ಜಿಲ್ಲೆ

ಸದಸ್ಯರನ್ನು ಹೆದರಿಸುವ ಕೆಲಸ ಮಾಡಬಾರದು

ಎ. ಆರ್. ರಘುರಾಮ

ಬೇಲೂರು : ಹೊಳೇಬೀದಿಯ 17 ವಾಣಿಜ್ಯ ಮಳಿಗೆಗಳ ವಿಚಾರಕ್ಕೆ ಸಂಬಂಧಿಸಿದಂತೆ ಸದಸ್ಯ ಬಿ.ಗಿರೀಶ್, ಪುರಸಭೆ ಅಧ್ಯಕ್ಷೆ ತೀರ್ಥಕುಮಾರಿ ವೆಂಕಟೇಶ್ ಅವರೊಂದಿಗೆ ಚರ್ಚಿಸುವ ಸಂದರ್ಭ ಇಬ್ಬರ ನಡುವೆ ಮಾತಿನ ಚಕಮಕಿ ನಡೆಯಿತು. ಸದಸ್ಯರನ್ನು ಹೆದರಿಸುವ ಕೆಲಸ ಅಧ್ಯಕ್ಷರು ಮಾಡಬಾರದು ಎಂದು ಕೆಲ ಸದಸ್ಯರು ಆಗ್ರಹಿಸಿದ ಪ್ರಸಂಗ ಪುರಸಭೆಯ ಸಾಮಾನ್ಯ ಸಭೆಯಲ್ಲಿ ನಡೆಯಿತು.
ಪುರಸಭೆಯ ವೇಲಾಪುರಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಗಿರೀಶ್, ಹೊಳೇಬೀದಿಯಲ್ಲಿನ 17 ವಾಣಿಜ್ಯ ಮಳಿಗೆಗಳನ್ನು ಅರ್ಹರಿಗೆ ಕೊಟ್ಟಿದ್ದೀರೋ, ಇಲ್ಲವೋ ಎಂದು ನಮಗೆ ಹೇಗೆ ತಿಳಿಯುತ್ತದೆ? ಈ ಬಗ್ಗೆ ಸದಸ್ಯರಿಗೆ ಮಾಹಿತಿ ನೀಡಿಲ್ಲ. ಸಭೆಗೆ 9 ದಿನ ಮೊದಲೇ ತಿಳಿಸಬೇಕಿತ್ತು ಎಂದರು. ಇದಕ್ಕೆ ಶಾಂತಕುಮಾರ್, ದಾನಿ, ಜಗದೀಶ್ ಬೆಂಬಲ ವ್ಯಕ್ತಪಡಿಸಿದರು.
ತೀರ್ಥಕುಮಾರಿ ಪ್ರತಿಕ್ರಿಯಿಸಿ, ಸಭೆಯಲ್ಲಿ ಅಧ್ಯಕ್ಷರನ್ನು ಹೆದರಿಸುವ ಕೆಲಸ ಮಾಡಬೇಡಿ. ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ. ಇಲ್ಲದಿದ್ದರೆ ಸಭೆಯನ್ನೇ ಮುಂದೂಡಬೇಕಾಗುತ್ತದೆ ಎಂದು ಗರಂ ಆದ ನಂತರ ಎಲ್ಲ ಸದಸ್ಯರು ಸಮಾಧಾನವಾಗಿ ಚರ್ಚೆಗಿಳಿದರು.
ವಾರ್ಡ್‌ಗಳಲ್ಲಿ ನಡೆಯುತ್ತಿರುವ ಕಾಮಗಾರಿ ಮಾಹಿತಿಯನ್ನು ಅಧ್ಯಕ್ಷರು, ಮುಖ್ಯಾಧಿಕಾರಿ ಹಾಗೂ ಇಂಜಿನಿಯರ್ ಸೌಜನ್ಯಕ್ಕೂ ನಮ್ಮ ಗಮನಕ್ಕೆ ತರುತ್ತಿಲ್ಲ, ಒಬ್ಬನೇ ಗುತ್ತಿಗೆದಾರನಿಗೆ ಐದರಿಂದ ಆರು ಕಾಮಗಾರಿ ನೀಡಲಾಗಿದೆ. ಇಲ್ಲಿ ಏಕೆ ಮರೆಮಾಚಿ ಟೆಂಡರ್ ಕರೆದಿದ್ದೀರಿ ಎಂದು ಶಾಂತಕುಮಾರ್ ಇಂಜಿನಿಯರ್ ಜಗದೀಶ್ ವಿರುದ್ಧ ಕಿಡಿಕಾರಿದರು.