ಜಿಲ್ಲೆ

ಯೋಜನೆಯ ಲಾಭ ಎಲ್ಲರಿಗೂ ಸಿಗಬೇಕು

ಸುನಿಲ್ ಪೊನ್ನೇಟಿ

ಕುಶಾಲನಗರ:

ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಕುಶಾಲನಗರ ತಾಲೂಕು ಮಟ್ಟದ ಪ್ರಗತಿ ಪರಿಶೀಲನಾ ಸಭೆ ಸಮಿತಿ ತಾಲೂಕು ಅಧ್ಯಕ್ಷ ವಿ.ಪಿ. ಶಶಿಧರ್ ಅಧ್ಯಕ್ಷತೆಯಲ್ಲಿ ಗುರುವಾರ ಕುಶಾಲನಗರ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು. ಹಿಂದಿನ ಸಭೆಯಲ್ಲಿ ಚರ್ಚೆ ಆದ ವಿಷಯಗಳ ಅನುಪಾಲನಾ ವರದಿಯನ್ನು ಸಭೆಯಲ್ಲಿ ಚರ್ಚೆಗೆ ಒಳಪಡಿಸಲಾಯಿತು.

ಈ ಹಿಂದಿನ ಸಭೆಯಲ್ಲಿ ಚರ್ಚೆಯಾದ ವಿಷಯಗಳ ಬಗ್ಗೆ ಅನುಪಾಲನಾ ವರದಿ ಕೊಡದ ಅಧಿಕಾರಿಗಳನ್ನು ಸಭೆಯಲ್ಲಿ ತರಾಟೆಗೆ ತೆಗೆದುಕೊಳ್ಳಲಾಯಿತು. ಮುಂದೆ ಹೀಗೆ ಆಗಬಾರದು ಎಂದು ವಿ.ಪಿ. ಶಶಿಧರ್ ಎಚ್ಚರಿಕೆ ನೀಡಿದರು.

ಗ್ಯಾರಂಟಿ ಯೋಜನೆ ಸೇರಿದಂತೆ ಸರ್ಕಾರದ ಯೋಜನೆಗಳ ಬಗ್ಗೆ ಹಾಡಿಗಳಲ್ಲಿ ಅಭಿಯಾನಕ್ಕೆ ಸೂಚನೆ ನೀಡಲಾಗಿತ್ತು. ಆದರೆ ಇದು ನಡೆದಿಲ್ಲ. ಹಾಗಾಗಿ ಆದಷ್ಟು ಶೀಘ್ರ ಕೂಡುಮಂಗಳೂರು ಗ್ರಾ.ಪಂ. ವ್ಯಾಪ್ತಿಯ ಬೆಂಡೆಬೆಟ್ಟ ಹಾಡಿಯಲ್ಲಿ ಅಭಿಯಾನ ನಡೆಸಬೇಕು. ಇದಕ್ಕೆ ಅಧಿಕಾರಿಗಳು ಸೂಕ್ತ ತಯಾರಿ ಮಾಡಿಕೊಳ್ಳಬೇಕು ಎಂದು ಸೂಚಿಸಿದರು.

ಗೃಹಜ್ಯೋತಿ ಯೋಜನೆ ಕಾಫಿ ತೋಟಗಳಲ್ಲಿನ ಲೈನ್‌ಮನೆ ನಿವಾಸಿಗಳಿಗೆ ಸಮರ್ಪಕವಾಗಿ ತಲುಪಬೇಕು. ಈ ನಿಟ್ಟಿನಲ್ಲಿ ಸರ್ವೆ ನಡೆಸಿ ನೈಜ ಮಾಹಿತಿ ಕೊಡುವಂತೆ ಸೂಚಿಸಿದರು.

ಯುವನಿಧಿ ಯೋಜನೆಗೆ ಸಂಬAಧಿಸಿದAತೆ ಕಾಲೇಜುಗಳಿಗೆ ಮಾಹಿತಿ ನೀಡಬೇಕು. ಕಾಲೇಜುಗಳಲ್ಲಿ ಉದ್ಯೋಗ ವಿನಿಮಯ ಇಲಾಖೆಯ ಹೆಲ್ಪ್ ಡೆಸ್ಕ್ ಆರಂಭಿಸಬೇಕು ಎಂದು ಇದೇ ವೇಳೆ ಸೂಚಿಸಿದರು. ಸರ್ಕಾರ ಎಪಿಎಲ್ ಕಾರ್ಡ್ ಕೊಡಲು ಕ್ರಮ ತೆಗೆದುಕೊಳ್ಳಬೇಕು ಎನ್ನುವ ನಿರ್ಣಯ ಈ ಸಭೆಯ ಮೂಲಕ ತೆಗೆದುಕೊಳ್ಳಲಾಗುವುದು. ವಿಷಯವನ್ನು ಅಧಿವೇಶನದಲ್ಲೂ ಪ್ರಸ್ತಾಪಿಸುವಂತೆ ಸಂಬAಧಿಸಿದವರಲ್ಲಿ ಮನವಿ ಮಾಡಲಾಗುವುದು ಎಂದು ಶಶಿಧರ್ ತಿಳಿಸಿದರು.

ತಾಲೂಕಿನಲ್ಲಿ 37 ಸರ್ಕಾರಿ ನೌಕರರೂ ಬಿಪಿಎಲ್ ಕಾರ್ಡ್ಗೆ ಅರ್ಜಿ ಹಾಕಿದ್ದಾರೆ ಎಂದರೆ ಅವರ ಭಂಡತನ ಎಷ್ಟಿರಬಹುದು ? ಸರ್ಕಾರದಿಂದ ಬಿಪಿಎಲ್ ಕಾರ್ಡ್ಗಳ ಪರಾಮರ್ಶೆಯ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು. ದಿಡ್ಡಳ್ಳಿ ನಿರಾಶ್ರಿತರು ಇರುವ ಬಸವನಹಳ್ಳಿ, ಬ್ಯಾಡಗೊಟ್ಟಕ್ಕೆ ಪ್ರತ್ಯೇಕ ನ್ಯಾಯಬೆಲೆ ಅಂಗಡಿ ಬೇಕಿದೆ. ಈ ನಿಟ್ಟಿನಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ಕ್ರಮವಹಿಸಬೇಕು ಎಂದರು.

ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾ ಉಪಾಧ್ಯಕ್ಷ ಕೆ.ಸಿ. ಭೀಮಯ್ಯ, ಬಿ.ಡಿ. ಅಣ್ಣಯ್ಯ, ತಾಲೂಕು ಸಮಿತಿ ಸದಸ್ಯರು, ತಾಲೂಕು ಪಂಚಾಯಿತಿ ಇಒ ಪರಮೇಶ ಕುಮಾರ್, ಶ್ರೀನಿವಾಸ್, ವಿವಿಧ ಇಲಾಖೆ ಅಧಿಕಾರಿಗಳು ಇದ್ದರು. ಸಭೆಯ ಆರಂಭದಲ್ಲಿ ಇತ್ತೀಚೆಗೆ ನಿಧನರಾದ ಆಹಾರ ಮತ್ತು ನಾಗರಿಕ ಇಲಾಖೆ ಉಪನಿರ್ದೇಶಕರ ಆತ್ಮಕ್ಕೆ ಶಾಂತಿ ಕೋರಿ ಒಂದು ನಿಮಿಷ ಮೌನ ಆಚರಿಸಲಾಯಿತು.