ಜಿಲ್ಲೆ

ಕಿದ್ವಾಯಿ ಮತ್ತು ಇಂದಿರಾ ಗಾಂಧಿ ಆಸ್ಪತ್ರೆಗಳಲ್ಲಿ ಶಿಕ್ಷಣ ಸಚಿವರ ಪರಿಶೀಲನೆ

ಬೆಂಗಳೂರು: ಸಮಸ್ಯೆಗಳ ಆಗರವಾಗಿದ್ದ ನಗರದ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ಮತ್ತು ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಬುಧವಾರ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ವೈದ್ಯರ ಹಾಗೂ ಸಿಬ್ಬಂದಿ ಕಾರ್ಯವೈಖರಿ ಕಂಡು ಸಿಟ್ಟಾದರು.

ಮೊದಲಿಗೆ ಕಿದ್ವಾಯಿ ಸ್ಮಾರಕ ಗಂಥಿ ಆಸ್ಪತ್ರೆಗೆ ಭೇಟಿ ನೀಡಿದ ಸಚಿವರು, ಫಾಸ್ಟ್‌ಟ್ರ್ಯಾಕ್ ವಾರ್ಡ್‌ಗೆ ಭೇಟಿ ನೀಡಿ ರೋಗಿಗಳ ಯೋಗಕ್ಷೇಮ ವಿಚಾರಿಸಿದರು. ಬಳಿಕ ವಸತಿ ಸೌಲಭ್ಯ ಹೇಗಿದೆ, ಯಾವೆಲ್ಲ ಅವಕಾಶಗಳನ್ನು ಬಳಸಿಕೊಳ್ಳುತ್ತಿದ್ದೀರಿ, ಎಷ್ಟು ರೋಗಿಗಳು ಇಲ್ಲಿ ದಾಖಲಾಗುತ್ತಿದ್ದಾರೆ ಎಂಬಿತ್ಯಾದಿ ವಿಚಾರಗಳ ಕುರಿತು ಆಸ್ಪತ್ರೆಯ ಆಡಳಿತಾಧಿಕಾರಿ ಮಂಜುಶ್ರೀ ಹಾಗೂ ನಿರ್ದೇಶಕ ಡಾ. ಲೋಕೇಶ್ ಅವರನ್ನು ಪ್ರಶ್ನಿಸಿದರು.

ರೋಗಿಗಳಿಗೆ ಚಿಕಿತ್ಸೆ ಕೊಡಲು ಎಷ್ಟು ದಿನ ಬೇಕು? ಕ್ಯಾನ್ಸರ್ ಪತ್ತೆಗೆ ಎಷ್ಟು ದಿನ ತೆಗೆದುಕೊಳ್ಳುತ್ತದೆ? ಬಳಿಕ ಚಿಕಿತ್ಸೆ ನೀಡಲು ಎಷ್ಟು ದಿನ ಆಗಲಿದೆ? ಯಾವ ಸಮಯದಲ್ಲಿ ಗರಿಷ್ಠ ರೋಗಿಗಳು ಆಸ್ಪತ್ರೆಗೆ ಬರುತ್ತಾರೆ ಎಂದು ವಿಚಾರಿಸಿದರು.

ಈ ವೇಳೆ ರೋಗಿಯೊಬ್ಬರಿಗೆ ಒಂದು ತಿಂಗಳಾದರೂ ಚಿಕಿತ್ಸೆ ನೀಡದಿರುವುದನ್ನು ತಿಳಿದು ವೈದ್ಯರ ವಿರುದ್ಧ ಕಿಡಿಕಾರಿದರು. ದಾಖಲಾಗಿ ಒಂದು ತಿಂಗಳಾದರೂ ಏಕೆ ಶಸಚಿಕಿತ್ಸೆ ಮಾಡಿಲ್ಲ? ತಡ ಮಾಡುತ್ತಿರುವ ಉದ್ದೇಶವಾದರೂ ಏನು ಎಂದು ಪ್ರಶ್ನಿಸಿ ಕೊಡಲೇ ಸಮಸ್ಯೆ ಬಗೆಹರಿಸಿ ಎಂದು ನಿರ್ದೇಶನ ನೀಡಿದ ಅವರು, ರೋಗಿಗಳಿಗೆ ಸರಿಯಾದ ಚಿಕಿತ್ಸೆ ನೀಡದಿದ್ದರೆ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.

ಉಚಿತ ಔಷಧ ನೀಡಲು ಸೂಚನೆ: ಅಂಗವಿಕಲ ರೋಗಿ ರಮೇಶ್ ಎಂಬುವರು, ‘75 ಸಾವಿರ ಹಣ ಕೊಟ್ಟು ಔಷಧಿ ಖರೀದಿಸಲು ತಮ್ಮ ಬಳಿ ಅಷ್ಟೊಂದು ಹಣವಿಲ್ಲ’ ಎಂದು ಅಳಲು ತೋಡಿಕೊಂಡಾಗ, ಕೂಡಲೇ ಅವರಿಗೆ ಉಚಿತವಾಗಿ ಔಷಧಿ ನೀಡುವಂತೆ ವೈದ್ಯರಿಗೆ ಸೂಚಿಸಿದರು.

ಕಿದ್ವಾಯಿ ಮಾದರಿ ನಾಲ್ಕು ಆಸ್ಪತ್ರೆಗಳು: ಸುದ್ದಿಗಾರರ ಜತೆ ಮಾತನಾಡಿದ ಸಚಿವ ಡಾ.ಶರಣಪ್ರಕಾಶ್ ಪಾಟೀಲ್, ರಾಜ್ಯದಲ್ಲಿ ತುಮಕೂರು, ಶಿವಮೊಗ್ಗ, ಮಂಡ್ಯ ಹಾಗೂ ಕಾರವಾರದಲ್ಲಿ ಕಿದ್ವಾಯಿ ಮಾದರಿಯ ಆಸ್ಪತ್ರೆಯನ್ನು ತೆರೆಯುವ ಆಲೋಚನೆ ಇದೆ. ಕ್ಯಾನ್ಸರ್ ರೋಗಿಗಳ ಸಂಖ್ಯೆ ಹೆಚ್ಚುತ್ತಿದ್ದು, ಚಿಕಿತ್ಸೆಗೆ ರಾಜ್ಯದ ನಾನಾ ಭಾಗಗಳಿಂದ ರೋಗಿಗಳು ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಇದರಿಂದ ಎಲ್ಲರಿಗೂ ಸಕಾಲದಲ್ಲಿ ಚಿಕಿತ್ಸೆ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು.

ಇಂದಿರಾ ಗಾಂಧಿ ಆಸ್ಪತ್ರೆಗೂ ಭೇಟಿ: ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಅವರು ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆಕ್ಕೆ ಭೇಟಿ ನೀಡಿ ಅಲ್ಲಿಯೂ ಪರಿಶೀಲನೆ ನಡೆಸಿದರು. ಬಳಿಕ ಮಾತನಾಡಿದ ಅವರು, ಕಲಬುರಗಿಯಲಿ ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆ ಪ್ರಾರಂಭಿಸುವ ಬಗ್ಗೆ ಗಂಭೀರ ಚಿಂತನೆ ನಡೆಸಲಾಗಿದೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ ಚರ್ಚೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು. ರಾಜ್ಯದ ಸರ್ಕಾರಿ ಆಸ್ಪತ್ರೆಗಳ ಸಮಸ್ಯೆಗಳನ್ನು ಅರಿತು ಸೌಲಭ್ಯ ಕಲ್ಪಿಸುವ ಸಲುವಾಗಿ ಖುದ್ದು ಆಸ್ಪತ್ರೆಗೆ ಭೇಟಿ ನೀಡಿದ್ದೇನೆ. ಇದರಿಂದ ಕೆಲ ಸಮಸ್ಯೆಗಳು ಗಮನಕ್ಕೆ ಬಂದಿವೆ. ಕಾಲಮಿತಿಯೊಳಗೆ ಪರಿಹರಿಸಲು ಕ್ರಮ ಕೈಗೊಳ್ಳುಲಾಗುವುದು ಎಂದರು.