ಜಿಲ್ಲೆ

ಔಷಧವೇ ಆಹಾರವಾಗದಿರಲಿ

ಅವಿನಾಶ್ ಜೈನಹಳ್ಳಿ

ಮೈಸೂರು: ಆಹಾರ ಪದಾರ್ಥಗಳಲ್ಲಿ ಔಷಧೀಯ ಗುಣಗಳನ್ನು ಪಡೆಯಬೇಕೇ ವಿನಾ ಔಷಧವೇ ಆಹಾರ ಆಗಬಾರದು ಎಂದು ಆಹಾರ ತಜ್ಞೆ ಜಿ.ಎಂ.ಸುನಿತಾ ಸಲಹೆ ನೀಡಿದರು.

ನಗರದ ನೇಗಿಲಯೋಗಿ ಮಹಿಳೆಯರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಮಹಿಳಾ ದಿನಾಚರಣೆಯ ಪ್ರಯುಕ್ತ ಸಂಘದ ಆವರಣದಲ್ಲಿ ಗುರುವಾರ ಆಯೋಜಿಸಿದ್ದ ರಾಗಿಯಿಂದ ತಯಾರಿಸುವ ಅಡುಗೆ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು.

ಪ್ರಸ್ತುತ ಕಾಲದಲ್ಲಿ ಆರೋಗ್ಯವನ್ನು ಮೂಲೆಗೆ ದೂಡಿ ಸಂಪಾದನೆಗಾಗಿ ಓಡುತ್ತಿದ್ದೇವೆ. ಆರೋಗ್ಯವೇ ಭಾಗ್ಯವಾಗಬೇಕು, ಉತ್ತಮ ಆರೋಗ್ಯವಿದ್ದರೆ ನಾವು ದೊಡ್ಡ ಸಾಧನೆಗಳಿಗೆ ಪ್ರಯತ್ನಿಸಬಹುದು. ನಿಮ್ಮ-ನಿಮ್ಮ ಆರೋಗ್ಯಕ್ಕಾಗಿ ಒಂದು ಗಂಟೆಯ ಕಾಲ ಸಮಯ ಮೀಸಲಿಡಿ ಎಂದು ಸಲಹೆ ನೀಡಿದರು.

ಬಾಯಿ ಚಪಲಕ್ಕಾಗಿ ಜಂಕ್‌ಫುಡ್‌ಗಳಾದ ಪಿಜ್ಜಾ, ಬರ್ಗರ್ ಹಾಗೂ ಇತ್ಯಾದಿ ತಿನಿಸುಗಳನ್ನು ತ್ಯಜಿಸಿ ಪ್ರೋಟೀನ್ ದೊರೆಯುವಂತಹ ಮೊಳಕೆ ಕಾಳು, ಸೊಪ್ಪುಗಳನ್ನು ಹೆಚ್ಚೆಚ್ಚು ಬಳಸಿ. ಇಂದು ಅತ್ಯಂತ ವಿಟಮಿನ್‌ಯುಕ್ತ ಆಹಾರ ಪದಾರ್ಥವಾದ ರಾಗಿ ಸಹಾಯದಿಂದ ಅಡುಗೆ ಸ್ಪರ್ಧೆ ನಡೆಯುತ್ತಿರುವುದು ಬಹಳ ಸಂತಸ ತಂದಿದೆ. ಉತ್ತಮ ಆರೋಗ್ಯಕ್ಕಾಗಿ ಮೊದಲು ಮನೆಯ ಮಹಿಳೆ ಬದಲಾಗಬೇಕು ಆಗ ಸಂಪೂರ್ಣ ಮನೆಯ ಜೀವನ ಶೈಲಿ ಬದಲಾಯಿಸಲು ಸಾಧ್ಯ ಎಂದರು.

ಅಡುಗೆ ಸ್ಪರ್ಧೆ ಕಾರ್ಯಕ್ರಮದ ನಂತರ ತೋರಣ ಕಟ್ಟುವ ಸ್ಪರ್ಧೆ ಹಾಗೂ ಇತರ ಆಟದ ಸ್ಪರ್ಧೆಗಳನ್ನು ಆಯೋಜಿಸಿದ್ದು, ಮಹಿಳೆಯರು ಭಾಗವಹಿಸಿ ಸಂಭ್ರಮಿಸಿದರು. ತೀರ್ಪುಗಾರರಾಗಿ ಆಹಾರ ತಜ್ಞೆ ಜಿ.ಎಂ.ಸುನಿತಾ ಹಾಗೂ ಸಂಗೀತ ವಿದ್ವಾನ್ ರಘು ಭಾಗವಹಿಸಿದ್ದರು. ಮಾ.29ರಂದು ಸಂಸ್ಥೆಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ನಡೆಯಲಿದ್ದು, ಅಂದಿನ ದಿನ ಮೊದಲ 3 ಸ್ಥಾನ ಪಡೆದ ವಿಜೇತರಿಗೆ ಬಹುಮಾನ ಹಾಗೂ ಭಾಗವಹಿಸಿದ ಎಲ್ಲ ಸ್ಪರ್ಧಿಗಳಿಗೂ ಪ್ರಮಾಣ ಪತ್ರ ನೀಡುವುದಾಗಿ ಸಂಘದ ಅಧ್ಯಕ್ಷೆ ಜೆ. ಶೋಭ ರಮೇಶ್ ತಿಳಿಸಿದರು. ಖಜಾಂಚಿ ಅನಿತಾ ಹೇಮಂತ್, ಕಾರ್ಯದರ್ಶಿ ಬಿ.ಪಿ.ಉಷಾ ರಾಣಿ ಇತರರಿದ್ದರು.