ಜಿಲ್ಲೆ

25ರಿಂದ ವೈದ್ಯಕೀಯ ಸಮ್ಮೇಳನ

reportermys

ಮೈಸೂರು: ಜೆಎಸ್‌ಎಸ್ ವೈದ್ಯಕೀಯ ಕಾಲೇಜಿನ ನ್ಯಾಯ ವೈದ್ಯಶಾಸ್ತ್ರ ವಿಭಾಗದ ವತಿಯಿಂದ ರಾಜ್ಯ ಮೆಡಿಕೊ ಲೀಗಲ್ ಸೊಸೈಟಿ ಸಹಯೋಗದಲ್ಲಿ ನ.25 ಮತ್ತು 26ರಂದು ಜೆಎಸ್‌ಎಸ್ ಫಾರ್ಮಸಿ ಕಾಲೇಜು ಸಭಾಂಗಣದಲ್ಲಿ ರಾಜ್ಯ ಮಟ್ಟದ ವಾರ್ಷಿಕ ಸಮ್ಮೇಳನ ಆಯೋಜಿಸಲಾಗಿದೆ ಎಂದು ವಿಭಾಗದ ಮುಖ್ಯಸ್ಥ ಡಾ.ಎಂ.ಅರುಣ್ ತಿಳಿಸಿದರು.


ಎರಡು ದಿನಗಳ ಸಮ್ಮೇಳನದಲ್ಲಿ ಅಪರಾಧದ ವೈಜ್ಞಾನಿಕ ತನಿಖೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ವಿವಿಧ ವೃತ್ತಿಪರರು ಮತ್ತು ತಜ್ಞರು ಭಾಗವಹಿಸುವರು. ವಿವಿಧ ಆಯಾಮಗಳಾದ ಫೋರೆನ್ಸಿಕ್ ಮೆಡಿಸಿನ್, ಸೈಬರ್ ಫೋರೆನ್ಸಿಕ್ ಮೊದಲಾದ ವಿಷಯ ಕುರಿತು ಮಾತನಾಡಲಿದ್ದಾರೆ. ಫೋರೆನ್ಸಿಕ್ ಮೆಡಿಸಿನ್ ಸಹಯೋಗಕ್ಕಾಗಿ ಕ್ಷೇತ್ರಗಳನ್ನು ಗುರುತಿಸುವ ಗುರಿಯನ್ನು ಸಮ್ಮೇಳನ ಹೊಂದಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.


ನ.25ರಂದು ಬೆಳಗ್ಗೆ 9 ಗಂಟೆಗೆ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದೆ. ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ, ಜೆಎಸ್‌ಎಸ್ ಉನ್ನತ ಶಿಕ್ಷಣ ಹಾಗೂ ಸಂಶೋಧನಾ ಅಕಾಡೆಮಿ ಉಪಕುಲಪತಿ ಡಾ.ಸುರೀಂದರ್ ಸಿಂಗ್, ಕುಲಸಚಿವ ಡಾ.ಬಿ.ಮಂಜುನಾಥ್, ಜೆಎಸ್‌ಎಸ್ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ.ಎಸ್.ಬಸವನಗೌಡಪ್ಪ ಭಾಗವಹಿಸುವರು ಎಂದರು. ಡಾ.ಎಚ್.ವಿ.ಚಂದ್ರಕಾಂತ್, ಸತೀಶ್ಚಂದ್ರ, ಅರವಿಂದ್, ಡಾ.ಸ್ಮಿತಾರಾಣಿ ಇದ್ದರು.