ಜಿಲ್ಲೆಯ ವಿವಿಧ ಇಲಾಖೆಗಳ ಯೋಜನೆಗಳಡಿಯಲ್ಲಿ ಬ್ಯಾಂಕುಗಳಿಗೆ ಸಲ್ಲಿಕೆಯಾದ ಸಾಲದ ಅರ್ಜಿಗಳನ್ನು ಶೀಘ್ರ ವಿಲೇವಾರಿಗೊಳಿಸಿ ಅರ್ಹರಿಗೆ ಸಾಲ ಮಂಜೂರು ಮಾಡಬೇಕು ಎಂದು ಜಿಲ್ಲಾ ಬ್ಯಾಂಕ್ ಅಧಿಕಾರಿಗಳಿಗೆ ಸಂಸದ ಜಗದೀಶ ಶೆಟ್ಟರ ನಿರ್ದೇಶನ ನೀಡಿದರು.
ಜಿಲ್ಲಾ ಪಂಚಾಯತ ಸಭಾ ಭವನದಲ್ಲಿ ಸೋಮವಾರ ಜರುಗಿದ ಲೀಡ್ ಬ್ಯಾಂಕ್ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಮೂಲಕ ಬ್ಯಾಂಕುಗಳಿಗೆ ಸಲ್ಲಿಕೆಯಾದ ಸಾಲದ ಅರ್ಜಿಗಳ ವಿಲೇವಾರಿ ವಿಳಂಬ ಮಾಡಬಾರದು ಎಂದು ಸೂಚಿಸಿದರು.
ಪಿಎಂಜೆಜೆಬಿವೈ, ಪಿಎಂಎಸ್‌ಬಿವೈ ಮತ್ತು ಎಪಿವೈ ಕಾರ್ಯಕ್ರಮಗಳನ್ನು ಹೆಚ್ಚಿನ ಮಟ್ಟದಲ್ಲಿ ಜನರಿಗೆ ತಲುಪುವ ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದು ಮತ್ತು ರೈತರು ಬೆಳದಂತಹ ಫಸಲುಗಳನ್ನು ನೈಸರ್ಗಿಕ ವಿಕೋಪಕಗಳಿಂದ ಕಾಪಾಡಿಕೊಳ್ಳಲು ಕಡ್ಡಾಯವಾಗಿ ಎಲ್ಲ ರೈತರನ್ನು ಪ್ರಧಾನ ಮಂತ್ರಿ ಫಸಲ ವಿಮಾ ಯೋಜನೆಗೆ ಒಳಗೊಳ್ಳುವಂತೆ ನೋಡಿಕೊಳ್ಳಬೇಕೆಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ ಶಿಂಧೆ ಮಾತನಾಡಿ, ಈಚೆಗೆ ಬ್ಯಾಂಕ್ ದರೋಡೆ ಹಾಗೂ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದ್ದು ಇವುಗಳನ್ನು ತಡೆಗಟ್ಟುವಲ್ಲಿ ಅಧಿಕಾರಿಗಳು ಬ್ಯಾಂಕ್ ಸುರಕ್ಷತೆ ಬಗ್ಗೆ ಕಾಳಜಿ ವಹಿಸಬೇಕು. ಕರ್ನಾಟಕ ಸರ್ಕಾರದ ನಿರ್ದೇಶನದಂತೆ ಎಲ್ಲ ಬ್ಯಾಂಕುಗಳಲ್ಲಿನ ಸಿಬ್ಬಂದಿ ಜನ ಸಾಮಾನ್ಯರಿಗೆ ಅನುಕೂಲವಾಗುಂತೆ ಆದಷ್ಟು ಕನ್ನಡ ಭಾಷೆಯಲ್ಲಿ ವ್ಯವಹರಿಸುವಂತೆ ಹೇಳಿದರು.
ಲೀಡ್ ಬ್ಯಾಂಕ್ ಪ್ರಾದೇಶಿಕ ಮ್ಯಾನೇಜರ್ ಪ್ರಶಾಂತ ಘೋಡಕೆ ಮಾತನಾಡಿ, ಜೂನ್ ಅಂತ್ಯದವರೆಗೆ ಎಲ್ಲ ಬ್ಯಾಂಕ್‌ಗಳ ಮೂಲಕ ಕೃಷಿ ಕ್ಷೇತ್ರಕ್ಕೆ 1406 ಕೋಟಿ ರೂ., ಕೈಗಾರಿಕೆಗೆ 2653.27 ಕೋಟಿ ರೂ., ಶೈಕ್ಷಣಿಕ ಕ್ಷೇತ್ರಕ್ಕೆ 13.57 ಕೋಟಿ ರೂ., ಗೃಹಸಾಲ 75.03 ಕೊಟಿ ರೂ. ಸೇರಿದಂತೆ ಒಟ್ಟು 10801.80 ಕೋಟಿ ರೂ. ಸಾಲ ವಿತರಿಸಲಾಗಿದ್ದು, ಪ್ರಸಕ್ತ ವರ್ಷದಲ್ಲಿ 36237.48 ಕೋಟಿ ರೂ. ಸಾಲ ವಿತರಣೆ ಗುರಿ ಹೊಂದಲಾಗಿದೆ ಎಂದರು.
ರಾಷ್ಟ್ರೀಯ ಗ್ರಾಮೀಣ ಜಿವನೋಪಾಯ ಅಭಿಯಾನದಡಿಯಲ್ಲಿ ಮಹಿಳಾ ಸ್ವ-ಸಹಾಯ ಗುಂಪಿನ ಸದಸ್ಯರು ಉತ್ಪಾದಿಸುವ ಶಾವಿಗೆಯನ್ನು ಬೆಳಗಾವಿ ಸಂಜೀವಿನಿ ಶಾವಿಗೆ ಎಂಬ ಶೀರ್ಷಿಕೆಯಲ್ಲಿ ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಯಿತು.
ಜಿಪಂ ಯೋಜನಾ ನಿರ್ದೇಶಕರ ರವಿ ಎನ್.ಬಂಗಾರೆಪ್ಪನವರ, ಆರ್.ಬಿ.ಐ ಅಸಿಸ್ಟಂಟ್ ಜನರಲ್ ಮ್ಯಾನೇಜರ್ ಆರ್.ಪ್ರಭಾಕರ, ನಬಾರ್ಡ್ ಅಧಿಕಾರಿ ಅಭಿನವ ಯಾದವ ಇತರರಿದ್ದರು.