ಜಿಲ್ಲೆ

ಔಷಧೀಯ ಸಸ್ಯಗಳ ಜೀವ ವೈವಿಧ್ಯ ಜಾಗೃತಿ, ಹುಬ್ಬಳ್ಳಿಯಲ್ಲಿ ರಾಜ್ಯ ಮಟ್ಟದ ಕಾರ್ಯಾಗಾರ

Dharwada - Basavaraj Idli

ಹುಬ್ಬಳ್ಳಿ: ಗದಗ ಜಿಲ್ಲೆಯ ಕಪ್ಪತಗುಡ್ಡ ಶ್ರೀ ನಂದಿವೇರಿ ಸಂಸ್ಥಾನ ಮಠ, ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ವಿಶ್ವವಿದ್ಯಾಲಯ, ಬೆಂಗಳೂರಿನ ಕರ್ನಾಟಕ ರಾಜ್ಯ ಔಷಧೀಯ ಸಸ್ಯಗಳ ಪ್ರಾಧಿಕಾರ, ಆಯುಷ್ ಇಲಾಖೆ, ರಾಮದುರ್ಗದ ದಾಾಯಿಣಿ ಜಾಬಶೆಟ್ಟಿ ಫೌಂಡೇಷನ್, ನಗರದ ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯ, ಸಂಜೀವಿನಿ ಆಯುರ್ವೇದ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆ ಹಾಗೂ ಕೆಎಲ್ಇ ಕಾಲೇಜ್ ಆಫ್ ಫಾರ್ಮಸಿ ಇವುಗಳ ಸಹಯೋಗದಲ್ಲಿ ಔಷಧೀಯ ಸಸ್ಯಗಳ ಜೀವ ವೈವಿಧ್ಯತೆ, ಸಂರಕ್ಷಣೆ ಮತ್ತು ಕೃಷಿ ಹಾಗೂ ಆರೋಗ್ಯ ರಕ್ಷಣೆ ಕುರಿತು ಎರಡು ದಿನಗಳ ರಾಜ್ಯಮಟ್ಟದ ಕಾರ್ಯಾಗಾರವನ್ನು ಜೂನ್ 8ರಿಂದ ಏರ್ಪಡಿಸಲಾಗಿದೆ ಎಂದು ಕಪ್ಪತಗುಡ್ಡ ನಂದಿವೇರಿ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ತಿಳಿಸಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಔಷಧೀಯ ಸಸ್ಯಗಳ ಬೆಳೆಗಾರರು ಮತ್ತು ಖರೀದಿದಾರರು ಎದುರಿಸುತ್ತಿರುವ ಸವಾಲುಗಳು; ಒಂದು ಅವಲೋಕನ, ಕರ್ನಾಟಕ ಹಾಗೂ ಕಪ್ಪತಗುಡ್ಡಕ್ಕೆ ಸಂಬಂಧಿಸಿದಂತೆ ಔಷಧೀಯ ಸಸ್ಯಗಳ ಮೌಲ್ಯಮಾಪನ ಮತ್ತು ಸಂಪನ್ಮೂಲ ನಕರಣ, ಔಷಧೀಯ ಸಸ್ಯಗಳ ವಲಯದ ಅವಕಾಶಗಳು ಮತ್ತು ಕಾರ್ಯಕ್ರಮಗಳು, ಔಷಧೀಯ ಸಸ್ಯಗಳ ಸಾಂಪ್ರದಾಯಕ ಜ್ಞಾನ ಮತ್ತು ಆಧುನಿಕ ಅನ್ವಯಿಕೆಗಳು, ಔಷಧೀಯ ಸಸ್ಯಗಳ ಬೆಳೆಗಾರರು ಮತ್ತು ಖರೀದಿದಾರರ ನೇರ ಸಂವಾದ, ಮುಂತಾದ ಅಧಿವೇಶನಗಳಲ್ಲಿ ತಜ್ಞರು ಉಪನ್ಯಾಸ ನೀಡುವರು ಎಂದರು.

ಔಷಧೀಯ ಸಸ್ಯಗಳ ಪ್ರದರ್ಶನಕ್ಕೆ ಭೇಟಿ ಏರ್ಪಡಿಸಲಾಗಿದೆ. ಸಂಶೋಧಕರಿಗಾಗಿ ಹಾಗೂ ವಿದ್ಯಾಥಿರ್ಗಳಿಗಾಗಿ ಪೋಸ್ಟರ್ ಪ್ರಜೆಂಟೇಶನ್ ನಡೆಯಲಿದೆ.

ಇಲ್ಲಿಯ ವಿದ್ಯಾನಗರದ ಕೆಎಲ್ಇ ಬಯೋಟೆಕ್ನಾಲಜಿ ಸಭಾಗೃಹದಲ್ಲಿ ಜೂನ್ 8ರಂದು ಬೆಳಗ್ಗೆ 9.45ಕ್ಕೆ ಕಾರ್ಯಾಗಾರ ಉದ್ಘಾಟಿಸಲಾಗುತ್ತದೆ. ಕೆಎಲ್ಇ ತಾಂತ್ರಿಕ ವಿವಿ ಕುಲಪತಿ ಡಾ. ಅಶೋಕ ಶೆಟ್ಟರ್ ಅಧ್ಯಕ್ಷತೆ ವಹಿಸುವರು. ಆಯುಷ್ ಇಲಾಖೆ ಆಯುಕ್ತ ಡಾ. ಶ್ರೀನಿವಾಸಲು, ಔಷಧೀಯ ಸಸ್ಯಗಳ ಪ್ರಾಧಿಕಾರ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಎಸ್. ವೆಂಕಟೇಶನ್, ಡಾ. ಜಗನ್ನಾಥರಾವ್ ಆರ್, ಗುರುನಾಥಗೌಡ ಓದುಗೌಡರ, ಡಾ. ಎಸ್.ವಿ. ನಾಡಗೌಡರ, ಡಾ. ಶ್ರೀನಿವಾಸ ಬನ್ನಿಗೋಳ ಅತಿಥಿಗಳಾಗಿ ಪಾಲ್ಗೊಳ್ಳುವರು.

ಜೂನ್ 9ರಂದು ಸಂಜೆ 4ಕ್ಕೆ ಕಾರ್ಯಾಗಾರದ ಸಮಾರೋಪ ನಡೆಯಲಿದ್ದು, ಕೆಎಲ್ಇ ತಾಂತ್ರಿಕ ವಿವಿ ಕುಲಸಚಿವ ಡಾ. ಬಸವರಾಜ ಅನಾಮಿ ಅಧ್ಯಕ್ಷತೆ ವಹಿಸುವರು. ಬೆಂಗಳೂರಿನ ಎಂ.ಎಸ್. ರಾಮಯ್ಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ನಾಗಭೂಷಣ ಬಿ.ಎಂ, ಗೋಕರ್ಣದ ಸಸ್ಯ ಸಂಜೀವಿನಿ ಪಂಚಕರ್ಮ ಚಿಕಿತ್ಸೆ ಕೇಂದ್ರದ ವೈದ್ಯ ಡಾ. ಪತಂಜಲಿ ಶರ್ಮಾ, ಹೆಗ್ಗೇರಿ ಆಯುರ್ವೇದ ಕಾಲೇಜಿನ ಡಾ. ಪ್ರಶಾಂತ ಎ.ಎಸ್. ಇತರರು ಅತಿಥಿಗಳಾಗಿ ಪಾಲ್ಗೊಳ್ಳುವರು.

ಈಗಾಗಲೇ ಕಾರ್ಯಾಗಾರಕ್ಕೆ 400ಕ್ಕೂ ಹೆಚ್ಚು ಪ್ರತಿನಿಧಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಔಷಧೀಯ ಸಸ್ಯಗಳ ರೈತರು, ಪ್ರಾಧ್ಯಾಪಕರು, ಆಯುರ್ವೇದ ಕಾಲೇಜಿನ ಉಪನ್ಯಾಸಕರು, ಸಂಶೋಧಕರು, ವಿದ್ಯಾಥಿರ್ಗಳು, ಸಾರ್ವಜನಿಕರು ಭಾಗವಹಿಸುವರು ಎಂದು ಪ್ರಧಾನ ಸಂಚಾಲಕ ಭಾಲಚಂದ್ರ ಜಾಬಶೆಟ್ಟಿ ತಿಳಿಸಿದರು.

ಸಂಘಟನಾ ಕಾರ್ಯದರ್ಶಿ ಡಾ. ಚರಂತಯ್ಯ ಹಿರೇಮಠ, ಪ್ರೊ. ರವೀಂದ್ರ ಕರಡಿ, ಇತರರು ಇದ್ದರು.