ಜಿಲ್ಲೆ

ಕೌಶಲಾಧಾರಿತ ತರಬೇತಿಗೆ ಪ್ರೋತ್ಸಾಹ ನೀಡಿ

Davangere - Desk - Shobha Krishna Gowda

ಚನ್ನಗಿರಿ: ಶಾಲೆಗಳಲ್ಲಿ ಮಕ್ಕಳಿಗೆ ಚಟುವಟಿಕೆ ಆಧರಿತ ಕಲಿಕೆಗೆ ಪೋ›ತ್ಸಾಹ ನೀಡಬೇಕು, ಶಿಕ್ಷಣದ ಜತೆಗೆ ಮಾನವೀಯ ಮೌಲ್ಯ ಹಾಗೂ ಕೌಶಲಾಧರಿತ ತರಬೇತಿಗೆ ಹೆಚ್ಚು ಒತ್ತು ನೀಡಬೇಕು ಎಂದು ಮೆದಿಕೆರೆ ಗ್ರಾಪಂ ಅಧ್ಯಕ್ಷ ಮಹೇಶ್ವರಪ್ಪ ತಿಳಿಸಿದರು.

ತಾಲೂಕಿನ ಮೆದಿಕೆರೆ ಗ್ರಾಮದ ಅರಿವು ಕೇಂದ್ರದಲ್ಲಿ ಬುಧವಾರ ಜಿಪಂ, ತಾಪಂ ಹಾಗೂ ಗ್ರಾಪಂ ಸಹಯೋಗದಲ್ಲಿ ಏರ್ಪಡಿಸಿದ್ದ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಪ್ರತಿಭೆಯನ್ನು ಗುರುತಿಸಿ ಪೋ›ತ್ಸಾಹಿಸಿದರೆ ಮಕ್ಕಳು ಅದರಲ್ಲೇ ಸುಲಭವಾಗಿ ಗುರಿ ತಲುಪುತ್ತಾರೆ. ಅವರಿಗೆ ಇಷ್ಟವಿಲ್ಲದ ಕೆಲಸ ಮಾಡಿಸಿದರೆ ಪ್ರತಿಭೆಯ ಜತೆ ಅವರೂ ಮೂಲೆ ಗುಂಪಾಗುತ್ತಾರೆ. ಮಕ್ಕಳ ಜ್ಞಾನಕ್ಕೆ ಬೇಕಾದ ಅವಕಾಶ ಮತ್ತು ಮನ್ನಣೆ ನೀಡುವ ಕೆಲಸ ವಾಗಬೇಕು. ಯಾರೂ ದಡ್ಡರಲ್ಲ, ಯಾರೂ ಜಾಣರಲ್ಲ, ಏಕಾಗ್ರತೆಯಿಂದ ಮಾಹಿತಿಯನ್ನು ಸಂಗ್ರಹಿಸುವ ಪ್ರಬುದ್ಧತೆಯನ್ನು ಬೆಳೆಸಬೇಕು ಎಂದರು.

ಅರಿವು ಕೇಂದ್ರದಲ್ಲಿ ಬೇಸಿಗೆ ರಜೆಯಲ್ಲಿ ಗ್ರಾಮೀಣ ಮಕ್ಕಳ ಭೌತಿಕ ಜ್ಞಾನಕ್ಕೆ ಬೇಕಾದ ಸಂಪನ್ಮೂಲ ಮತ್ತು ಚಟುವಟಿಕೆ ಆಧರಿತ ಜ್ಞಾನವನ್ನು ನೀಡಿರುವುದು ಸಾರ್ಥಕವಾಗಿದೆ ಎಂದು ತಿಳಿಸಿದರು.

ಗ್ರಂಥಪಾಲಕ ಕೆ.ಬಿ. ರಂಗಸ್ವಾಮಿ ಮಾತನಾಡಿ, 71 ಚಟುವಟಿಕೆಗಳ ಶಿಬಿರ ಅರ್ಥಪೂರ್ಣವಾಗಿ 25 ಮಕ್ಕಳಿಗೆ 15 ದಿನದಲ್ಲಿ ಸರ್ಕಾರಿ ಕಚೇರಿ ಮತ್ತು ಧಾರ್ವಿುಕ ಸ್ಥಳಗಳಿಗೆ ಭೇಟಿ, ಸ್ಪರ್ಧೆಗಳ ಆಯೋಜನೆ, ಚಟುವಟಿಕೆ ಆಟಗಳಲ್ಲಿ ಭಾಗವಹಿಸುವಿಕೆ ಯಶಸ್ವಿಯಾಗಿದೆ ಎಂದರು.

ಗ್ರಾಪಂ ಮಾಜಿ ಅಧ್ಯಕ್ಷ ಶಿವಕುಮಾರ್, ಸದಸ್ಯರಾದ ಟಿ.ಎಸ್. ರಂಗಸ್ವಾಮಿ, ಸಂತೇಬೆನ್ನೂರು ಗ್ರಂಥಪಾಲಕ ಟಿ.ಎನ್. ರೇವಣ್ಣ, ಸಿದ್ದಲಿಂಗಪ್ಪ, ಬೀರೇಶ್ ಇದ್ದರು.