ಸಂಸ್ಥೆಗಳು, ದಾನಿಗಳ ನೆರವು ಪಡೆದು ರಸ್ತೆ ವಿಭಜಕದಲ್ಲಿ ಹೂ ಗಿಡಗಳನ್ನು ನೆಡುವ ಕಾರ್ಯ ಆಗಬೇಕು ಎಂದು ಸಲಹೆ ನೀಡಿದರು.
ಡೆಬ್ರಿಸ್ ತೆರವಿಗೆ ಸೂಚನೆ: ನಗರದ ವರ್ತುಲ ರಸ್ತೆ ಡೆಬ್ರಿಸ್ ತಾಣವಾಗಿ ಮಾರ್ಪಾಡು ಹೊಂದಿದ್ದು, ಸಾತಗಳ್ಳಿ-ಹಂಚ್ಯಾದಲ್ಲಿ ಕಟ್ಟಡ ತ್ಯಾಜ್ಯ ವಿಲೇವಾರಿಗೆ 9.20 ಎಕರೆ ಜಾಗ ಗುರುತಿಸಲಾಗಿದ್ದು, ಅಲ್ಲಿ ಕಟ್ಟಡ ತ್ಯಾಜ್ಯ ಘಟಕ ಪ್ರಾರಂಭವಾಗುವವರೆಗೆ ಪರ್ಯಾಯ ಜಾಗದಲ್ಲಿ ಕಟ್ಟಡ ತ್ಯಾಜ್ಯ ವಿಲೇವಾ ರಿಗೆ ಜಾಗ ಗುರುತಿಸುವಂತೆ ನಗರ ಪಾಲಿಕೆ ಆಯುಕ್ತರಿಗೆ ಸೂಚನೆ ನೀಡಿದರು. ನಗರ ಪಾಲಿಕೆಯು ಗುರುತಿಸುವ ಜಾಗದಲ್ಲಿಯೇ ಕಟ್ಟಡ ತ್ಯಾಜ್ಯ ವಿಲೇವಾರಿ ಮಾಡಬೇಕು, ವರ್ತುಲ ರಸ್ತೆಯಲ್ಲಿ ಹಾಗೂ ಎಲ್ಲೆಂದರಲ್ಲಿ ಕಟ್ಟಡ ತ್ಯಾಜ್ಯ ವಿಲೇವಾರಿ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದರು.
ನಗರದ ಸೂಯೇಜ್‌ಫಾರ್ಮ್‌ನಲ್ಲಿ ಬೆಟ್ಟದ ರೀತಿಯಲ್ಲಿ ಬೆಳೆದಿರುವ ತ್ಯಾಜ್ಯವನ್ನು ಬಯೋ ಮೈನಿಂಗ್ ಮೂಲಕ ವಿಲೇವಾರಿ ಮಾಡಲು ಟೆಂಡರ್ ಕರೆಯಲಾಗಿದ್ದು, ಟೆಂಡರ್‌ನಲ್ಲಿ ನಾಲ್ಕು ಮಂದಿ ಪಾಲ್ಗೊಂಡಿದ್ದರು. ಈ ಪೈಕಿ ಒಬ್ಬರ ಟೆಂಡರ್ ಅರ್ಹವಾಗಿದ್ದು, ಈ ಟೆಂಡರ್‌ಗೆ ಸರ್ಕಾರದ ಹಂತದಲ್ಲಿ ಒಪ್ಪಿಗೆ ದೊರೆತ ಕೂಡಲೇ ಹಳೆಯ ಘನತ್ಯಾಜ ವಿಲೇವಾರಿಗೆ ಕ್ರಮ ವಹಿಸಲಾಗುವುದು ಎಂದು ಹೇಳಿದರು.
ಸಭೆಯಲ್ಲಿ ನಗರ ಪಾಲಿಕೆ ಆಯುಕ್ತ ಅಸಾದ್ ಉರ್ ರೆಹಮಾನ್ ಷರೀಫ್, ಸೂಪರಿಂಟೆಂಡೆಂಟ್ ಇಂಜಿನಿಯರ್ ಸಿಂಧು ಹಾಗೂ ಇತರರು ಇದ್ದರು.