ಮಂಡ್ಯ: ವೈದ್ಯಕೀಯ ಕ್ಷೇತ್ರದಲ್ಲಿ ತುರ್ತು ಸಂದರ್ಭದಲ್ಲಿ ಡ್ರೋಣ್ ಮೂಲಕ ಔಷಧ ತಲುಪಿಸಲು ಮಾಡುತ್ತಿರುವ ಪ್ರಯತ್ನ ಒಂದು ಐತಿಹಾಸಿಕ ಕಾರ್ಯ ಎಂದು ಆಹಾರ ಆಯೋಗದ ಅಧ್ಯಕ್ಷ ಡಾ.ಎಚ್.ಕೃಷ್ಣ ಹೇಳಿದರು.
ನಗರದ ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಮಿಮ್ಸ್) ಆವರಣದಲ್ಲಿ ಐಸಿಎಟಿಟಿ(ಐಕಾಟ್) ಏರ್ ಆಂಬ್ಯುಲೆನ್ಸ್ ಮತ್ತು ಯುಬಿಫ್ಲೈ ಸಹಯೋಗದೊಂದಿಗೆ ಆಯೋಜಿಸಿದ್ದ ಮೆಡಿಕಲ್ ಡ್ರೋಣ್ ಡ್ರಿಲ್ ಪ್ರಾಯೋಗಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಡ್ರೋಣ್‌ಗಳನ್ನು ಔಷಧ ಸಿಂಪಡಿಸುವಿಕೆ, ಗೊಬ್ಬರ, ರಸಗೊಬ್ಬರ ಹಾಕಲು ಕೃಷಿ ಕ್ಷೇತ್ರದಲ್ಲಿ ಹೆಚ್ಚಾಗಿ ಉಪಯೋಗಿಸಲಾಗುತ್ತಿದೆ. ಈಗ ಐಕಾಟ್ ಸಂಸ್ಥೆ ತುರ್ತು ಆರೋಗ್ಯ ಸೇವೆಗಳನ್ನು ಡ್ರೋಣ್ ಮೂಲಕ ಒದಗಿಸಬಹುದು ಎಂಬುದನ್ನು ವಿನೂತನ ಪ್ರಯೋಗದ ಮೂಲಕ ಜಗತ್ತಿಗೆ ಪರಿಚಯಿಸಲು ಹೊರಟಿದ್ದಾರೆ. ತುರ್ತಾಗಿ ನೀಡಬೇಕಾದ ವೈದ್ಯಕೀಯ ಔಷಧವನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಎಲ್ಲಿಯೂ ತಡಮಾಡದೆ ಅಗತ್ಯವಿರುವ ಕಡೆಗೆ ನೀಡಿ ಪ್ರಾಣ ಉಳಿಸಬಹುದಾದ ಕಾರ್ಯ ವೈದ್ಯಕೀಯ ಕ್ಷೇತ್ರದಲ್ಲಿ ಮಾರ್ಪಾಡು ತರುತ್ತದೆ ಎಂದು ತಿಳಿಸಿದರು.
ಎಷ್ಟೋ ತುರ್ತು ಸನ್ನಿವೇಶದಲ್ಲಿ ರೋಗಿಗಳನ್ನು ಆಸ್ಪತ್ರೆಗೆ ದಾಖಲು ಮಾಡಲಾಗದೆ ಅಥವಾ ಸರಿಯಾದ ಸಮಯಕ್ಕೆ ಔಷಧ ದೊರೆಯದೇ ರೋಗಿಗಳು ತಮ್ಮ ಉಸಿರು ಚಲ್ಲುವ ಅನಿವಾರ್ಯ ಪರಿಸ್ಥಿತಿ ಎದುರಾಗುತ್ತದೆ. ಈ ವೇಳೆ ಸ್ಥಳೀಯ ಆರೋಗ್ಯ ಕೇಂದ್ರಗಳಿಗೆ ಡ್ರೋಣ್ ಮೂಲಕ ಅಗತ್ಯ ಔಷಧ ಕಳಿಸುವುದರಿಂದ ಇಂತಹ ಅನೇಕ ಸಾವು ನೋವುಗಳನ್ನು ತಡೆಗಟ್ಟಬಹುದಾಗಿದೆ. ತುರ್ತು ಸಂದರ್ಭಗಳಲ್ಲಿ ಡ್ರೋಣ್ ಬಳಕೆ ವೈದ್ಯಕೀಯ ಕ್ಷೇತ್ರದಲ್ಲಿ ಮೈಲಿಗಲ್ಲು ಆಗಬಹುದು ಎಂದು ಅಭಿಪ್ರಾಯಪಟ್ಟರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಮಾತನಾಡಿ, ಡ್ರೋಣ್ ಬಳಕೆ ಪೊಲೀಸ್ ಇಲಾಖೆಗೂ ಅತ್ಯಾವಶ್ಯಕ. ತುರ್ತಾಗಿ ಆರೋಗ್ಯ ಸೇವೆ ಅಗತ್ಯವಿದ್ದಾಗ ಅಂಬ್ಯುಲೆನ್ಸ್‌ಗಳಿಗೆ ಜೀರೋ ಕ್ಲಿಯರೆನ್ಸ್ ನೀಡಬೇಕಾಗುತ್ತದೆ. ದೊಡ್ಡ ದೊಡ್ಡ ನಗರಗಳಲ್ಲಿ ಕಡಿಮೆ ಸಮಯದಲ್ಲಿ ರಸ್ತೆಗಳನ್ನು ಜೀರೋ ಕ್ಲಿಯರೆನ್ಸ್ ಮಾಡುವುದು ಕಷ್ಟಕರವಾಗುತ್ತದೆ. ನಿರ್ದಿಷ್ಟ ಸಮಯದಲ್ಲಿ ಔಷಧ ದೊರೆಯದೇ ಹೋದರೆ ಸಾವು ಸಂಭವಿಸುವ ಸಾಧ್ಯತೆ ಹೆಚ್ಚು ಇರುತ್ತದೆ. ಇಂತಹ ತುರ್ತು ಸಂದರ್ಭಗಳಲ್ಲಿ ಡ್ರೋಣ್ ಬಳಸಿಕೊಳ್ಳುವುದರಿಂದ ಯಾವುದೇ ರೀತಿಯ ಸಮಯ ವ್ಯರ್ಥವಾಗದೆ, ಸೂಕ್ತ ಸಮಯದಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಬಹುದಾಗಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಡ್ರೋಣ್‌ಗಳನ್ನು ಸರಿಯಾದ ರೀತಿಯಲ್ಲಿ ಸದ್ಭಳಕೆ ಮಾಡಿಕೊಂಡರೆ ಇದೊಂದು ಮಹತ್ವದ ಸಾಧನೆಯಾಗಬಹುದು ಎಂದು ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಮೋಹನ್, ಮಿಮ್ಸ್ ವೈದ್ಯಕೀಯ ಅಧೀಕ್ಷಕ ಡಾ.ಶಿವಕುಮಾರ್, ಐಕಾಟ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಡಾ.ಶಾಲಿನಿ ನಲ್ವಾಡ್, ಡಾ.ಚೇತನ್, ಅಂಬರ್‌ವಿಂಗ್ಸ್ ಸಂಸ್ಥೆಯ ದಿವ್ಯಾ ಇತರರಿದ್ದರು.
ಇದೇ ವೇಳೆ ಹೃದಯ ಸ್ತಬ್ದವಾದ ರೋಗಿಗೆ ಮಿಮ್ಸ್ ಆಸ್ಪತ್ರೆಯಿಂದ ಡ್ರೋಣ್ ಮೂಲಕ ಮಳವಳ್ಳಿ ತಾಲೂಕು ಕಿರುಗಾವಲು ಹೋಬಳಿ ಚಿಕ್ಕಮಲಗೂಡಿಗೆ ಔಷಧ ತಲುಪಿಸಿ ಜೀವ ಉಳಿಸುವ ರೀತಿಯಲ್ಲಿ ಅಣಕು ಪ್ರದರ್ಶನ ನಡೆಸಲಾಯಿತು.