ಜಿಲ್ಲೆ

ಔಷಧ ಸಸ್ಯಗಳ ಕೃಷಿಗೆ ತಜ್ಞರ ಸಲಹೆ

ಸುನಿಲ್ ಪೊನ್ನೇಟಿ

ಮಡಿಕೇರಿ:

ನೆಕ್ಕಿ ಸೊಪ್ಪು, ಆಡುಸೋಗೆ, ಕಪ್ಪು ಧೂಪ, ಹಿಪ್ಪಿಲಿ, ಮಂಜಿಷ್ಟ,... ಹೀಗೆ ಸಾಮಾನ್ಯವಾಗಿ ನಮ್ಮ ಸುತ್ತಲೂ ಕಂಡುಬರುವ ಸಸ್ಯಗಳಲ್ಲಿ ಔಷಧೀಯ ಅಂಶಗಳಿವೆ. ಇವೂ ಔಷಧಿಗಳಿಗೆ ಬಳಕೆ ಆಗುತ್ತದೆ. ಇವುಗಳನ್ನೂ ಬೆಲೆ ಕೊಟ್ಟು ಕೊಂಡುಕೊಳ್ಳುವವರಿದ್ದಾರೆ. ರೈತರಿಗೆ ಪರ್ಯಾಯ ಆದಾಯವಾಗಿ ಇವುಗಳ ಕೃಷಿ ಮಾಡಬಹುದು ಎನ್ನುವುದನ್ನು ತಜ್ಞರು ಹೇಳುತ್ತಿದ್ದಂತೆ ಅಚ್ಚರಿ ಪಡುವ ಸರದಿ ರೈತರದಾಗಿತ್ತು.

ಹೌದು, ಕರ್ನಾಟಕ ರಾಜ್ಯ ಔಷಧಿ ಗಿಡಮೂಲಿಕಾ ಪ್ರಾಧಿಕಾರ, ಕರ್ನಾಟಕ ಜೀವವೈವಿಧ್ಯ ಮಂಡಳಿ ಹಾಗೂ ಆದಿ ಪೆಪ್ಪರ್ ಡೆಮೋ ಫಾರ್ಮ್ ಮತ್ತು ಸಂಶೋಧನಾ ಕೇಂದ್ರದ ವತಿಯಿಂದ ಗರ್ವಾಲೆ ಗ್ರಾಮದಲ್ಲಿ ಶುಕ್ರವಾರ ಆಯೋಜಿಸಿದ್ದ ಔಷಧಿ ಸಸ್ಯಗಳ ಕ್ಷೇತ್ರೋತ್ಸವ ಕಾರ್ಯಕ್ರಮ ಕೊಡಗಿನಲ್ಲಿ ಔಷಧೀಯ ಸಸ್ಯಗಳ ಕೃಷಿ ಸಾಧ್ಯತೆ ಬಗ್ಗೆ ಬೆಳಕು ಚೆಲ್ಲುವಲ್ಲಿ ಯಶಸ್ವಿಯಾಯಿತು.

ಕೊಡಗಿನ ಬೆಟ್ಟಪ್ರದೇಶಗಳಲ್ಲಿ ಮಾತ್ರ ಬೆಳೆಯುವ ವಿಶಿಷ್ಟ ತಳಿಯ ಆದಿ ಕರಿಮೆಣಸು ತಳಿ ಆವಿಷ್ಕರಿಸಿ ಜನಪ್ರಿಯರಾಗಿರುವ ಗರ್ವಾಲೆ ಗ್ರಾಮದ ನಾಪಂಡ ಪೂಣಚ್ಚ ಅವರ ಆದಿ ಪೆಪ್ಪರ್ ಡೆಮೋ ಫಾರ್ಮ್ ಮತ್ತು ಸಂಶೋಧನಾ ಕೇಂದ್ರದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಔಷಧೀಯ ಸಸ್ಯ ಕ್ಷೇತ್ರಕ್ಕೆ ಸಂಬAಧಿಸಿದ ತಜ್ಞರು ಭವಿಷ್ಯದಲ್ಲಿ ಔಷಧೀಯ ಸಸ್ಯಗಳಿಗೆ ಉಂಟಾಗುವ ಬೇಡಿಕೆ ಬಗ್ಗೆ ಮಾಹಿತಿ ನೀಡಿ, ಉತ್ಪಾದನೆಯ ಹೆಚ್ಚಳ ಅವಶ್ಯಕತೆಯನ್ನು ತಿಳಿಸಿ ಹೇಳಿದರು.

ಭಾರತದಲ್ಲಿ ಸದ್ಯಕ್ಕೆ ಔಷಧೀಯ ಸಸ್ಯಗಳ ಮಾರುಕಟ್ಟೆ ಮೌಲ್ಯ ಸುಮಾರು 7-8 ಲಕ್ಷ ಕೋಟಿ ರೂ. ಇದೆ. ಸದ್ಯದಲ್ಲೇ ಈ ಮೊತ್ತ 11 ಲಕ್ಷ ಕೋಟಿ ರೂ. ವ್ಯವಹಾರ ತಲುಪುವ ನಿರೀಕ್ಷೆ ಇದೆ. ಆದರೆ ಮತ್ತೊಂದು ಕಡೆ ವಿವಿಧ ಕಾರಣಗಳಿಂದ ಔಷಧೀಯ ಸಸ್ಯಗಳು ಕ್ಷೀಣಿಸುತ್ತಿವೆ. ಹಾಗಾಗಿ ದಿನದಿಂದ ದಿನಕ್ಕೆ ಇಂಥ ಸಸ್ಯಗಳಿಗೆ ಬೇಡಿಕೆ ಜಾಸ್ತಿ ಆಗುತ್ತಿದೆ. ಅದರಲ್ಲೂ ಕೃತಕ ಗೊಬ್ಬರಗಳನ್ನು ಬಳಸದೇ ನೈಸರ್ಗಿಕವಾಗಿ ಬೆಳೆಸಿದ ಗುಣಮಟ್ಟದ ಔಷಧೀಯ ಸಸ್ಯಗಳಿಗೆ ಮಾರುಕಟ್ಟೆಯಲ್ಲಿ ಯಾವಾಗಲೂ ಬೇಡಿಕೆ ಇರುವುದರಿಂದ ಕೃಷಿಕರು ಈ ಕ್ಷೇತ್ರದ ಕಡೆ ಗಮನ ಹರಿಸಬಹುದಾಗಿದೆ.

ಕೊಡಗಿನಂಥ ಮಲೆನಾಡಿನ ಜಿಲ್ಲೆಗಳು ಸ್ವಾಭಾವಿಕವಾಗಿ ಹಲವು ವೈವಿಧ್ಯಮಯ ಸಸ್ಯ ಸಂಪತ್ತನ್ನು ಹೊಂದಿದೆ. ಇಲ್ಲಿ ಸೈಸರ್ಗಿಕವಾಗಿ ಸಿಗುವ ಬಹುತೇಕ ಸಸ್ಯಗಳಲ್ಲಿ ಒಂದಿಲ್ಲೊAದು ಔಷಧೀಯ ಅಂಶಗಳು ಇರುತ್ತವೆ. ಸಾಂಪ್ರದಾಯಿಕ ವೈದ್ಯರಿಗೆ ಇಂಥ ಔಷಧೀಯ ಸಸ್ಯಗಳ ಬಗ್ಗೆ ಹೆಚ್ಚಿನ ಅರಿವು ಇರುತ್ತದೆ. ಈ ಬಗೆಯ ಸಸ್ಯಗಳನ್ನು ವಾಣೀಜ್ಯಿಕವಾಗಿ ಬೆಳೆಸುವ ಅವಕಾಶಗಳಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರದ ಹಲವು ಯೋಜನೆಗಳನ್ನು ಇದಕ್ಕಾಗಿ ಬಳಸಿಕೊಳ್ಳಬಹುದಾಗಿದೆ.

ಕೊಡಗಿನಲ್ಲಿ ಕಾಫಿ ಪ್ರಮುಖ ಬೆಳೆ. ಇದರ ಆದಾಯ ವರ್ಷಕ್ಕೆ ಒಂದು ಬಾರಿ ಮಾತ್ರ ಸಿಗುತ್ತದೆ. ಈ ವರ್ಷ ಉತ್ತಮ ಬೆಲೆಯೇನೋ ಸಿಗುತ್ತಿದೆ. ಆದರೆ ಇದೇ ಪರಿಸ್ಥಿತಿ ಮುಂದೆಯೂ ಇರುತ್ತದೆ ಎಂದು ಹೇಳಲು ಆಗುವುದಿಲ್ಲ. ಹಾಗಾಗಿ ಕಾಫಿ ಬೆಳೆಗಾರರು ಅಂತರ ಬೆಳೆಯಾಗಿ ಔಷಧೀಯ ಸಸ್ಯಗಳನ್ನು ಬೆಳೆಯಬಹುದು. ವರ್ಷಪೂರ್ತಿ ಆದಾಯವನ್ನೂ ಗಳಿಸುವ ಅವಕಾಶಗಳು ಇರುತ್ತದೆ ಎನ್ನುತ್ತಾರೆ ತಜ್ಞರು. ನೆಕ್ಕಿ ಸೊಪ್ಪು, ಹಿಪ್ಪಲಿ, ಆಡುಸೋಗೆಯಂಥ ಗಿಡಗಳನ್ನು ಬೇಲಿಗಳಲ್ಲಿ ಬೆಳೆಸಿದರೆ, ಕರಿಧೂಪ, ಅಶೋಕದಂಥ ಮರಗಳನ್ನು ಕಾಫಿ ಗಿಡಗಳ ಮಧ್ಯೆ ನೆರಳು ಮರವಾಗಿ ಬೆಳೆದಬಹುದಾಗಿದೆ ಎನ್ನುವ ಸಲಹೆ ಕೊಡುತ್ತಾರೆ.

ಸದ್ಯದ ಮಟ್ಟಿಗೆ ಔಷಧಿ ಸಸ್ಯಗಳಿಗೆ ಮಾರುಕಟ್ಟೆ ಸಮಸ್ಯೆ ಆಗಬಹುದು. ಹಾಗಾಗಿ ರೈತರು ಸಂಘಟಿತರಾಗಿ ಇವುಗಳನ್ನು ದೊಡ್ಡ ಪ್ರಮಾಣದಲ್ಲಿ ಬೆಳೆಯುವುದರಿಂದ ಮಾರುಕಟ್ಟೆಯೇ ರೈತರ ಬಳಿಗೆ ಬರುವ ಸಾಧ್ಯತೆ ಇರುತ್ತದೆ. ಇದಕ್ಕಾಗಿ ರೈತ ಉತ್ಪಾದಕ ಸಂಸ್ಥೆ (ಎಫ್‌ಪಿಒ) ಸ್ಥಾಪನೆ ಅತ್ಯುತ್ತಮ ಮಾರ್ಗವಾಗಿದೆ. ರೈತರ ಆದಾಯ ದ್ವಿಗುಣಗೊಳಿಸುವ ಸಂಬAಧ ಯೋಜನೆಗಳನ್ನು ರೂಪಿಸುತ್ತಿರುವ ಸರ್ಕಾರಗಳೂ ಈ ಹಿನ್ನೆಲೆಯಲ್ಲಿ ಔಷಧೀಯ ಸಸ್ಯಗಳನ್ನು ಬೆಳೆಯುವವರ ಬೆಂಬಲಕ್ಕೆ ನಿಲ್ಲಲಿದೆ.

ಕೃಷಿಕರು ಔಷಧೀಯ ಸಸ್ಯ ಬೆಳೆಸುವ ಮೂಲಕ ಆರ್ಥಿಕವಾಗಿ ಬೆಳವಣಿಗೆ ಸಾಧಿಸಲು ಅವಕಾಶ ಇದೆ. ಕಾಫಿ ಜತೆಗೆ ಸ್ಥಳೀಯ ಸಸ್ಯ ಸಂಪನ್ಮೂಲಗಳ ಬಳಕೆ ಆಗಬೇಕು. ಬ್ರಾಹ್ಮಿ, ನೀರುಬ್ರಾಹ್ಮಿ, ಲಾವಂಚ ವನ್ನು ಕಾಫಿಯಲ್ಲಿ ಆಂತರಿಕ ಬೆಳೆಯಾಗಿ ಬೆಳೆಯುವಗ ಬಗ್ಗೆ ಚಿಕ್ಕಮಗಳೂರಿನಲ್ಲಿ ಸಂಶೋಧನೆ ಆಗುತ್ತಿದೆ. ಬೇಲಿಯಲ್ಲಿ ಬೆಳೆಯುವ ಆಡುಸೋಗೆಯಿಂದ ಹೆಚ್ಚವರಿ ಆದಾಯ ಪಡೆದುಕೊಳ್ಳಬಹುದು. ಉತ್ತಮ ಸಸಿ ನೆಡುವುದು, ಸಸಿಗಳ ನಿರ್ವಹಣೆ ಹಾಘೂ ಕಟಾವು ನಂತರ ನಿರ್ವಹಣೆಯೂ ಇಲ್ಲಿ ಮುಖ್ಯವಾಗುತ್ತದೆ.

ಡಾ. ಪ್ರಭು, ಕರ್ನಾಟಕ ರಾಜ್ಯ ಔಷಧಿ ಗಿಡಮೂಲಿಕಾ ಪ್ರಾಧಿಕಾರದ ಅಧಿಕಾರಿ

ಔಷಧೀಯ ಸಸ್ಯಗಳಿಗೆ ಬೇಡಿಕೆ ಜಾಸ್ತಿ ಆಗುತ್ತಿರುವುದಿಂದ ಮಾರುಕಟ್ಟೆ ವಿಸ್ತಾರ ಆಗುತ್ತಿದೆ. ಹಾಗಾಗಿ ಔಷಧೀಯ ಸಸ್ಯಗಳ ಬಗ್ಗೆ ಜ್ಞಾನ ಹರಡಲು, ಇದನ್ನು ಬೆಳೆಸಲು ಔಷಧೀಯ ಸಸ್ಯಮಂಡಳಿಯನ್ನು ಕೇಂದ್ರ ಸರ್ಕಾರ ಸ್ಥಾಪಿಸಿದೆ. ಇದು ಕೇರಳವನ್ನು ಕೇಂದ್ರವಾಗಿಸಿಕೊAಡು ಕಾರ್ಯಾಚರಿಸುತ್ತಿದೆ. ಪ್ರತಿ ರಾಜ್ಯದಲ್ಲೂ ಈ ಸಂಬAಧ ಪ್ರಾಧಿಕಾರಗಳಿವೆ. ಗುಣಮಟ್ಟದ ಔಷಧೀಯ ಸಸ್ಯಗಳನ್ನು ಬೆಳೆಸಲು ಪ್ರೋತ್ಸಾಹ ಕೊಡಲಾಗುತ್ತಿದೆ.