ಜಿಲ್ಲೆ

ಕಾವೇರಿ ಆರತಿ ಸಿಂಪತಿಗಾಗಿ ಹುನ್ನಾರ: ಪಾರಂಪರಿಕ ಸಂಶೋಧನ ತಜ್ಞರ ಸಮಿತಿ ಸದಸ್ಯ ಎನ್.ಎಸ್.ರಂಗರಾಜು ಟೀಕೆ

ಕೆ.ಎನ್.ರಾಘವೇಂದ್ರ

ಮಂಡ್ಯ: ಜನರ ಸಿಂಪತಿ ಪಡೆಯಲು ಕಾವೇರಿ ಆರತಿ ಯೋಜನೆ ಮಾಡುವ ಹುನ್ನಾರವನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ನಿಲ್ಲಿಸಬೇಕು ಎಂದು ಪಾರಂಪರಿಕ ಸಂಶೋಧನ ತಜ್ಞರ ಸಮಿತಿ ಸದಸ್ಯ ಎನ್.ಎಸ್.ರಂಗರಾಜು ಆಗ್ರಹಿಸಿದರು.

ನಗರದ ಗಾಂಧಿಭವನದಲ್ಲಿ ರೈತ, ದಲಿತ, ಪ್ರಗತಿಪರ, ಕನ್ನಡ ಪರ ಸಂಘಟನೆಗಳ ಸಹಯೋಗದಲ್ಲಿ ಅಮ್ಯೂಸ್‌ಮೆಂಟ್ ಪಾರ್ಕ್, ಕಾವೇರಿ ಆರತಿ ವಿಷಯ ಕುರಿತ ಮುಂದಿನ ಹೋರಾಟದ ರೂಪುರೇಷೆ ಸಿದ್ಧಪಡಿಸಲು ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಕೆರೆತೊಣ್ಣೂರು, ಶಿವನಸಮುದ್ರದ ಹಾಗೂ ಭೂವರಹನಾಥಸ್ವಾಮಿ ದೇವಾಲಯದ ಬಳಿ ಕಾವೇರಮ್ಮನ ಆರತಿ ಮಾಡಿಕೊಳ್ಳಲಿ. ಅದಕ್ಕೆ ನಮ್ಮದೇನು ಅಭ್ಯಂತರವಿಲ್ಲ. ಇನ್ನುಳಿದಂತೆ ಕೆಆರ್‌ಎಸ್ ಅಣೆಕಟ್ಟೆಯ ಬಳಿ ಅಮ್ಯೂಸ್‌ಮೆಂಟ್ ಪಾರ್ಕ್ ಕೂಡ ಬೇಡ ಎಂದು ಆಗ್ರಹಿಸಿದರು.

ಕೃಷ್ಣರಾಜಸಾಗರ ಜಲಾಶಯ ಪಾರಂಪರಿಕ ಪ್ರದೇಶದಲ್ಲಿದೆ. ಅಣೆಕಟ್ಟೆಯನ್ನು ಚುರುಕಿಗಾರೆಯಿಂದ ನಿರ್ಮಿಸಲಾಗಿದೆಯೇ ವಿನಃ ಕಬ್ಬಿಣ, ಸಿಮೆಂಟ್, ಇಟ್ಟಿಗೆಯನ್ನು ಬಳಸಿಲ್ಲ. ಭೂಮಿಯಿಂದ 80 ರಿಂದ 100 ಅಡಿ ಆಳದ ಶಿಲಾಪದರದ ಮೇಲೆ 50 ಅಡಿ ಅಗಲ, 125 ಅಡಿ ಎತ್ತರಕ್ಕೆ ಅಣೆಕಟ್ಟೆಯನ್ನು ನಿರ್ಮಿಸಲಾಗಿದೆ. ಯಾವುದೇ ಒಂದು ಕಟ್ಟಡ, ಅಣೆಕಟ್ಟೆಗೆ 60 ರಿಂದ 70 ವರ್ಷವಾದರೆ ಅದು ತನ್ನಿಂತಾನೇ ಪಾರಂಪರಿಕ ಪ್ರದೇಶವಾಗಿ ಘೋಷಣೆಯಾಗುತ್ತದೆ ಎಂದು ವಿವರಿಸಿದರು.

ಪಾರಂಪರಿಕ ಸಂರಕ್ಷಣಾ ಸಮಿತಿ ಪ್ರತಿ ಜಿಲ್ಲೆಯಲ್ಲಿದ್ದು, ಜಿಲ್ಲಾಧಿಕಾರಿ ಅಧ್ಯಕ್ಷರಾಗಿರುತ್ತಾರೆ. ಅವರೇ ಇಂತಹವುಗಳನ್ನು ಗುರುತಿಸಿ ಪಾರಂಪರಿಕ ಪ್ರದೇಶ, ಕಟ್ಟಡಗಳೆಂದು ಘೋಷಿಸಬೇಕು. ಈ ಪಾರಂಪರಿಕ ಪ್ರದೇಶದ 350 ಸುತ್ತಳತೆಯಲ್ಲಿ ಏನೂ ಇರಬಾರದು ಎಂದು ಕಾನೂನೇ ಇದೆ. ಮೈಸೂರು, ವಿಜಯಪುರ, ಬೆಂಗಳೂರಿನಲ್ಲಿ ಮಾತ್ರ ಈ ಸಮಿತಿ ಸಕ್ರಿಯವಾಗಿದೆ. ಉಳಿದ ಜಿಲ್ಲೆಗಳಲ್ಲಿ ನಾಮಕೆವಾಸ್ತೆಯಾಗಿ ಉಳಿದುಕೊಂಡಿದೆ ಎಂದು ಆರೋಪಿಸಿದರು.

ಮೈಸೂರಿನ ಪರಿಸರಕ್ಕಾಗಿ ನಾವು ಸಂಸ್ಥೆ ಅಧ್ಯಕ್ಷ ಪರಶುರಾಮೇಗೌಡ ಮಾತನಾಡಿ, ಅಮ್ಯೂಸ್‌ಮೆಂಟ್ ಪಾರ್ಕ್ ಯೋಜನೆಯನ್ನು ಬೀದಿಗಿಳಿದು ಹೋರಾಟ ನಡೆಸಿದರೆ ನಿಲ್ಲಿಸಲಾಗಲ್ಲ. ಕಾನೂನಿನ ಅಸ್ತ್ರ ಪ್ರಯೋಗಿಸುವುದರಿಂದ ಮಾತ್ರ ಯೋಜನೆಯನ್ನು ತಡೆದು ನಿಲ್ಲಿಸಲು ಸಾಧ್ಯ. ಕಾವೇರಿ ನದಿ ಕೈಗಾರಿಕಾ ತ್ಯಾಜ್ಯ, ಚರಂಡಿ ನೀರಿನಿಂದ ಸಂಪೂರ್ಣ ಕಲುಷಿತಗೊಂಡಿವೆ. ಕುಡಿಯುವುದಕ್ಕೂ ಯೋಗ್ಯವಾಗಿಲ್ಲದಷ್ಟು ಕೊಳಕಾಗಿದೆ. ಅದನ್ನು ಸ್ವಚ್ಛಗೊಳಿಸದೆ ಕೊಳಕು ನೀರಿಗೆ ಆರತಿ ಮಾಡುವುದರಿಂದ ಪುಣ್ಯ ಸಿಗುವುದಾದರೂ ಹೇಗೆ ಎಂದು ವ್ಯಂಗ್ಯವಾಡಿದರು.

ಅಮ್ಯೂಸ್‌ಮೆಂಟ್ ಪಾರ್ಕ್‌ಗೆ ಖರ್ಚು ಮಾಡುವ 2,663 ಕೋಟಿ ರೂಗಳನ್ನು ನದಿ ನೀರಿನ ಸ್ವಚ್ಛತೆಗೆ ಬಳಸಿದ್ದರೆ ಜನೋಪಕಾರಿಯಾಗುತ್ತದೆ. ಆದರೆ, ಸರ್ಕಾರಕ್ಕೆ ಮನರಂಜನಾ ಪಾರ್ಕ್ ಬೇಕು. ರೈತರಿಗೆ ಕೃಷಿ ಬೇಕಿದೆ. ಅದಕ್ಕಾಗಿ ಜಿಲ್ಲೆಯ ಜನರನ್ನು ಮೊದಲು ಜಾಗೃತಿಗೊಳಿಸಬೇಕು. ಇದರ ವಿರುದ್ಧ ದೊಡ್ಡ ಹೋರಾಟವೆ ನಡೆಯಬೇಕು. ನಮ್ಮ ವಕೀಲರಿಗೆ ಇದೆಲ್ಲದರ ದಾಖಲೆಗಳನ್ನು ನೀಡಿ ನ್ಯಾಯಾಧೀಶರಿಗೆ ಮನವರಿಗೆ ಮಾಡಿಕೊಡಬೇಕು ಎಂದರು.

ನೀರಾವರಿ ತಜ್ಞ ಅರ್ಜುನಹಳ್ಳಿ ಪ್ರಸನ್ನಕುಮಾರ್ ಮಾತನಾಡಿ, ಬೆಂಗಳೂರಿಗೆ ಕುಡಿಯುವ ನೀರನ್ನು ಕೆಳಭಾಗದಿಂದ ತೆಗೆದುಕೊಂಡು ಹೋಗುತ್ತಿದ್ದಾರೆ. ಆರನೇ ಹಂತದಲ್ಲಿ ಮೇಲ್ಭಾಗದಿಂದಲೇ 10 ಟಿಎಂಸಿ ನೀರನ್ನು ಕೊಂಡೊಯ್ಯಲು ನಿರ್ಧರಿಸಿದ್ದರು. ಆನಂತರ ಅದು 6 ಟಿಎಂಸಿಗೆ ಇಳಿದು 4 ಟಿಎಂಸಿ ಬೆಂಗಳೂರಿಗೆ ಮತ್ತೆರಡು ಟಿಎಂಸಿ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಹಂಚಿಕೆ ಮಾಡಲಾಯಿತು. ಇದರಿಂದ ಮದ್ದೂರು, ಮಳವಳ್ಳಿ, ಟಿ.ನರಸೀಪುರ ತಾಲೂಕಿನ ಕೃಷಿ ಪ್ರದೇಶ ಬರಡಾಗುವ ಆತಂಕವಿದೆ ಎಂದು ತಿಳಿಸಿದರು.

ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ಕುಮಾರಿ ಮಾತನಾಡಿ, ತನ್ನದೇ ಸಾಮ್ರಾಜ್ಯವನ್ನು ವಿಸ್ತರಣೆ ಮಾಡಿಕೊಳ್ಳಲು ಡಿ.ಕೆ.ಶಿವಕುಮಾರ್ ಅವರು ಹೊರಟಿದ್ದಾರೆ. ಏಕೆಂದರೆ ಎರಡು ಉದ್ಯಮಿಗಳಿಗೆ ಅನುಕೂಲವಾಗಲೆಂದು ಹೊರಟಿದ್ದಾರೆ. ಬಿಜೆಪಿ ಅವರಿಗಿಂತ ಒಂದು ಹೆಜ್ಜೆ ಮುಂದೆ ಹೋಗಿ ಕಾಂಗ್ರೆಸ್‌ನವರು ಕಾವೇರಿ ಆರತಿ ವಿಚಾರದಲ್ಲಿ ಹಿಂದುಗಳ ಮನಸ್ಸು ಗೆಲ್ಲಲು ಹೊರಟಿದ್ದಾರೆ ಎಂದು ಕಿಡಿಕಾರಿದರು.

ರೈತ ನಾಯಕಿ ನಂದಿನಿ ಜಯರಾಂ ಮಾತನಾಡಿ, ಈ ಯೋಜನೆಗಳಿಂದ ಮುಂದೆ ಆಗುವ ಅನಾಹುತದ ಅರಿವು ಇಲ್ಲದೇ ಇರುವ ಆತಂಕವನ್ನು ನಾವು ಮುಂದೆ ಎದುರಿಸಬೇಕಾಗಿದೆ. ಅಪಾಯಗಳಿಂದ ಏನೆಲ್ಲಾ ಆಗುತ್ತದೆ ಎನ್ನುವುದನ್ನು ಪ್ರತಿ ಮನೆಗೆ ಹಾಗೂ ರೈತರಿಗೆ ತಲುಪುವ ಹಾಗೆ ನೋಡಿಕೊಳ್ಳಬೇಕು. ಒಟ್ಟಾರೆ ಅಮ್ಯೂಸ್‌ಮೆಂಟ್ ಪಾರ್ಕ್ ಮತ್ತು ಕಾವೇರಿ ಆರತಿ ನಿಲ್ಲಿಸುವವರೆಗೂ ನಮ್ಮ ಹೋರಾಟ ನಿಲ್ಲಬಾರದು ಎಂದು ಕರೆ ನೀಡಿದರು.

ರೈತ ಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ ಮಾತನಾಡಿ, ಗಂಗಾರತಿ ಮಾಡುವ ನಿಟ್ಟಿನಲ್ಲಿಯೇ ಕಾವೇರಿ ಆರತಿ ಮಾಡಲು ಹೊರಟಿದ್ದಾರೆ. ಆಗ ಡಿಸ್ನಿಲ್ಯಾಂಡ್ ಅಂದವರು ಈಗ ಅಮ್ಯೂಸ್‌ಮೆಂಟ್ ಪಾರ್ಕ್ ಯೋಜನೆ ಎನ್ನುತ್ತಿದ್ದಾರೆ. ಜಿಲ್ಲೆಯ ರೈತರಿಗೆ ಅನ್ಯಾಯ ಮಾಡುವ ಹಾಗೂ ಅಣೆಕಟ್ಟೆಗೆ ಅಪಾಯ ತಂದೊಡ್ಡುವ ಕೆಲಸಗಳನ್ನು ಸರ್ಕಾರ ಮಾಡಲು ಹೊರಟಿದೆ ಎಂದು ಕಿಡಿಕಾರಿದರು.

ಸಭೆಯಲ್ಲಿ ಪ್ರೊ.ಬಿ.ಶಿವಲಿಂಗಯ್ಯ, ಸುನಂದಾ ಜಯರಾಂ, ಕೆ.ಬೋರಯ್ಯ, ಇಂಡುವಾಳು ಚಂದ್ರಶೇಖರ್, ಎ.ಟಿ.ರಾಮಸ್ವಾಮಿ, ಎಚ್.ಸಿ.ಮಂಜುನಾಥ್, ಕುಸುಮಾ, ಎಂ.ವಿ.ಕೃಷ್ಣ, ಕೆ.ವಿ.ಯಶೋದಾ ರಾಜಣ್ಣ, ಸಾತನೂರು ವೇಣುಗೋಪಾಲ್, ಅಂಬುಜಮ್ಮ, ಹಲ್ಲೇಗೆರೆ ಹರೀಶ್ ಭಾಗವಹಿಸಿದ್ದರು.

ಸಭೆಯ ನಿರ್ಣಯಗಳು

* ಕೃಷಿಕರು/ಜನ ಸಮುದಾಯಕ್ಕೆ ವಿರೋಧಿಯಾಗಿರುವ ಅಮ್ಯೂಸ್ಮೆಂಟ್ ಪಾರ್ಕ್ ಹಾಗೂ ಕಾವೇರಿ ಆರತಿ ಯೋಜನೆ ರದ್ದಾಗಬೇಕು.

* ಅಣೆಕಟ್ಟೆ ಸುರಕ್ಷತಾ ಕಾಯ್ದೆಯನ್ವಯ ಡ್ಯಾಂ ಬಳಿ ಹಾಗೂ 20 ಕಿ.ಮೀ ದೂರವರೆಗೆ ಯಾವುದೇ ರೀತಿಯ ಚಟುವಟಿಕೆ ನಡೆಯಬಾರದು.

* ಹೈಕೋರ್ಟ್ ತಡೆಯಾಜ್ಞೆ ನೀಡಿರುವುದರಿಂದ ಕಾನೂನು ಉಲ್ಲಂಘನೆಯಾಗಬಾರದು.

* ಪರಿಸರ, ತಾಂತ್ರಿಕ, ವಿಜ್ಞಾನ ವಿಷಯದ ಬಗ್ಗೆ ಒಂದು ದಿನದ ವಿಚಾರ ಸಂಕಿರಣ ಆಯೋಜಿಸುವುದು