ಜಿಲ್ಲೆ

ಮೀನಾ ಬಜಾರ್ ಸೀಲ್‌ಡೌನ್!

Mysuru

ಮೈಸೂರು: ಮೂರನೇ ಹಂತದ ಲಾಕ್‌ಡೌನ್ ಸಡಿಲಿಕೆಯಾಗಿ ನಗರದಲ್ಲಿ ಎಲ್ಲ ರಸ್ತೆಗಳಲ್ಲಿ ವ್ಯಾಪಾರ-ವಹಿವಾಟಿಗೆ ಅವಕಾಶ ಮಾಡಿಕೊಟ್ಟಿದ್ದರೂ, ಹೆಸರುವಾಸಿಯಾಗಿರುವ ಮೀನಾ ಬಜಾರ್ ಮಾತ್ರ ಈಗಲೂ ಲಾಕ್‌ಡೌನ್ ಆಗಿದೆ.

ಬಜಾರ್ ಮಾರ್ಗದಲ್ಲಿ ಯಾರೂ ಸಂಚರಿಸಬಾರದು ಎನ್ನುವ ಉದ್ದೇಶದಿಂದ ಅಂಗಡಿ ಮಾಲೀಕರೆ ಸಾಡೇ ರಸ್ತೆಯನ್ನೇ ಸ್ವತಃ ಸೀಲ್‌ಡೌನ್ ಮಾಡಿಕೊಂಡಿದ್ದಾರೆ. ಹೀಗಾಗಿ ಸದಾ ಜನರಿಂದ ತುಂಬಿರುತ್ತಿದ್ದ ಸಾಡೇ ರಸ್ತೆ, ಮೀನಾ ಬಜಾರ್ ಖಾಲಿ, ಖಾಲಿಯಾಗಿವೆ.

ಕಡಿಮೆ ಬೆಲೆಗೆ ಬಟ್ಟೆ, ಪಾದರಕ್ಷೆ, ಸೀರೆ, ಬ್ಲೌಸ್, ಅಲಂಕಾರಿಕ ವಸ್ತುಗಳಿಗೆ ಹೆಸರುವಾಸಿಯಾದ ಬಜಾರ್‌ನಲ್ಲಿ ಸದಾ ಜನರು ತುಂಬಿರುತ್ತಿದ್ದರು. ಅಲ್ಲದೆ, ಈಗ ರಂಜಾನ್ ತಿಂಗಳಲ್ಲಿ ಇಲ್ಲಿ ಭರ್ಜರಿ ವ್ಯಾಪಾರ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಸಾಡೇ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅವಕಾಶವಿಲ್ಲದಂತೆ ಬಂದ್ ಮಾಡಿ ಪೊಲೀಸರು, ನಗರಪಾಲಿಕೆ ವ್ಯಾಪಾರ-ವಹಿವಾಟಿಗೆ ಅವಕಾಶ ಮಾಡಿಕೊಡುತ್ತಿತ್ತು.

ಆದರೆ, ಈ ಬಾರಿ ಕರೊನಾ ವೈರಸ್‌ನಿಂದಾಗಿ ಬಜಾರ್ ಅನ್ನೇ ವರ್ತಕರೇ ಸಂಪೂರ್ಣ ಲಾಕ್‌ಡೌನ್ ಮಾಡಿಕೊಂಡಿದ್ದರೆ, ರಂಜಾನ್ ತಿಂಗಳಲ್ಲಿ ಕಾಲಿಡಲು ಸಾಧ್ಯವಿಲ್ಲದಷ್ಟು ಜನರು ಬಜಾರ್‌ಗೆ ಬರುವುದರಿಂದ ಅವರನ್ನು ನಿಯಂತ್ರಿಸಲು ಸಾಧ್ಯವಾಗುವುದಿಲ್ಲ. ನಗರ ಅಲ್ಲದೆ, ಅಕ್ಕಪಕ್ಕದ ಜಿಲ್ಲೆಗಳಿಂದಲೂ ಮುಸ್ಲಿಂ ಮಹಿಳೆಯರು, ಮಕ್ಕಳು ಹೆಚ್ಚಾಗಿ ಬರುವುದರಿಂದ ಅವರ ಆರೋಗ್ಯವೂ ಅತಿ ಮುಖ್ಯ. ಯಾರಿಗಾದರೂ ವೈರಸ್ ಕಂಡುಬಂದರೆ ಅದು ಇಡೀ ಸಮೂಹವನ್ನೇ ಆವರಿಸಿಕೊಳ್ಳುವ ಅಪಾಯವಿದೆ. ಆದ್ದರಿಂದ ವ್ಯಾಪಾರ ನಷ್ಟವಾದರೂ ಚಿಂತೆ ಇಲ್ಲ ರಂಜಾನ್ ಮುಗಿಯುವವರೆವಿಗೂ ಅಂಗಡಿಗಳನ್ನು ತೆರೆಯುವುದಿಲ್ಲ ಎನ್ನುವ ನಿರ್ಧಾರಕ್ಕೆ ಅಲ್ಲಿನ ವ್ಯಾಪಾರಸ್ಥರು ಬಂದಿದ್ದಾರೆ.

ಹೀಗಾಗಿ ಮೂರನೇ ಲಾಕ್‌ಡೌನ್ ಬಳಿಕ ನಗರದ ಎಲ್ಲ ರಸ್ತೆಗಳಲ್ಲಿರುವ ಅಂಗಡಿಗಳು ವ್ಯಾಪಾರ ಆರಂಭಿಸಿದ್ದರೆ ಸಾಡೇ ರಸ್ತೆಯ ಮೀನಾ ಬಜಾರ್ ಲಾಕ್‌ಡೌನ್ ಮುಂದುವರಿದಿದೆ.

ಹೆಸರಿಗೆ ಧಕ್ಕೆಯಾಗುತ್ತದೆ: ಕರೊನಾ ವೈರಸ್ ಆತಂಕ ಇನ್ನೂ ದೂರವಾಗಿಲ್ಲ. 200 ಅಂಗಡಿಗಳು, ಹಬ್ಬದ ಸಮಯದಲ್ಲಿ ರಸ್ತೆ, ಫುಟ್‌ಪಾತ್‌ನಲ್ಲಿ ಹಾಕುವ ತಾತ್ಕಾಲಿಕ ಅಂಗಡಿ, ತಳ್ಳುಗಾಡಿಗಳು ಹೆಚ್ಚಾಗಿರುತ್ತವೆ. ಇಂತಹ ಸಂದರ್ಭದಲ್ಲಿ ಅಂಗಡಿ ತೆರೆದು ವೈರಸ್ ಹರಡಿದರೆ ಅದು ಮುಸ್ಲಿಮರು ಹಾಗೂ ಮೀನಾ ಬಜಾರ್ ಹೆಸರಿಗೆ ಧಕ್ಕೆ ಉಂಟಾಗುತ್ತದೆ. ಆದ್ದರಿಂದ ವರ್ತಕರು ಹಬ್ಬ ಮುಗಿಯುವವರೆವಿಗೂ ಅಂಗಡಿ ತೆರೆಯದಿರಲು ನಿರ್ಧರಿಸಿದ್ದಾರೆ ಎಂದು ಮೀನಾ ಬಜಾರ್ ಮರ್ಚೆಂಟ್ಸ್ ವೆಲ್‌ಫೇರ್ ಅಸೋಸಿಯೇಷನ್ ಅಧ್ಯಕ್ಷ ಇಲ್ಯಾಸ್ ಬೇಗ್ ತಿಳಿಸಿದ್ದಾರೆ.