ಜಿಲ್ಲೆ

ಕಹಾ ಹೈ ಪ್ರಭು ಮಹಾರಾಜ್,

ಯಾದಗಿರಿ: ಮಹಾಮಾರಿ ಕರೊನಾ ವೈರಸ್ನಿಂದ ಇಡೀ ದೇಶ ಆತಂಕದಲ್ಲಿದೆ. ಇಂಥ ಸಂದರ್ಭದಲ್ಲಿ ಜಿಲ್ಲೆಯ ಆಡಳಿತ ಯಂತ್ರವನ್ನು ಸಮರ್ಥವಾಗಿ ಮುನ್ನಡೆಸಬೇಕಾದ ಉಸ್ತುವಾರಿ ಮಂತ್ರಿ ಪ್ರಭು ಚವ್ಹಾಣ್ ಇದುವರೆಗೆ ಜಿಲ್ಲೆಯತ್ತ ಹಣಕಿ ಹಾಕದೆ ಅಂತರ ಕಾಯ್ದುಕೊಂಡಿರುವುದು ಜನಾಕ್ರೋಶಕ್ಕೆ ಕಾರಣವಾಗಿದೆ.

ಕರೊನಾ ಎಲ್ಲೆಡೆ ತಲ್ಲಣ ಸೃಷ್ಟಿಸಿದೆ. ಅಮೆರಿಕ, ಬ್ರಿಟನ್, ಫ್ರಾನ್ಸ್, ಇಟಲಿ, ಜರ್ಮನಿ, ಸ್ಪೇನ್ ಸೇರಿ ಅನೇಕ ಮುಂದುವರಿದ ರಾಷ್ಟ್ರಗಳೇ ಹೆಮ್ಮಾರಿಯಿಂದ ತತ್ತರಿಸಿ ಕಣ್ಣೀರಿಡುತ್ತಿವೆ. ಹೀಗಾಗಿ ಇದು ನಮ್ಮಲ್ಲೂ ತನ್ನ ಕದಂಬಬಾಹು ಚಾಚದಂತೆ ಮುಂಜಾಗ್ರತಾ ಕ್ರಮವಾಗಿ ಏ.14ರವರೆಗೆ ಸರ್ಕಾರ ಲಾಕ್ಡೌನ್ ಘೋಷಿಸಿದೆ. ಜನಹಿತ ದೃಷ್ಟಿಯಿಂದ ಕಟ್ಟುನಿಟ್ಟಾಗಿ ಜಾರಿಗೊಳಿಸಲೇಬೇಕಿದೆ. ಸದ್ಯ ಎಲ್ಲರಿಗೂ ಇದೊಂದೇ ಬಿಗ್ ಚಾಲೆಂಜ್. ರಾಷ್ಟ್ರೀಯ ವಿಪತ್ತಿನ ಈ ಸಂದರ್ಭದಲ್ಲಿ ಜಿಲ್ಲೆಯ ಅಭಿವೃದ್ಧಿ ಹೊಣೆ ಹೊತ್ತ ಉಸ್ತುವಾರಿ ಮಂತ್ರಿ ಚವ್ಹಾಣ್ ಸಾಹೇಬ್ರು ಯಾದಗಿರಿಗೂ ತಮಗೂ ಸಂಬಂಧವೇ ಇಲ್ಲದಂತೆ ವತರ್ಿಸುತ್ತಿರುವುದೇಕೆ ಎಂಬ ಪ್ರಶ್ನೆ ಕಾಡಲಾರಂಭಿಸಿದೆ.

ಎರಡು ವಾರದ ಹಿಂದೆ ಜಿಲ್ಲೆಗೆ ಭೇಟಿ ನೀಡಿದ್ದ ಸಚಿವರು ಕಾಟಾಚಾರಕ್ಕೆ ಎನ್ನುವಂತೆ ಒಂದೆರಡು ಗಂಟೆ ಅಧಿಕಾರಿಗಳ ಸಭೆ ಮಾಡಿ ಹೋದರು. ಕರೊನಾ ಜಿಲ್ಲೆಯಲ್ಲಿ ಹರಡದಂತೆ ಜಿಲ್ಲಾಡಳಿತ ವ್ಯಾಪಕ ಕಟ್ಟೆಚ್ಚರ ವಹಿಸಿದ್ದರ ಹೊರತಾಗಿಯೂ ಜನತೆ ಮನೆಬಿಟ್ಟು ಹೊರಗೆ ಅಲೆದಾಡುವುದು ನಿಂತಿಲ್ಲ.

ಇಂಥ ಸ್ಥಿತಿಯಲ್ಲಿ ಆಡಳಿತ ಜತೆಗಿದ್ದು ನೀವು ಕೆಲಸ ಮಾಡಿ, ನಿಮ್ಮೊಂದಿಗೆ ನಾನು ಮತ್ತು ಸರ್ಕಾರವಿದೆ ಎಂದು ಬೆನ್ನು ತಟ್ಟುವ ಕೆಲಸವನ್ನೂ ಸಚಿವ ಚವ್ಹಾಣ್ ಮಾಡಿಲ್ಲ. ಇದರಿಂದ ಜಿಲ್ಲೆ ಒಂಥರ ರಾಜಕೀಯ ಅನಾಥಪ್ರಜ್ಞೆ ಎದುರಿಸುತ್ತಿದೆ. ಇತ್ತ ಬಿಜೆಪಿಯ ಇಬ್ಬರು ಶಾಸಕರಾದ ವೆಂಕಟರಡ್ಡಿ ಮುದ್ನಾಳ್ ಹಾಗೂ ನರಸಿಂಹ ನಾಯಕ ಹಗಲಿರುಳು ಜನರ ಹಿತಕ್ಕಾಗಿ ಕೆಲಸ ಮಾಡುತ್ತಿದ್ದಾರೆ.

ಗಿರಿ ಜಿಲ್ಲೆ ಮೊದಲಿನಿಂದಲೂ ಅಧಿಕಾರಿಗಳ ಅಭಾವದಿಂದ ಒದ್ದಾಡುತ್ತಿದೆ. ಅಗತ್ಯ ಸಿಬ್ಬಂದಿ ಕೊರತೆ ನಡುವೆಯೂ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಉತ್ತಮ ಕೆಲಸ ಮಾಡುತ್ತಿದ್ದಾರೆ. ಜಿಲ್ಲೆಯಲ್ಲಿ ವೆಂಟಿಲೇಟರ್ ಸೌಲಭ್ಯ ಇಲ್ಲ. ನಾಲ್ಕೈದು ದಿನಗಳಿಂದ ಗುಳೆಹೋದ ಜನತೆ ತಮ್ಮೂರಿಗೆ ಓಡೋಡಿ ಬರುತ್ತಿದ್ದಾರೆ. ಇವರೆಲ್ಲರಿಗೂ ಆರೋಗ್ಯ ತಪಾಸಣೆ ಸೇರಿ 14 ದಿನ ಹೋಂ ಕ್ವಾರೆಂಟೈನ್ ವ್ಯವಸ್ಥೆ ಮಾಡಲು ಅಧಿಕಾರಿಗಳ ತಂಡ ಹೈರಾಣಾಗುತ್ತಿದೆ. ಆದರೆ ಲೀಡ್ ತೆಗೆದುಕೊಳ್ಳಬೇಕಿದ್ದ ಉಸ್ತುವಾರಿ ಮಂತ್ರಿ ಡೋಂಟ್ ಕೇರ್ ಎನ್ನುವಂತೆ ವತರ್ಿಸುತ್ತಿದ್ದಾರೆ. ಭಾನುವಾರ ಇರುವ ಎಲ್ಲ ಕೆಲಸ ಬಿಟ್ಟು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಆ ಜಿಲ್ಲೆಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕನ ಮಾಡಿದ್ದಾರೆ.

ಸಚಿವ ಚವ್ಹಾಣ್ ಅವರಿಗೆ ಬೀದರ್ ಹಾಗೂ ಯಾದಗಿರಿ ಜಿಲ್ಲೆಗಳ ಉಸ್ತುವಾರಿ ವಹಿಸಲಾಗಿದೆ. ಸಹಜವೇ ಕೆಲಸದ ಒತ್ತಡ ಇರುತ್ತದೆ. ಇನ್ನು ಜನತೆ ಎಲ್ಲದಕ್ಕೂ ಸಚಿವರೇ ಬರಬೇಕೆಂದು ಒತ್ತಡ ಹೇರಿಲ್ಲ. ಹಾಗಂತ ತುರ್ತು ಪರಿಸ್ಥಿತಿಯಲ್ಲೂ ಭೇಟಿ ನೀಡದೆ ದೂರ ಉಳಿದರೆ ಜಿಲ್ಲೆಯ ಗತಿ ಏನಾಗಬಾರದು ಎಂಬ ಕನಿಷ್ಠ ಆಲೋಚನೆಯೂ ಬೇಡವೇ ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿರುವುದು ಖರೆ.

ಜಿಲ್ಲಾ ಮಟ್ಟದಲ್ಲಿ ಟಾಸ್ಕ್ಫೋರ್ಸ್​ ಸಮಿತಿ ಸಭೆ ಮಾಡಿದರೆ ಆಯಾ ಕ್ಷೇತ್ರಗಳ ಶಾಸಕರು ಸಮಸ್ಯೆಗಳ ಬಗ್ಗೆ ಅವಲೋಕನ ಮಾಡಲು ಸಹಕಾರಿ ಆಗುತ್ತದೆ. ಜಿಲ್ಲಾಡಳಿತ ಮತ್ತು ಸರ್ಕಾರದ ಮಧ್ಯೆ ಕೊಂಡಿಯಾಗಿ ಕಾರ್ಯನಿರ್ವಹಿಸಬೇಕಿರುವ ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಗೆ ಭೇಟಿ ನೀಡದಿರುವುದು ವಿಪಯರ್ಾಸದ ಸಂಗತಿ.
| ಶ್ರೀನಿವಾಸರಡ್ಡಿ ಕಂದಕೂರ ಕಾಡಾ ಮಾಜಿ ಅಧ್ಯಕ್ಷ