ವಿಜಯಪುರ: ಹಸಿವು, ಬಡತನ, ನಿರುದ್ಯೋಗ, ಕೋಮುವಾದ ಮುಕ್ತ ಭಾರತ ನಿರ್ಮಾಣ ಆಳುವ ವರ್ಗದ ಆದ್ಯತೆಯಾಗಬೇಕು. ಆದರೆ, ಪ್ರಸ್ತುತ ದೇಶದಲ್ಲಿ ಬಂಡವಾಳಶಾಹಿಗಳ ಹಿತರಕ್ಷಣೆಗೆ ಮಾತ್ರ ಆದ್ಯತೆ ಸಿಗುತ್ತಿದೆ ಎಂದು ಎಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ರಾಜ್ಯಾಧ್ಯಕ್ಷೆ ಮೀನಾಕ್ಷಿ ಬಾಳಿ ಅಸಮಾಧಾನ ಹೊರಹಾಕಿದರು.
ನಗರದ ಸರ್ಕಾರಿ ನೌಕರರ ಭವನದಲ್ಲಿ ಗುರುವಾರ ಹಮ್ಮಿಕೊಂಡ ಜನವಾದಿ ಮಹಿಳಾ ಸಂಘಟನೆಯ 12ನೇ ಜಿಲ್ಲಾ ಸಮ್ಮೇಳನದ ಧ್ವಜ ರೋಹಣ ನೆರವೇರಿಸಿ ಅವರು ಮಾತನಾಡಿದರು.
ಕೋಮುವಾದದ ವಿಷ ಬೀಜ ಬಿತ್ತುತ್ತಿರುವ ಬಿಜೆಪಿಗೆ ರಾಜ್ಯದಲ್ಲಿ ಜನ ಪಾಠ ಕಲಿಸಿದ್ದಾರೆ. ಅದೇ ರೀತಿ ಜಿಲ್ಲೆಯಲ್ಲಿಯೂ ರಾಜಕೀಯ ಚಿತ್ರಣ ಬದಲಾಗಿದೆ. ಎಂಟು ವಿಧಾನ ಸಭೆ ಕ್ಷೇತ್ರಗಳ ಪೈಕಿ ಆರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯಸಾಧಿಸಿದ್ದು, ಬಿಜೆಪಿ ಮತ್ತು ಜೆಡಿಎಸ್ ತಲಾ ಒಂದು ಕ್ಷೇತ್ರದಲ್ಲಿ ಜಯ ಸಾಧಿಸಿವೆ. ಲೋಕಸಭೆ ಕ್ಷೇತ್ರವನ್ನು ಬಿಜೆಪಿ ಉಳಿಸಿಕೊಂಡಿದೆ. ಆದರೆ, ಬಹುತೇಕ ಕಾಂಗ್ರೆಸ್ ಮುನ್ನಡೆ ಸಾಧಿಸಿದ್ದು, ಕೋಮುವಾದಿ, ಸ್ತ್ರೀ ವಿರೋಧಿ ಪಕ್ಷಕ್ಕೆ ಹಿನ್ನಡೆಯಾಗಿದೆ. ಆದರೂ ಬಿಜೆಪಿ ಕೋಮುವಾದದ ಅಜೆಂಡಾ ಮುಂದುವರಿಸಿಕೊಂಡು ಹೊರಟಿದ್ದು, ಯುವಜನತೆ ಎಚ್ಚರವಾಗಿರಬೇಕೆಂದರು.
ಕಲಬುರಗಿಯ ಜಿಲ್ಲಾ ಕಾರ್ಯದರ್ಶಿ ಪದ್ಮಿನಿ ಕಿರಣಗಿ ಮಾತನಾಡಿ, ರಾಜ್ಯದಲ್ಲಿ ಸಂಘಟನೆ ದಿನೇ ದಿನೇ ಬಳಿಷ್ಠಗೊಳುತ್ತಿದೆ. ಅತ್ಯಾಚಾರ ಪ್ರಕರಣ, ಕೋಮುವಾದ ಪ್ರಕರಣಗಳನ್ನು ವಿರೋಧಿಸಿ ನಿರಂತರವಾಗಿ ಹೋರಾಟ ರೂಪಿಸಿಕೊಂಡು ಬರಲಾಗುತ್ತಿದೆ. ಪೂರ್ಣ ಪ್ರಮಾಣದಲ್ಲಿ ಕೆಲಸ ಮಾಡುವವರ ಕೊರತೆಯ ನಡುವೆಯೂ ಸಂಘಟನೆ ವೇಗವಾಗಿ ಬೆಳೆಯುತ್ತಿದ್ದು, ಜ್ವಲಂತ ಸಮಸ್ಯೆಗಳ ವಿರುದ್ಧ ಹೋರಾಟ ರೂಪಿಸಲಾಗುತ್ತಿದೆ. ಗ್ರಾಮೀಣ ಭಾಗಕ್ಕೂ ಸಂಘಟನೆ ವಿಸ್ತರಿಸುವ ನಿಟ್ಟಿನಲ್ಲಿ ಕಾರ್ಯಕರ್ತರು ಶ್ರಮಿಸಬೇಕೆಂದರು.
ಕಳೆದ 40 ವರ್ಷಗಳಿಂದ ಹೋರಾಟದ ಹಾದಿಯಲ್ಲಿರುವ ಸೋನುಬಾಯಿ ಬ್ಯಾಳಿ ಮತ್ತು ಸಾಹೇಬಿ ಶೇಖ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಜಿಲ್ಲಾಧ್ಯಕ್ಷೆ ಭಾರತಿ ವಾಲಿ, ಸುರೇಖಾ ರಜಪೂತ, ಹಿರಿಯ ಹೋರಾಟಗಾರ್ತಿ ಅನಸೂಯಾ ಹಜೇರಿ, ಸುನಂದಾ ನಾಯಕ, ಸುವರ್ಣ ಹಲಗಣಿ, ಸಾಹೇಬಿ ಶೇಖ್, ದಾಕ್ಷಾಯಿಣಿ ಉಡೇದ, ವೀರಮ್ಮ ಅಂಗಡಿಮಠ, ರಾಜಮಾ ನದಾಫ, ಸೋನುಬಾಯಿ ಬ್ಯಾಳಿ ಮತ್ತಿತರರಿದ್ದರು.