ಜಿಲ್ಲೆ

ಮಡಿಕೇರಿ ನಗರಸಭೆ ಸಾಮಾನ್ಯ ಸಭೆಯಲ್ಲಿ ಬಿಸಿ ಬಿಸಿ ಚರ್ಚೆ

ಸುನಿಲ್ ಪೊನ್ನೇಟಿ

ಮಡಿಕೇರಿ:

ನಗರಸಭೆ ಅಧ್ಯಕ್ಷೆ ಪಿ. ಕಲಾವತಿ ಅಧ್ಯಕ್ಷತೆಯಲ್ಲಿ ಸಭೆ ಆರಂಭವಾತ್ತಿದ್ದAತೆಯೇ ಎಸ್‌ಡಿಪಿಐಯ ಅಮೀನ್ ಮೊಹಿಸಿನ್ 6 ತಿಂಗಳಲ್ಲಿ ಕೇವಲ 2 ಸಭೆ ಮಾತ್ರ ನಡೆಸಿರುವ ಬಗ್ಗೆ ಪ್ರಸ್ತಾಪಿಸಿ ಈ ಮೂಲಕ ಮೂಲಕ ಕಾನೂನು ಉಲ್ಲಂಘನೆ ಮಾಡಲಾಗಿದೆ. ಸಾಮಾನ್ಯ ಸಭೆಗಳು ನಡೆಯದ ಕಾರಣ ಕಾಮಗಾರಿಗಳು ಸರಿಯಾಗಿ ಆಗುತ್ತಿಲ್ಲ.

ಸರ್ಕಾರದಿಂದ ಬರುವ ಅನುದಾನ ವಾಪಸ್ ಹೋಗುವಂತೆ ಆಗಿದೆ. ಸ್ಥಾಯಿ ಸಮಿತಿ ರಚಿಸಬೇಕಾಗುತ್ತದೆ ಎನ್ನುವ ಕಾರಣಕ್ಕೆ ಸಾಮಾನ್ಯ ಸಭೆ ನಡೆಸುತ್ತಿಲ್ಲ. ಈ ಮೂಲಕ ಜನಪ್ರತಿನಿಧಿಳನ್ನು ಅಧಿಕಾರದಿಂದ ವಂಚಿತರನ್ನಾಗಿ ಮಾಡಲಾಗಿದೆ. ನಗರಸಭೆಯ ಯಾವುದೇ ಕೆಲಸಗಳು ಸರಿಯಾಗಿ ಆಗುತ್ತಿಲ್ಲ.

ಇದಕ್ಕಾಗಿ ಅಧ್ಯಕ್ಷರು ಜನತೆಯ ಕ್ಷಮೆ ಕೇಳಬೇಕು ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಕಲಾವತಿ ನಾವೇನೂ ನಗರಸಭೆಯೊಳಗೆ ಸುಮ್ಮನೆ ಕುಳಿತಿಲ್ಲ. 6 ತಿಂಗಳಿನಿAದ ಎಲ್ಲಾ ಕೆಲಸಗಳನ್ನು ಮಾಡಿಕೊಂಡು ಬರಲಾಗುತ್ತಿದೆ. ಹಾಗಾಗಿ ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ ಎಂದರು. ಈ ಸಂದರ್ಭ ಮಧ್ಯಪ್ರವೇಶಿಸಿದ ಉಪಾಧ್ಯಕ್ಷ ಮಹೇಶ್ ಜೈನಿ ಮಳೆ ಇದ್ದುದರಿಂದ ನಗರಸಭೆ ಅಧಿಕಾರಿಗಳು, ಸಿಬ್ಬಂದಿ ಆ ಬಗ್ಗೆ ಹೆಚ್ಚಿನ ಆದ್ಯತೆ ಕೊಟ್ಟಿದ್ದರು. ಹಾಗಾಗಿ ಸಭೆ ನಡೆಸಲು ಆಗಿರಲಿಲ್ಲ. ಇನ್ನು ಮುಂದೆ ಕನಿಷ್ಠ 45 ದಿನಕ್ಕೆ ಒಂದು ಸಭೆ ನಡೆಸಲಾಗುವುದು ಎಂದರು. ಈ ಸಂದರ್ಭ ಮಾತನಾಡಿದ ಅಮೀನ್ ಮೊಹಿಸಿನ್, ಪ್ರತಿ ತಿಂಗಳೂ ಸಭೆ ಕರೆಯದಿದ್ದರೆ ವಿರೋಧ ಪಕ್ಷವೇ ಸಭೆ ಕರೆಯಲಿದೆ ಎಂದು ಎಚ್ಚರಿಸಿದರು.

ನಗರೋತ್ಥಾನ 4ನೇ ಹಂತದ ಕೆಲಸಗಳು ಸರಿಯಾಗಿ ನಡೆಯುತ್ತಿಲ್ಲ ಎಂದು ಅಮೀನ್ ಮೊಹಿಸಿನ್ ಆಕ್ಷೇಪ ವ್ಯಕ್ತಪಡಿಸಿದರು. ಈ ಬಗ್ಗೆ ಸಂಬAಧಿಸಿದ ಅಧಿಕಾರಿಯಿಂದ ಮಾಹಿತಿ ಬಯಸಿದಾಗ ಅವರು ನಗರೋತ್ಥಾನ 4ನೇ ಹಂತಕ್ಕೆ 40 ಕೋಟಿ ರೂ. ಬಿಡುಗಡೆ ಆಗಿದೆ. ಇದರಲ್ಲಿ 12 ಕೋಟಿ ರೂ. ರಸ್ತೆಗೆ, 9.5 ಕೋಟಿ ರೂ. ಕಾವೇರಿ ಕಲಾ ಕ್ಷೇತ್ರಕ್ಕೆ. ಬೀದಿ ದೀಪ ಅಳವಡಿಕೆಗೆ ನಿಗದಿಯಾಗಿದ್ದ 1.5 ಕೋಟಿ ರೂ. ಬದಲಾವಣೆ ಮಾಡಿ ರಾಜಸೀಟ್ ರಸ್ತೆಗೆ ಕಾಂಕ್ರೀಟ್ ಹಾಕಲು ಸರ್ಕಾರಕ್ಕೆ ಬರೆಯಲಾಗಿದೆ. ನೀರು ಪೂರೈಕೆಗೆ ನಿಗದಿಯಾಗಿದ್ದ ಮೊತ್ತವನ್ನೂ ಬೇರೆ ಉದ್ದೇಶಕ್ಕೆ ಬದಲಾವಣೆ ಮಾಡಲಾಗಿದೆ ಎಂದು ಮಾಹಿತಿ ನೀಡುತ್ತಿದ್ದಂತೆಯೇ ಸರ್ವ ಸದಸ್ಯರೂ ಅಧಿಕಾರಿಗಳ ವಿರುದ್ಧ ಮುಗಿ ಬಿದ್ದರು.

ನಿಗದಿತ ಉದ್ದೇಶಕ್ಕೆ ನಿಗದಿಯಾಗಿದ್ದ ಮೊತ್ತವನ್ನು ಅದೇ ಉದ್ದೇಶಕ್ಕೆ ಬಳಸಬೇಕು. ಬದಲಾವಣೆ ಸಂದರ್ಭ ಆಡಳಿತ ಮಂಡಳಿ ಗಮನಕ್ಕೆ ಯಾಕೆ ತರಲಿಲ್ಲ. 1.5 ಕೋಟಿ ರೂ. ಕಾಮಗಾರಿ ತಡೆಹಿಡಿಯಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭ ಮಧ್ಯಪ್ರವೇಶ ಮಾಡಿದ ಪೌರಾಯುಕ್ತ ಹೆಚ್.ಆರ್. ರಮೇಶ್, ನಗರೋತ್ಥಾನ ಕಾಮಗಾರಿ ನಿರ್ಧಾರಕ್ಕೆ ಬೇರೆ ಸೀಮಿತಿ ಇದೆ. ಶಾಸಕರು ಇದರ ಅಧ್ಯಕ್ಷರಾಗಿದ್ದಾರೆ. ಈ ಸಭೆಯಲ್ಲೇ ಕಾಮಗಾರಿ ಬದಲಾವಣೆ ನಿರ್ಧಾರ ಮಾಡಲಾಗಿತ್ತು. ಅಧ್ಯಕ್ಷರು ಕೂಡ ಇದಕ್ಕೆ ಸಹಿ ಹಾಕಿದ್ದಾರೆ. ತಡೆ ನೀಡುವ ನಿರ್ಧಾರ ಮತ್ತೆ ಅದೇ ಸಭೆಯಲ್ಲಿ ಆಗಬೇಕು ಎಂದರು.

ನಗರಸಭೆ ಕಟ್ಟಡಕ್ಕೆ ಛಾವಣಿ ಅಳವಡಿಕೆ ಕಾಮಗಾರಿ ಸರಿಯಾಗಿ ನಡೆದಿಲ್ಲ. ಮಳೆಗಾಲದಲ್ಲಿ ಸೋರುತ್ತಿದೆ. ಛಾವಣಿ ಅಳವಡಿಕೆಗೆ 1.25 ಕೋಟಿ ರೂ. ಖರ್ಚು ಮಾಡುವ ಮೂಲಕ ವ್ಯರ್ಥ ಮಾಡಲಾಗಿದೆ. ಇದರಲ್ಲಿ ಗೋಲ್ಮಾಲ್ ನಡೆದಿದೆ. ತನಿಖೆ ಆಗಬೇಕು ಎಂದು ಸತೀಶ್ ಒತ್ತಾಯಿಸಿದರು. ಇಲ್ಲಿ ಗುಣಮಟ್ಟದ ಕೆಲಸ ಆಗಿಲ್ಲ. ಗುತ್ತಿಗೆದಾರನಿಗೆ ಹೇಗೆ ಹಣ ಪಾವತಿ ಮಾಡಿದ್ದೀರಿ ಎಂದು ಅಮೀನ್ ಮೊಹಿಸಿನ್ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಅಧ್ಯಕ್ಷೆ ಗುತ್ತಿಗೆದಾರನಿಗೆ ಈಗಾಗಲೇ 70 ಲಕ್ಷ ರೂ. ಬಿಡುಗಡೆ ಮಾಡಲಾಗಿದೆ. ಅವರನ್ನು ಕರೆಯಿಸಿ ಗುಣಮಟ್ಟದ ಕೆಲಸ ಮಾಡುವಂತೆ ಸೂಚಿಸಲಾಗುವುದು. ಅಲ್ಲಿಯ ತನಕ ಉಳಿದ ಮೊತ್ತ ತಡೆಹಿಡಿಯಲಾಗುವುದು ಎಂದರು.

ಸದಸ್ಯರಾದ ಕೆ.ಎಸ್. ರಮೇಶ್, ಅರುಣ್ ಶೆಟ್ಟಿ, ಕೆ.ಎಸ್. ರಮೇಶ್, ಶ್ವೇತಾ ಪ್ರಶಾಂತ್, ಮನ್ಸೂರ್, ಯಾಕೂಬ್, ಅಪ್ಪಣ್ಣ, ಸವಿತಾ ರಾಕೇಶ್, ಬಷೀರ್, ಉಮೇಶ್ ಸುಬ್ರಮಣಿ ಮತ್ತಿತರರು ಚರ್ಚೆಯಲ್ಲಿ ಪಾಲ್ಗೊಂಡಿದ್ದರು.