ಜಿಲ್ಲೆ

ಯೋಗ ಆಯುರ್ವೇದಗಳು ದೇಶದ ಸಂಪತ್ತು, ಕಪ್ಪತಗುಡ್ಡ ನಂದಿವೇರಿ ಮಠದ ಶ್ರೀಶಿವಕುಮಾರ ಸ್ವಾಮೀಜಿ

Dharwada - Basavaraj Idli

ಹುಬ್ಬಳ್ಳಿ: ಆಧುನಿಕತೆಯಿಂದಾಗಿ ಎಲ್ಲರ ಜೀವನ ವಿಧಾನ ತಪ್ಪಿ ಹೋಗಿವೆ. ಹಳ್ಳಿಗರ ಬದುಕು ಕೂಡ ಬದಲಾಗಿದೆ. ಇಂದಿನ ಯುವಕರಿಗೆ ದೇಶದ ಪಾರಂಪರಿಕ ಸಂಪತ್ತುಗಳಾದ ಯೋಗ ಹಾಗೂ ಆಯುರ್ವೇದದ ರುಚಿ ಹಚ್ಚುವ ಮೂಲಕ ಅರಿವು ಮೂಡಿಸಬೇಕಾಗಿದೆ ಎಂದು ಕಪ್ಪತಗುಡ್ಡ ನಂದಿವೇರಿ ಸಂಸ್ಥಾನಮಠದ ಶ್ರೀ ಶಿವಕುಮಾರ ಸ್ವಾಮೀಜಿ ಹೇಳಿದರು.

ನಗರದ ಬಿವಿಬಿ ಆವರಣದ ಬಯೋಟೆಕ್ ಸಭಾಂಗಣದಲ್ಲಿ ಗದಗ ಕಪ್ಪತಗುಡ್ಡ ಶ್ರೀ ನಂದಿವೇರಿ ಸಂಸ್ಥಾನಮಠ, ಬೆಂಗಳೂರಿನ ಆಯುಷ್ ಇಲಾಖೆ, ಕರ್ನಾಟಕ ರಾಜ್ಯ ಔಷಧೀಯ ಸಸ್ಯಗಳ ಪ್ರಾಧಿಕಾರ, ದಾಾಯಿಣಿ ಬಿ. ಜಾಬಶೆಟ್ಟಿ ಫೌಂಡೇಷನ್ ವತಿಯಿಂದ ಹಾಗೂ ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯ, ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ವಿಶ್ವವಿದ್ಯಾಲಯ, ಸಂಜೀವಿನಿ ಆಯುರ್ವೇದ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆ, ಕೆಎಲ್ಇ ಕಾಲೇಜ್ ಆಫ್ ಫಾರ್ಮಸಿ ಇವುಗಳ ಸಂಯುಕ್ತಾಶ್ರಯದಲ್ಲಿ ಭಾನುವಾರ ಏರ್ಪಡಿಸಲಾಗಿದ್ದ ಎರಡು ದಿನಗಳ ಔಷಧೀಯ ಸಸ್ಯಗಳ ಜೀವ ವೈವಿಧ್ಯತೆ, ಸಂರಕ್ಷಣೆ ಮತ್ತು ಕೃಷಿ ಹಾಗೂ ಆರೋಗ್ಯ ರಕ್ಷಣೆ ಕಾರ್ಯಾಗಾರ ಸಮಾರೋಪದಲ್ಲಿ ಆಶೀರ್ವಚನ ನೀಡಿದರು.

ಕಪ್ಪತಗುಡ್ಡ ಅತ್ಯುತ್ತಮ ಔಷಧಿಯುಕ್ತ ಗಾಳಿ ನೀಡುವ ಮೂಲಕ ನಮ್ಮೆಲ್ಲರನ್ನು ರಕ್ಷಣೆ ಮಾಡುತ್ತಿದೆ. ಅಂತಹ ಮಾತೃಸ್ವರೂಪಿಯಾದ ಗುಡ್ಡವನ್ನು ರಕ್ಷಣೆ ಮಾಡಬೇಕು. ಇದು ಸಪ್ತ ಕೋಟಿ ಕನ್ನಡಿಗರ ಕರ್ತವ್ಯ ಎಂದು ಹೇಳಿದರು.

ಪತಂಜಲಿಯವರು ಆರು ಸಾವಿರ ವರ್ಷಗಳ ಹಿಂದೆಯೇ ಯೋಗಸೂತ್ರದ ಬಗ್ಗೆ ತಿಳಿಸಿಕೊಟ್ಟಿದ್ದಾರೆ. ಯೋಗ, ಆಯುರ್ವೇದ ಅಳವಡಿಸಿಕೊಳ್ಳಲು ಈಗಿನವರಿಗೆ ತಾಳ್ಮೆ, ನಿಷ್ಠೆ ಎರಡೂ ಬೇಕಾಗುತ್ತದೆ. ಆರೋಗ್ಯವನ್ನು ಸುಖವಾಗಿ ಇಟ್ಟುಕೊಳ್ಳಲು ಇದೆಲ್ಲ ಅಗತ್ಯ. ಆಯುರ್ವೇದದಿಂದ ಆರೋಗ್ಯ ಸಂಪತ್ತು ಲಭಿಸುತ್ತದೆ. ಇಂತಹ ಶಕ್ತಿ ಸಂಪತ್ತು ಹೊಂದಿರುವ ಭಾರತವು ಮುಂಬರುವ ದಿನಗಳಲ್ಲಿ ಜಗತ್ತಿನ ಗುರುವಾಗಬಲ್ಲ ಶಕ್ತಿ ಹೊಂದಿದೆ ಎಂದು ಪ್ರತಿಪಾದಿಸಿದರು.

ಅಧ್ಯಕ್ಷತೆ ವಹಿಸಿದ್ದ ಕೆಎಲ್ಇ ತಾಂತ್ರಿಕ ವಿವಿ ಕುಲಸಚಿವ ಡಾ. ಬಸವರಾಜ ಅನಾಮಿ, ಅಗಾಧ ಸಂಪತ್ತು ಹೊಂದಿರುವ ಕಪ್ಪತಗುಡ್ಡ ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಬೇಕು. ಆಯುರ್ವೇದಕ್ಕೆ ಯಾವುದೇ ಸೈಡ್ ಎಫೆಕ್ಟ್ ಇರುವುದಿಲ್ಲ. ಹಾಗಾಗಿ ಇದನ್ನು ಯಾವುದೇ ಭಯ ಇಲ್ಲದೇ ಬಳಸಬಹುದು.

ಇಂತಹ ಕಾರ್ಯಾಗಾರಗಳು ಒಂದೇ ದಿನಕ್ಕೆ ಸೀಮಿತವಾಗದೇ ವರ್ಷದಲ್ಲಿ ಒಂದೆರಡು ಬಾರಿ ಆಯೋಜನೆ ಮಾಡುವ ಮೂಲಕ ವಿದ್ಯಾಥಿರ್ಗಳಲ್ಲಿ ಆಯುರ್ವೇದದ ಬಗ್ಗೆ ಅರಿವು ಮೂಡಿಸಬೇಕು ಎಂದರು.

ಆಯುರ್ವೇದ ಕುರಿತು ಭಿತ್ತಿಪತ್ರ ಪ್ರದರ್ಶನದಲ್ಲಿ ಭಾಗವಹಿಸಿದ್ದ ವಿದ್ಯಾಥಿರ್ಗಳಿಗೆ ಬಹುಮಾನ ವಿತರಿಸಲಾಯಿತು.

ಒಪ್ಪಂದ:
ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದ ಹಲವು ಕಂಪನಿಗಳು ಔಷಧೀಯ ಸಸ್ಯಗಳನ್ನು ಬೆಳೆಯುವ ರೈತರೊಂದಿಗೆ ಖರೀದಿ ಒಪ್ಪಂದ ಮಾಡಿಕೊಂಡವು. ಒಂದೆಲಗ ಸಸ್ಯ ಬೆಳೆಯುವ ಶ್ರೀಪವಾರ ಗದಗ ಪ್ರಗತಿಪರ ರೈತರು- ಹಿಮಾಲಯ, ಸಂಜಯ ಕೆ.ಆರ್.ಪೇಟೆ- ಅಮೃತನೋಣಿ, ಅಶ್ವಗಂಧ ಬೆಳೆಯುವ ಶ್ರೀರಾಜೇಂದ್ರ ಶಿರೋಳ ಇನ್ನೊಂದು ಕಂಪನಿಯೊಂದಿಗೆ ಒಡಂಬಡಿಕೆ ಮಾಡಿಕೊಂಡರು.

ಡಾ. ಸೋಮಶೇಖರ ಹುದ್ದಾರ ಸ್ವಾಗತಿಸಿದರು. ಡಾ. ಆರ್.ಎ್. ಇಂಚಲ ವರದಿ ವಾಚನ ಮಾಡಿದರು. ಪ್ರೊ. ರವೀಂದ್ರ ಕರಡಿ, ಪ್ರೊ. ಅಶ್ವಿನಿ ಪಾಟೀಲ ಕಾರ್ಯಕ್ರಮ ನಿರೂಪಿಸಿದರು. ಡಾ. ಬಿ.ಎಸ್. ಮಾಳವಾಡ ವಂದಿಸಿದರು.