ಬೆಂಗಳೂರು: ಸಾರ್ವಜನಿಕ ಆರೋಗ್ಯ ಸಂಸ್ಥೆಗಳಿಗೆ 2025-26ನೇ ಸಾಲಿನಲ್ಲಿ ಅಗತ್ಯವಿರುವ ಔಷಧಿ ಖರೀದಿ ಮಾಡಲು ಸರ್ಕಾರ 880.68 ಕೋಟಿ ರೂ. ಅನುಮೋದನೆ ನೀಡಿದೆ.
ಬೇಡಿಕೆಗಳಿಗೆ ಅನುಸಾರವಾಗಿ 890 ಬಗೆಯ ಔಷಧಿಗಳನ್ನು ಕೆಟಿಪಿಪಿ ಕಾಯ್ದೆ 1999 ಹಾಗೂ ಕೆಟಿಪಿಪಿ ನಿಯಮ 2000 ಅನುಸಾರ ಟೆಂಡರ್ ಮೂಲಕ ಖರೀದಿಸಿ, ಪೂರೈಸುವಂತೆ ಆರೋಗ್ಯ ಇಲಾಖೆ ರಾಜ್ಯ ವೈದ್ಯಕೀಯ ಸರಬರಾಜು ನಿಗಮಕ್ಕೆ ಸೂಚಿಸಿದೆ.
ಇಲಾಖೆ ವ್ಯಾಪ್ತಿಯ ಆರೋಗ್ಯ ಸಂಸ್ಥೆಗಳು ಮತ್ತು ಕಾರಾಗೃಹ ಆಸ್ಪತ್ರೆಗಳು ವಾರ್ಷಿಕ ಔಷಧ ಬೇಡಿಕೆಗಳನ್ನು ಔಷಧ ತಂತ್ರಾಂಶದ ಮೂಲಕ ಸಲ್ಲಿಸಿದ್ದಾರೆ. ಅಗತ್ಯವಿರುವ 880.68 ಕೋಟಿ ಬಜೆಟ್‌ನಲ್ಲಿ, ಒಟ್ಟು 12.06 ಕೋಟಿಗಳಲ್ಲಿ 10 ಲಕ್ಷಕ್ಕಿಂತ ಕಡಿಮೆ ಖರೀದಿ ಬೆಲೆ ಇರುವ 356 ಔಷಧಗಳನ್ನು ಜಿಲ್ಲೆಗಳಿಂದ ಅಥವಾ ಸ್ಥಳೀಯ ಆರೋಗ್ಯ ಸಂಸ್ಥೆಗಳಿಂದ ಖರೀದಿ ಮಾಡಲಾಗುವುದು. ಉಳಿದ ಔಷಧಗಳನ್ನು ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮದಿಂದ ಕೇಂದ್ರೀಕೃತವಾಗಿ ಖರೀದಿಸಲಾಗುವುದು ಎಂದು ತಿಳಿಸಲಾಗಿದೆ.