ಜಿಲ್ಲೆ

ಹಾಡಿಯಲ್ಲಿ ಪೋಷಕರು ಮತ್ತು ಮಕ್ಕಳ ಸಭೆ

ಸುನಿಲ್ ಪೊನ್ನೇಟಿ

ಕುಶಾಲನಗರ:

ಕುಟುಂಬದಿ0ದ ಬೇರ್ಪಟ್ಟವರು, ಬಾಲ ಕಾರ್ಮಿಕರು, ಬಾಲ್ಯ ವಿವಾಹಕ್ಕೆ ಒಳಗಾದವರು, ಪೋಕ್ಸೋ ಸೇರಿದಂತೆ ದೌರ್ಜನ್ಯ ಮತ್ತು ಶೋಷಣೆಗೊಳಗಾದ ಮಕ್ಕಳ ಪೋಷಣೆ ರಕ್ಷಣೆ ಹಾಗೂ ಪುನರ್ವಸತಿಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಾತ್ಸಲ್ಯ ಎಂಬ ಜವಾಬ್ದಾರಿಯುತ ಯೋಜನೆ ರೂಪಿಸಿವೆ ಎಂದು ಜಿಲ್ಲಾ ಮಕ್ಕಳ ರಕ್ಷಣಾ ನಿರ್ದೇಶನಾಲಯದ ಅಧಿಕಾರಿ ತುಳಸಿ ಹೇಳಿದರು. ಕುಶಾಲನಗರ ಸಮೀಪದ ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾವಿನ ಹಳ್ಳ, ಕಟ್ಟೆ ಹಾಡಿ ಪ್ರದೇಶದ ಪೋಷಕರು ಮತ್ತು ಮಕ್ಕಳ ಸಭೆಯಲ್ಲಿ ಮಂಗಳವಾರ ಮಾತನಾಡಿದರು.

ಕೇಂದ್ರ ಸರ್ಕಾರ ಮಕ್ಕಳ ರಕ್ಷಣಾ ಸೇವೆಗಳನ್ನು ಮಿಷನ್ ವಾತ್ಸಲ್ಯ ಎಂಬ ಹೆಸರಿನಲ್ಲಿ ಅನುಷ್ಠಾನಗೊಳಿಸುತ್ತಿದೆ. ಈ ಯೋಜನೆ ಸುಸ್ಥಿರ ಅಭಿವೃದ್ಧಿಯ ಗುರಿಗಳಿಗೆ ಪೂರಕವಾಗಿ ಮಕ್ಕಳ ರಕ್ಷಣೆಗೆ ಆದ್ಯತೆ ನೀಡಲಾಗುವುದು. ಈ ಯೋಜನೆ ಯಾವುದೇ ಮಗುವನ್ನು ನಿರ್ಲಕ್ಷಿಸದಿರಿ ಎಂಬ ಗುರಿಯೊಂದಿಗೆ ಬಾಲ ನ್ಯಾಯ ಪೋಷಣೆ ಮತ್ತು ರಕ್ಷಣೆ ವ್ಯವಸ್ಥೆಯನ್ನು ಬಲಪಡಿಸುವುದರ ಜತೆಗೆ ಮಕ್ಕಳ ಹಕ್ಕುಗಳನ್ನು ಸಂರಕ್ಷಣೆ ಮಾಡಿ, ಅರಿವು ಮೂಡಿಸುವ ಕೆಲಸ ಮಾಡುತ್ತಿದೆ ಎಂದರು.

ಬುಡಕಟ್ಟು ಕೃಷಿಕರ ಸಂಘದ ಮುಖಂಡ ಆರ್.ಕೆ. ಚಂದ್ರ, ಕಾಳಿಂಗ, ಮುತ್ತಮ್ಮ ಸೇರಿದಂತೆ ಪೋಷಕರು, ಮಕ್ಕಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.