ನರಗುಂದ: ಮಹಾಶಿವರಾತ್ರಿ ವರ್ಷಕೊಮ್ಮೆ ಬರುವ ಅತ್ಯಂತ ಪವಿತ್ರದ ದಿನವಾಗಿದೆ. ಸಮಾಜದಲ್ಲಿ ಎಷ್ಟು ಹಣ ಗಳಿಸಿದರೂ ಅದು ಜೀವನದ ಜಂಜಾಟಕ್ಕೆ ಮಾರ್ಗವಾಗುತ್ತದೆ. ಜೀವನ ಸಾಫಲ್ಯಗೊಳ್ಳಬೇಕಾದರೆ ಮೊದಲಿಗೆ ಶಿವನ ಧ್ಯಾನ ಮಾಡುವುದನ್ನು ಕಲಿತುಕೊಳ್ಳಬೇಕು ಎಂದು ಪತ್ರಿವನಮಠದ ಡಾ. ಗುರುಸಿದ್ದವೀರ ಶಿವಯೋಗಿ ಶಿವಾಚಾರ್ಯರು ಹೇಳಿದರು.'
ಪಟ್ಟಣದ ಪುಣ್ಯಾರಣ್ಯ ಪತ್ರಿವನಮಠದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಶಿವರಾತ್ರಿ ಮಹೋತ್ಸವದ ಧಾರ್ವಿುಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಭೇಟೆ ಆಡುವುದನ್ನೇ ಮುಖ್ಯ ಕುಲಕಸುಬನ್ನಾಗಿ ಮಾಡಿಕೊಂಡಿದ್ದ ಬೇಡರ ಕಣ್ಣಪ್ಪನಿಗೆ ಒಂದಿನ ಭೇಟೆ ಸಿಗದೇ ಹಸುವಿನಿಂದ ತೊಂದರೆಗೊಳಗಾಗಿ ರಾತ್ರಿಯೆಲ್ಲ ಬಿಲ್ವ ಪತ್ರೆಗಳ ಗಿಡದಲ್ಲಿ ಕುಳಿತು ಶಿವನ ಧ್ಯಾನ ಮಾಡಿದ್ದ. ಹೀಗಾಗಿ ಅವನಿಗೆ ಶಿವನು ಒಲಿದಿದ್ದ ಎಂದು ಬೇಡರ ಕಣ್ಣಪ್ಪನ ಇತಿಹಾಸದ ಕಥೆಯನ್ನು ತಿಳಿಸುವ ಮೂಲಕ ಶಿವ ಧ್ಯಾನದ ಮಹತ್ವದ ಬಗ್ಗೆ ತಿಳಿಸಿದರು.
ಮಹಾಶಿವರಾತ್ರಿ ಅಂಗವಾಗಿ ಭಾರತೀಯ ಸಂಗೀತ ಮಹಾವಿದ್ಯಾಲಯದ ಶ್ರೀನಿವಾಸ ಇನಾಮದಾರ ಅವರಿಂದ ಶಿವಗೀತೆ ಪ್ರಸ್ತುತಪಡಿಸಲಾಯಿತು. ಚಿದಂಬರ ಪುರೋಹಿತ ತಬಲಾ ಸಾಥ್ ನೀಡಿದರು. ಕಾರ್ಯಕ್ರಮಕ್ಕೂ ಮುನ್ನ ಶಿವನ ಮೂರ್ತಿಗೆ ವಿಶೇಷ ಪೂಜೆ, ಪುನಸ್ಕಾರ ಸಲ್ಲಿಸಲಾಯಿತು. ಈಶ್ವರಯ್ಯ ಮಠಪತಿ, ಬಸವರಾಜ ಹಾದಿಮನಿ, ಶಂಕರಪ್ಪ ಹೂಗಾರ, ಪೂಜಾ, ಉಪಸ್ಥಿತರಿದ್ದರು.