ಜಿಲ್ಲೆ

ರೈತ ಸಂತೆಯಲ್ಲಿ ಸಿರಿಧಾನ್ಯಗಳ ಧ್ಯಾನ

ವಿಕ್ರಮ ನಾಡಿಗೇರ ಧಾರವಾಡ
ಹಿಂದಿನ ಕಾಲದಲ್ಲಿ ಸಿರಿಧಾನ್ಯಗಳ ಪರಿಚಯ ಎಲ್ಲರಿಗೂ ಇತ್ತು. ಆದರೆ ಯುವ ಜನರಿಗೆ ಸಿರಿಧಾನ್ಯದ ಬಗ್ಗೆ ಮಾಹಿತಿ ಇರಲಿ, ಆ ಪದಾರ್ಥಗಳು ಹೇಗಿವೆ ಎಂಬುದೂ ಗೊತ್ತಿಲ್ಲ. ಇದೇ ಕಾರಣಕ್ಕೆ ಎಲ್ಲೆಡೆ ಸಿರಿಧಾನ್ಯಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಇದೀಗ ಕೃಷಿ ವಿಶ್ವ ವಿದ್ಯಾಲಯ ಸಿರಿಧಾನ್ಯಗಳನ್ನು ಪ್ರಧಾನವಾಗಿ ಇಟ್ಟುಕೊಂಡು ಕೃಷಿ ಮೇಳ ನಡೆಸುತ್ತಿರುವುದು ವಿಶೇಷವಾಗಿದೆ.
ಮೊದ ಮೊದಲು ನಿರ್ಲಕ್ಷಿತ ಬೆಳೆ ಎಂಬ ಹಣೆಪಟ್ಟೆ ಹೊತ್ತಿದ್ದ ಸಿರಿಧಾನ್ಯಗಳಿಗೆ ಇದೀಗ ಬೇಡಿಕೆ ಸಹ ಹೆಚ್ಚಿದೆ. ಕೃಷಿ ಮೇಳದ ಘೋಷ ವಾಕ್ಯಕ್ಕೆ ಒಪ್ಪುವಂತೆ ಮೇಳದಲ್ಲಿ ಸಿರಿಧಾನ್ಯಗಳ ಸಿರಿ ಮೇಳೈಸಿದೆ. ಮೇಳಕ್ಕೆ ಆಗಮಿಸಿದ್ದ ಲಕ್ಷಾಂತರ ಜನರು ಸಿರಿಧಾನ್ಯಗಳು ಸೇರಿ ಅವುಗಳಿಂದ ಉತ್ಪಾದಿಸಿದ ಉತ್ಪನ್ನಗಳ ಬಗ್ಗೆ ಸಮಗ್ರ ಮಾಹಿತಿ ಪಡೆದಿದ್ದಾರೆ.
ಕೃಷಿ ಮೇಳದಲ್ಲಿ ಸಿರಿಧಾನ್ಯಗಳಿಗೆ 24 ಮಳಿಗೆಗಳ ಪ್ರತ್ಯೇಕ ಆವರಣ ಸ್ಥಾಪಿಸಲಾಗಿದೆ. ಇಲ್ಲಿ ಧಾನ್ಯ ಪ್ರದರ್ಶನ, ಯಾವ ಪದಾರ್ಥದಿಂದ ಏನೆಲ್ಲ ಪ್ರಯೋಜನ ಎಂಬ ಮಾಹಿತಿ ನೀಡಲಾಗುತ್ತಿದೆ. ಧಾರವಾಡ ಮಾತ್ರವಲ್ಲದೆ ಹಾವೇರಿ, ಸಿಂಧನೂರ, ಬೆಳಗಾವಿ, ವಿಜಯಪುರ ಸೇರಿ ರಾಜ್ಯದ ವಿವಿಧ ಜಿಲ್ಲೆಗಳ ರೈತ ಉತ್ಪಾದಕ ಕಂಪನಿಗಳು ಸಿರಿಧಾನ್ಯಗಳ ಪರಿಚಯ, ಮಾರುಕಟ್ಟೆ ಬಗ್ಗೆ ರೈತರಿಗೆ ಮಾಹಿತಿ ಒದಗಿಸುತ್ತಿದ್ದಾರೆ. ಜತೆಗೆ ಉತ್ಪನ್ನಗಳ ಮಾರಾಟ ಸಹ ಮಾಡುತ್ತಿದ್ದಾರೆ.
ಮಳಿಗೆಗಳಲ್ಲಿ ರಾಗಿ, ನವಣೆ, ಸಾಮೆ, ಹಾರಕ, ಕೊರಲೆ, ಹೀಗೆ ಸಿರಿಧಾನ್ಯಗಳಿಂದ ಸಿದ್ಧಪಡಿಸಿದ ಸಾವಕ್ಕಿ ಪಡ್ಡು, ಸಾವಕ್ಕಿ ದೋಸಾ, ಸಾವಕ್ಕಿ ಮೊಸರನ್ನ, ರಾಗಿ ರೊಟ್ಟಿ, ಚಕ್ಕಲಿ ಅಂತಹ ನೂರಾರು ಉತ್ಪನ್ನಗಳು ಗ್ರಾಹಕರನ್ನು ಆಕರ್ಷಿಸುತ್ತಿವೆ. ಕೆಲ ಧಾನ್ಯಗಳ ಬಗ್ಗೆ ಮಾತ್ರ ಗೊತ್ತಿದ್ದಂತಿದೆ. ಸಾಮೆ, ಬರಗು, ಊದಲು, ಹಾರಕ, ಕೊರಲು ಬಗ್ಗೆ ಜನರು ಹೆಚ್ಚಾಗಿ ಮಾಹಿತಿ ಪಡೆಯುತ್ತಿದ್ದಾರೆ. ಮೊದಲ ದಿನ ಅಷ್ಟೊಂದು ಜನರು ಇರಲಿಲ್ಲ. ಎರಡು ದಿನಗಳಿಂದ ಮಾರಾಟ ಜೋರಾಗಿದೆ ಎನ್ನುತ್ತಾರೆ ಮಳಿಗೆ ಮಾಲೀಕರು.
ಉತ್ತಮ ಆರೋಗ್ಯಕ್ಕೆ ಬೇಕು ಸಿರಿಧಾನ್ಯ: ಆಧುನಿಕ ಆಹಾರ ಪದ್ಧತಿ ಹಾಗೂ ಜೀವನ ಶೈಲಿಯಿಂದ ದೇಹದಲ್ಲಿ ವಿವಿಧ ಪೋಷಕಾಂಶಗಳ ಕೊರತೆ ಜತೆಗೆ ರೋಗಕ್ಕೆ ತುತ್ತಾಗುವಂತಾಗಿದೆ. ಮರೆತು ಹೋದ ಆಹಾರಗಳನ್ನು ಮತ್ತೆ ನಮ್ಮ ಊಟದ ತಟ್ಟೆಗೆ ಕರೆ ತರಬೇಕು. ಇದರಿಂದ ಶರೀರಕ್ಕೆ ರೋಗ ನಿರೋಧಕ ಶಕ್ತಿ ಮರಳಿ ಪಡೆಯಬೇಕಿದೆ. ಇದಕ್ಕೆ ಸಿರಿಧಾನ್ಯ ಹಾಗೂ ಸಾವಯವ ಪದಾರ್ಥಗಳೇ ಮದ್ದು ಎಂಬುದು ರೈತರ ಅಭಿಪ್ರಾಯ.

ಸಿರಿಧಾನ್ಯಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾದರೆ ಮಾತ್ರ ರೈತರು ಬೆಳೆಯಲು ಆಸಕ್ತಿ ತೋರುತ್ತಾರೆ. ಇದೇ ಕಾರಣಕ್ಕೆ ಈ ಬಾರಿ ಸುಸ್ಥಿರ ಕೃಷಿಗೆ ಸಿರಿಧಾನ್ಯಗಳು ಘೋಷ ವ್ಯಾಕ್ಯದೊಂದಿಗೆ ಕೃಷಿ ಮೇಳ ಆಯೋಜಿಸಲಾಗಿದೆ. ಜನರಿಂದ ಉತ್ತಮ ಸ್ಪಂದನೆ ಸಿಕ್ಕಿದ್ದು, ಸಿರಿಧಾನ್ಯಗಳ ಬಗ್ಗೆ ಹೆಚ್ಚಿನ ಜನರು ಮಾಹಿತಿ ಪಡೆಯುತ್ತಿದ್ದಾರೆ. ವರ್ಷ ಪೂರ್ತಿ ಸಿರಿಧಾನ್ಯಗಳ ಬಗ್ಗೆ ಜಾಗೃತಿ ಮೂಡಿಸುವ ಚಿಂತನೆ ಇದೆ.ಡಾ. ಪಿ.ಎಲ್. ಪಾಟೀಲ, ಕುಲಪತಿ, ಕೃವಿವಿ