ಹೂವಿನಹಡಗಲಿ ನವಲಿ ಗ್ರಾಮದಲ್ಲಿ ಆಯೋಜಿಸಿದ್ದ ಸಾರ್ವಜನಿಕ ಕುಂದು ಕೊರತೆ ಸಭೆಯಲ್ಲಿ ಜಿಪಂ ಸಿಇಒ ನೋಂಗ್ಜಾಯ್ ಮೊಹಮ್ಮದ್ ಅಕ್ರಮ್ ಅಲಿ ಷಾ ಗ್ರಾಮಸ್ಥರ ಕುಂದು ಕೊರತೆ ಆಲಿಸಿದರು. ಜಿಪಂ ಯೋಜನಾಧಿಕಾರಿ ಅಶೋಕ ತೋಟದ, ಜಿಪಂ ಯೋಜನಾಧಿಕಾರಿ ಅಶೋಕ ತೋಟದ, ಗ್ರಾಪಂ ಅಧ್ಯಕ್ಷೆ ಸುಷ್ಮಿತಾ ಇತರರಿದ್ದರು. 
ಜಿಲ್ಲೆ

ಸಭೆ ನಡೆಸಿ ರಸ್ತೆ ನಿರ್ಮಿಸಲು ಸೂಕ್ತ ಕ್ರಮ

ಹೂವಿನಹಡಗಲಿ: ಇಲಾಖೆ ಅಂತದ ಸಮಸ್ಯೆಗಳನ್ನು ಕೂಡಲೇ ಪರಿಹರಿಸಲಾಗುವುದು ಎಂದು ಜಿಪಂ ಸಿಇಒ ನೋಂಗ್ಜಾಯ್ ಮೊಹಮ್ಮದ್ ಅಕ್ರಮ್ ಅಲಿ ಷಾ ಹೇಳಿದರು.

ತಾಲೂಕಿನ ನವಲಿ ಗ್ರಾಮದಲ್ಲಿ ಬುಧವಾರ ಆಯೋಜಿಸಿದ್ದ ಸಾರ್ವಜನಿಕ ಕುಂದು ಕೊರತೆ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸರ್ಕಾರದಿಂದ ಗ್ರಾಮೀಣ ಭಾಗದ ಜನರ ಅಭಿವೃದ್ಧಿಗೆ ಜಾರಿಯಾಗಿರುವ ಎಲ್ಲಾ ಯೋಜನೆಗಳನ್ನು ಅರ್ಹ ಫಲಾನುಭವಿಗಳು ಪಡೆಯಲು ಖುದ್ದು ಇಲಾಖೆಯ ಅಧಿಕಾರಿಗಳನ್ನು ಯಾವುದೇ ಭಯವಿಲ್ಲದೆ ಭೇಟಿಯಾಗಬಹುದು. ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡ, ಸ್ಮಶಾನಕ್ಕೆ ರಸ್ತೆ, ಹಳ್ಳದಲ್ಲಿ ಚೆಕ್‌ಡ್ಯಾಂ ನಿರ್ಮಾಣ ಸೇರಿದಂತೆ ವಸತಿರಹಿತರಿಗೆ ಮನೆ ನಿರ್ಮಾಣ ಮಾಡಲು ಮನವಿ ಸಲ್ಲಿಸಿದ್ದಾರೆ.

ಮನೆ ನಿರ್ಮಾಣ ಮಾಡಿಕೊಡಲು ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ಗ್ರಾಮದಲ್ಲಿನ ಸ್ಮಶಾನಕ್ಕೆ ರಸ್ತೆ ಸಂಬಂಧಿಸಿದಂತೆ ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಗ್ರಾಮಸ್ಥರು ಮತ್ತು ಭೂಮಿಯ ಮಾಲೀಕರ ಸಭೆ ನಡೆಸಿ ರಸ್ತೆ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಒಟ್ಟು 36 ಅರ್ಜಿ ಸಲ್ಲಿಕೆ: ಗ್ರಾಮದಲ್ಲಿನ ವಸತಿ ಹಾಗೂ ನಿವೇಶನ ರಹಿತರಿಗೆ ನಿವೇಶನ, ಮನೆ ನಿರ್ಮಾಣ ಮಾಡಿಕೊಡಲು ಮತ್ತು ಬೀದಿ ದೀಪ, ಸಿಸಿ ರಸ್ತೆ, ಪ್ರಾಥಮಿಕ ಆರೋಗ್ಯ ಕೇಂದ್ರ, ಕಂದಾಯ ಇಲಾಖೆಯ 36 ಅರ್ಜಿಗಳು ಸಾರ್ವಜನಿಕರಿಂದ ಸಲ್ಲಿಕೆಯಾದವು.

ನೀರು ಹರಿಯಲು ದಾರಿ ಕಲ್ಪಿಸಿ: ನವಲಿ ಗ್ರಾಮದ ಹೊಸಪ್ಲಾಟಿನಲ್ಲಿ ಚರಂಡಿಯ ನೀರು ಹೆಚ್ಚಿನ ಪ್ರಮಾಣದಲ್ಲಿ ನಿಲ್ಲುತ್ತಿದ್ದು ಇದರಿಂದ ಸಾಂಕ್ರಾಮಿಕ ರೋಗಗಳು ಹರಡುವ ಮೂಲಕ ಡೆಂಘೆ ಹೆಚ್ಚಾಗಿದೆ. ಕೂಡಲೇ ಅಲ್ಲಿಯ ನೀರು ತೆರವುಗೊಳಿಸಿ ನೀರು ಹರಿಯುವಂತೆ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.

ಜಿಪಂ ಉಪಕಾರ್ಯದರ್ಶಿ ಭೀಮಪ್ಪ ಲಾಳಿ, ಇಒ ಉಮೇಶ್ ಮೈನಹಳ್ಳಿ, ಗ್ರಾಪಂ ಪಿಡಿಒ ಮಹಮ್ಮದ್ ಗೌಸ್ ಬಿ ಹಾಗೂ ತಾಲೂಕು ಮಟ್ಟದ ಇತರೆ ಇಲಾಖೆ ಅಧಿಕಾರಿಗಳು ಹಾಗೂ ಗ್ರಾಪಂ ಸದಸ್ಯರು ಇತರರಿದ್ದರು.