ಸುಬ್ರಹ್ಮಣ್ಯ: ಕಸ್ತೂರಿ ರಂಗನ್ ವರದಿ ಜಾರಿಯಾದರೆ ರೈತರು ಕೃಷಿಭೂಮಿ ಕಳೆದುಕೊಂಡು ನಿರಾಶ್ರಿತರಾಗುವ ಭೀತಿ ಇದೆ. ಇದಕ್ಕೆ ಹೋರಾಟ ಅನಿವಾರ್ಯ. ಸರ್ಕಾರ ಈ ಯೋಜನೆಯನ್ನು ಬೇರೆ ಬೇರೆ ಹೆಸರುಗಳಿಂದ ಜಾರಿ ಮಾಡಲು ಹೊರಟಿದೆ. ಎಂದು ಮಲೆನಾಡು ಹಿತರಕ್ಷಣಾ ವೇದಿಕೆ ಸಂಚಾಲಕ ಕಿಶೋರ್ ಶಿರಾಡಿ ಹೇಳಿದರು.
ಹರಿಹರ ಪಲ್ಲತ್ತಡ್ಕದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸುಬ್ರಹ್ಮಣ್ಯ ವಲಯ ವತಿಯಿಂದ ಕಸ್ತೂರಿ ರಂಗನ್ ವರದಿ ಜಾರಿ ವಿರುದ್ಧ ನಡೆದ ಸಭೆಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. ಒಂದೆಡೆ ಪುಷ್ಪಗಿರಿ ವನ್ಯಧಾಮ, ಹುಲಿ ಸಂರಕ್ಷಣೆ, ದಿ.ಗ್ರೇಟರ್ ತಲಕಾವೇರಿ, ಪಶ್ಚಿಮ ಘಟ್ಟ ಸಂರಕ್ಷಣೆ ಎಂಬ ಹೆಸರುಗಳನಿಟ್ಟು ಕೃಷಿಭೂಮಿಯನ್ನು ಅರಣ್ಯೀಕರಣ ಮಾಡಲು ಹೊರಟಿದೆ. ಇದರಿಂದ ಜನರ ಬದುಕು ಬೀದಿ ಪಾಲಾಗುವುದು ನಿಶ್ಚಿತ. ಇದಕ್ಕಾಗಿ ನಾವೆಲ್ಲರೂ ಒಟ್ಟಾಗಿ ಮುಂದೆ ಹೋರಾಡಬೇಕಾದ ಅನಿವಾರ್ಯತೆ ಇದೆ. ನಮ್ಮ ಪ್ರಮುಖ ಬೇಡಿಕೆ ಕಸ್ತೂರಿ ವರದಿ ಜಾರಿ ಬೇಡವೇ ಬೇಡ ಎಂಬುದಾಗಿದೆ. ಇದರಿಂದ ಮೂಲಸೌಕರ್ಯಕ್ಕೆ ಧಕ್ಕೆ ಇದೆ ಎಂದರು.
ಪಶ್ಚಿಮ ಘಟ್ಟದ ಜನವಸತಿ ಪ್ರದೇಶಗಳ ಗಡಿ ಗುರುತು ಮಾಡುವಾಗ ಗ್ರಾಮಗಳನ್ನು ಜಂಟಿ ಸರ್ವೇ ಮಾಡಬೇಕು. ಗೋಮಾಳ, ನಡುತೋಪು(ನಾಗಬನ), ಕುಮ್ಕಿ, ಕಾನಬಾಣೆಗೆ ಹಕ್ಕು ನೀಡಬೇಕು. ಕಂದಾಯ ಭೂಮಿ, ಸರ್ಕಾರಿ ಕಟ್ಟಡಗಳಿಗೆ ಜಾಗ ಕಾಯ್ದಿರಿಸಬೇಕು ಎಂಬ ಬೇಡಿಕೆ ಇರಿಸಬೇಕು ಎಂದು ಕಿಶೋರ್ ನುಡಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಕಿಶೋರ್ ಕುಮಾರ್ ಕೂಜುಗೋಡು ಮಾತನಾಡಿ, ವರದಿ ವಿರೋಧಿಸಿ ಮುಂದಿನ ದಿನಗಳಲ್ಲಿ ಹೋರಾಟ ಮಾಡುವ ಅನಿವಾರ್ಯ ರೈತರಿಗೆ ಇದೆ. ರೈತರು ಗ್ರಾಮಗಳ ಉಳಿವಿಗಾಗಿ ಹೋರಾಟ ಮಾಡುವ ಸಂದರ್ಭ ನಾವೆಲ್ಲರೂ ಒಂದಾಗಿ ಕೈ ಜೋಡಿಸೋಣ ಎಂದು ಸಲಹೆ ನೀಡಿದರು.
ವಿಜಯ್ ಕುಮಾರ್, ಕೃಷ್ಣಪ್ಪ ಎಂ., ಹರ್ಷ ಗೌಡ ಪಾಲ್ತಾಡು, ಸತೀಶ್ ಕೆರೆಕೋಡಿ, ತೀರ್ಥರಾಮ ದೋಣಿಪಳ್ಳ ಉಪಸ್ಥಿತರಿದ್ದರು. ಗಿರೀಶ್ ಕುಮಾರ್ ಹೆರೆಕಜೆ ನಿರೂಪಿಸಿದರು. ಸುಬ್ರಹ್ಮಣ್ಯ ವಲಯದ ಎಲ್ಲ ಸಂಘ ಸದಸ್ಯರು, ಸೇವಾಪ್ರತಿನಿಧಿಗಳು, ಬಾಧಿತ ಗ್ರಾಮಗಳ ಜನಪ್ರತಿನಿಧಿಗಳು, ಊರಿನ ಪ್ರಮುಖರು ಭಾಗವಹಿಸಿ ಸಲಹೆ ಸೂಚನೆ ನೀಡಿದರು.
ಈ ಭಾಗದ ಜನರ ಸಮಸ್ಯೆಗಳನ್ನು ವೀರೇಂದ್ರ ಹೆಗ್ಗಡೆ ಅವರ ಗಮನಕ್ಕೆ ತರುವ ಕೆಲಸ ಯೋಜನೆ ಮುಖಾಂತರ ಮಾಡಲಾಗುವುದು. ಈ ಭಾಗದಲ್ಲಿ ನೂರಾರು ಸಂಘಗಳು ಯೋಜನೆಯಿಂದ ಸಾಲ ಸೌಲಭ್ಯ ಪಡೆದು ಕೃಷಿ ಮಾಡುತ್ತಾ ಅಭಿವೃದ್ಧಿ ಹೊಂದಿದ್ದಾರೆ. ಈಗ ವರದಿ ಜನರಲ್ಲಿ ಭಯ ಮೂಡಿಸಿದೆ. ಈ ಮಾರಕ ವರದಿ ಜಾರಿಯಾದರೆ ಈ ತಾಲೂಕಿನ ಕೆಲವು ಗ್ರಾಮದ ಜನಗಳಿಗೆ ಬದುಕಲು ಕಷ್ಟವಾಗಬಹುದು. ಆದುದರಿಂದ ವೀರೇಂದ್ರ ಹೆಗ್ಗಡೆ ಅವರ ಮುಖಾಂತರ ಸರ್ಕಾರದ ಎಲ್ಲಾ ಶಾಸಕರು, ಸಚಿವರು, ಸಂಸದರಿಗೆ ಮನವಿ ಸಲ್ಲಿಸಿ ಈ ಯೋಜನೆ ಕೈ ಬಿಡುವಂತೆ ಮನವಿ ಮಾಡಲಾಗುವುದು ಎಂದರು. - ಮಾಧವ ಗೌಡ, ಯೋಜನಾಧಿಕಾರಿ