ಹುಬ್ಬಳ್ಳಿ: ಪ್ರತಿ ವರ್ಷ ಸಾವಿರಾರು ವಿದ್ಯಾರ್ಥಿಗಳು ಎಂಬಿಬಿಎಸ್ ಸೀಟ್ ಸಿಗದೇ ವೈದ್ಯಕಿಯ ಶಿಕ್ಷಣದಿಂದ ದೂರ ಉಳಿಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಇಲ್ಲಿಯ ಸನಾ ಶಾಹೀನ್ ಶಿಕ್ಷಣ ಸಂಸ್ಥೆಯು ತಜಕಿಸ್ತಾನದ ಮೆಡಿಕಲ್ ಸೋಷಿಯಲ್ ಇನ್ ಸ್ಟಿಟ್ಯೂಟ್ (ಎಂಎಸ್ಐಟಿ) ಇದರೊಂದಿಗೆ ಕೈಜೋಡಿಸಿ ಭಾರತೀಯ ವಿದ್ಯಾರ್ಥಿಗಳಿಗೆ ಅತ್ಯಂತ ಕಡಿಮೆ ವೆಚ್ಚದಲ್ಲಿ ವೈದ್ಯಕಿಯ ಶಿಕ್ಷಣ ನೀಡಲು ಮುಂದಾಗಿದೆ ಎಂದು ಎಂಎಸ್ಐಟಿ ಸಮನ್ವಯಕಾರ ಡಾ. ಶುಭಂ ಗೌತಮ್ ತಿಳಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರದಿಂದ ಮಾನ್ಯತೆ ಪಡೆದ ಸಂಸ್ಥೆ ಇದಾಗಿದ್ದು, ಎಂಎಸ್ಐಟಿಯಲ್ಲಿ ವಿಶ್ವಮಟ್ಟದ ವೈದ್ಯಕಿಯ ಚಿಕಿತ್ಸಾ ಶಿಕ್ಷಣ ಪಡೆಯಬಹುದಾಗಿದೆ. ಈ ಕೋರ್ಸ್ ಭಾರತದ ರಾಷ್ಟ್ರೀಯ ವೈದ್ಯಕಿಯ ಆಯೋಗದ (ಎನ್ಎಂಸಿ) ಮಾನ್ಯತೆ ಪಡೆದಿದ್ದು, ಕೋರ್ಸ್ ಪೂರ್ಣಗೊಳಿಸಿ ದೇಶಕ್ಕೆ ಹಿಂದಿರುಗಿದ ನಂತರ ವಿದೇಶಿ ವೈದ್ಯಕಿಯ ಶಿಕ್ಷಣ ಪಾಸಾದವರಿಗಾಗಿ ಇರುವ ಪರೀಕ್ಷೆ (ಎಫ್ಎಂಜಿಇ) ಬರೆಯಬಹುದಾಗಿದೆ ಎಂದರು.
ಪ್ರತಿ ವರ್ಷ ಸುಮಾರು 20 ಲಕ್ಷ ವಿದ್ಯಾರ್ಥಿಗಳು ನೀಟ್ ಪರೀಕ್ಷೆ ಬರೆಯುತ್ತಾರೆ. ಅದರಲ್ಲಿ ಕೇವಲ 1.18 ಲಕ್ಷ ವಿದ್ಯಾರ್ಥಿಗಳಿಗೆ ಎಂಬಿಬಿಎಸ್ ಸೀಟ್ ಸಿಗುತ್ತದೆ. ಹಾಗಾಗಿ ವೈದ್ಯಕಿಯ ಶಿಕ್ಷಣ ಪೂರೈಸಬೇಕೆಂಬ ಅನೇಕ ಆಸಕ್ತರಿಗೆ ಇದೊಂದು ಉತ್ತಮ ಅವಕಾಶವಾಗಲಿದೆ ಎಂದರು.
ಎಂಎಸ್ಐಟಿಯಲ್ಲಿ ಶಾಹೀನ್ ಸಂಸ್ಥೆಯೇ ವಿದ್ಯಾರ್ಥಿಗಳ ನಿರ್ವಹಣೆ ಮಾಡಲಿದೆ. ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಶ್ರೇಷ್ಠತೆಯ ಜತೆಗೆ ನಿರಂತರ ಬೆಂಬಲ ಲಭಿಸುವಂತೆ ಸಂಪೂರ್ಣ ಅಕಾಡೆಮಿಕ್ ಹಾಗೂ ಕ್ಯಾಂಪಸ್ ವ್ಯವಸ್ಥೆಯನ್ನು ನಿರ್ವಹಿಸಲಿದೆ. ಹಾಗಾಗಿ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದರು.
ಭಾರತೀಯ ಪಠ್ಯಕ್ರಮಕ್ಕೆ ಅನುಗುಣವಾಗಿ ಇಲ್ಲಿನ ಶಿಕ್ಷಕರು, ಎಂಬಿಬಿಎಸ್ ಪಠ್ಯಕ್ರಮವನ್ನು ಬೋಧಿಸುವ ಅಧ್ಯಾಪಕರು ಶಾಹೀನ್ ಸಂಸ್ಥೆಗಳಿಂದ ನೇಮಕವಾಗಲಿದ್ದಾರೆ. ವಸತಿ, ಆಹಾರ, ಇತರೆ ಸೌಲಭ್ಯಗಳನ್ನು ಶಾಹೀನ್ ಸಂಸ್ಥೆಯೇ ನಿರ್ವಹಣೆ ಮಾಡಲಿದೆ. ಕೋರ್ಸ್ ನಂತರ ಭಾರತದಲ್ಲಿಯೇ ಕ್ಲಿನಿಕಲ್ ಅನುಭವ ನೀಡಲಾಗುತ್ತದೆ ಎಂದು ಅವರು ಹೇಳಿದರು.
ಗೋಷ್ಠಿಯಲ್ಲಿ ಸನಾ ಶಾಹೀನ್ ಸಂಸ್ಥೆ ಅಧ್ಯಕ್ಷ ಮೊಹಮ್ಮದ್ ಹುಸೇನ್ ಮಳಗಿ, ವ್ಯವಸ್ಥಾಪಕ ಟ್ರಸ್ಟಿ ಅಶ್ರಫ್ ಅಲಿ ಬಶೀರ್ ಅಹ್ಮದ್, ಮೊಹಮ್ಮದ ಅಯೂಬ ಸವನೂರ, ಮೊಹಮ್ಮದ್ ತಾರಿಕ್ ಮುಜಾಹಿದ್, ತೌಸಿಫ್ ಅಹ್ಮದ್, ಡಾ. ಆಸಿಫ್ ಇದ್ದರು.