ಜಿಲ್ಲೆ

ದಬ್ಬಾಳಿಕೆ ಮಾಡಿದರೆ ಗೂಂಡಾ ಕಾಯ್ದೆ : ಹೊರಜಿಲ್ಲೆಯ ಜೆಸಿಬಿ, ಹಿಟಾಚಿ ಮಾಲೀಕರಿಗೆ ಕಿರುಕುಳ ನೀಡುವವರಿಗೆ ಎಚ್ಚರಿಕೆ

ಸೌಮ್ಯ ಆರ್

ಪುತ್ತೂರು ಗ್ರಾಮಾಂತರ : ಹೊರಜಿಲ್ಲೆಯಿಂದ ಅಂದರೆ ಘಟ್ಟ ಪ್ರದೇಶದಿಂದ ಬಂದು ಜೆಸಿಬಿ, ಹಿಟಾಚಿ ಇಟ್ಟುಕೊಂಡು ಕೆಲಸ ಮಾಡುತ್ತಿರುವವರ ಮೇಲೆ ಸ್ಥಳೀಯ ಕೆಲವೊಂದು ವ್ಯಕ್ತಿಗಳು ದಬ್ಬಾಳಿಕೆ ಮಾಡುವ ಮೂಲಕ ಗೊಂದಲ ಉಂಟು ಮಾಡುತ್ತಿದ್ದಾರೆ. ಇಂತಹ ಘಟನೆಗಳು ಮುಂದಿನ ದಿನಗಳಲ್ಲಿ ಪುನಾರಾವರ್ತನೆಯಾದಲ್ಲಿ ಪ್ರಕರಣ ದಾಖಲಿಸಿ, ಗೂಂಡಾ ಕಾಯ್ದೆಯಡಿ ಜೈಲಿಗೆ ಕಳುಹಿಸುವ ವ್ಯವಸ್ಥೆ ಮಾಡಲಾಗುವುದು. ಜಿಲ್ಲೆಗೆ ಕಳಂಕ ತರುವ ಕೆಲಸ ಮಾಡುವವರನ್ನು ಸಹಿಸುವುದಿಲ್ಲ ಎಂದು ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ ಎಚ್ಚರಿಸಿದರು.

ಹೊರಜಿಲ್ಲೆಯಿಂದ ಬಂದ ಜೆಸಿಬಿ, ಹಿಟಾಚಿ ಮಾಲೀಕರು ಹಾಗೂ ಆಪರೇಟರ್‌ಗಳ ಮೇಲೆ ಕೆಲವೊಂದು ವ್ಯಕ್ತಿಗಳು ದಬ್ಬಾಳಿಕೆ ನಡೆಸುತ್ತಿರುವ ಹಿನ್ನಲೆಯಲ್ಲಿ ಹಾಗೂ ಅವರಿಗೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ನರಿಮೊಗರಲ್ಲಿ ಗುರುವಾರ ನಡೆದ ಸಭೆಯಲ್ಲಿ ಮಾತನಾಡಿದರು.

ಪುತ್ತೂರು ತಾಲೂಕು ಇಂಟಕ್ ಮಾಜಿ ಅಧ್ಯಕ್ಷ ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ ಮಾತನಾಡಿ, ಜೆಸಿಬಿ, ಹಿಟಾಚಿ ಆಪರೇಟರ್‌ಗಳು ಇಲ್ಲಿ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಅವರನ್ನು ಓಡಿಸುವ ಕೆಲಸವನ್ನು ಇಲ್ಲಿನ ಜೆಸಿಬಿ, ಹಿಟಾಚಿ ಯೂನಿಯನ್‌ನವರು ಮಾಡುತ್ತಿದ್ದಾರೆ. ಇಂತಹ ಕೆಲಸವನ್ನು ಬಿಟ್ಟುಬಿಡದಿದ್ದರೆ ಅವರಿಗೆ ಉಳಿಗಾಲವಿಲ್ಲ ಎಂದು ಎಚ್ಚರಿಸಿದರು.

ತಮಗಾಗುತ್ತಿರುವ ಅನ್ಯಾಯದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಜೆಸಿಬಿ ಮಾಲೀಕ ಕುಮಾರ್, ಕಳೆದ 20 ವರ್ಷಗಳಿಂದ ಇಲ್ಲಿಗೆ ಬಂದು ಕೆಲಸ ಮಾಡುತ್ತಿದ್ದೇವೆ. ಆದರೆ ಸ್ಥಳೀಯ ಕೆಲವೊಬ್ಬರು ವಾಟ್ಸಪ್ ಸಂದೇಶದ ಮೂಲಕ ಬೆದರಿಕೆಯೊಡ್ಡುತ್ತಿದ್ದಾರೆ. ಕೆಲಸ ಮಾಡುವಲ್ಲಿಗೆ ಬಂದು ದಬ್ಬಾಳಿಕೆ ಮಾಡುತ್ತಿದ್ದಾರೆ. ಸಂವಿಧಾನದಡಿ ಬದುಕುವ ಹಕ್ಕು ನಮಗಿಲ್ಲವೇ ಎಂದು ಪ್ರಶ್ನಿಸಿದರು.

ಪುತ್ತೂರು ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರವಿಪ್ರಸಾದ್ ಶೆಟ್ಟಿ, ಜೆಸಿಬಿ ಮಾಲೀಕ ಕುಮಾರ್, ಮುಂಡೂರು ಸಿಎ ಬ್ಯಾಂಕ್ ಉಪಾಧ್ಯಕ್ಷ ಯಾಕೂಬ್ ಮುಲಾರ್, ಕೊಳ್ತಿಗೆ ಗ್ರಾಪಂ ಉಪಾಧ್ಯಕ್ಷ ಪ್ರಮೋದ್ ಕೆ.ಎಸ್ ಉಪಸ್ಥಿತರಿದ್ದರು. ನರಿಮೊಗರು ಸಿ.ಎ.ಬ್ಯಾಂಕ್ ಮಾಜಿ ಅಧ್ಯಕ್ಷ ಬಾಬು ಶೆಟ್ಟಿ ಸ್ವಾಗತಿಸಿದರು. ಹೊನ್ನಪ್ಪ ಕೈಂದಾಡಿ ನಿರೂಪಿಸಿದರು.