ಜಿಲ್ಲೆ

ವೈದ್ಯಕೀಯ ಕಾಲೇಜು ಶೀಘ್ರ ಆರಂಭ: ಸಚಿವ ಡಾ.ಕೆ.ಸುಧಾಕರ್

Chikkaballapur

ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ 4 ಸರ್ಕಾರಿ ವೈದ್ಯಕೀಯ ಕಾಲೇಜುಗಳ ಕಾರ್ಯಾರಂಭಕ್ಕೆ ಮುಂದಿನ ಮಾರ್ಚ್ ತಿಂಗಳೊಳಗೆ ಚಾಲನೆ ನೀಡಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.


ತಾಲೂಕಿನ ಅರೂರಿನಲ್ಲಿ ಚಿಕ್ಕಬಳ್ಳಾಪುರ ವೈದ್ಯಕೀಯ ವಿಜ್ಞಾನಗಳ ಹಾಗೂ ಸಂಶೋಧನ ಸಂಸ್ಥೆಯ ಪ್ರಗತಿ ಪರಿಶೀಲನೆ ಸಭೆ ನಡೆಸಿ ಮಾತನಾಡಿ, ಚಿಕ್ಕಬಳ್ಳಾಪುರ, ಹಾವೇರಿ, ಯಾದಗಿರಿ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ನೂತನ ವೈದ್ಯಕೀಯ ಕಾಲೇಜು ನಿರ್ಮಾಣವಾಗುತ್ತಿದೆ. ಈಗಾಗಲೇ ಶಿವಾಜಿ ನಗರದಲ್ಲಿನ ಅಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ಕಾಲೇಜನ್ನು ಉದ್ಘಾಟಿಸಲಾಗಿದ್ದು, ಜನವರಿಯಲ್ಲಿ ಚಿಕ್ಕಬಳ್ಳಾಪುರ ವೈದ್ಯಕೀಯ ಕಾಲೇಜು ಲೋಕಾರ್ಪಣೆಗೊಳ್ಳಲಿದೆ ಎಂದರು.

ರಾಮನಗರದಲ್ಲಿ ನಿರ್ಮಾಣವಾಗಲಿರುವ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಅನುದಾನ ಭರಿಸಲಿದೆ. ಹಾಗೆಯೇ ಚಿತ್ರದುರ್ಗದಲ್ಲಿ ರಾಜ್ಯ ಸರ್ಕಾರ ಹಾಗೂ ಸ್ಥಳೀಯ ಜಿಲ್ಲಾಡಳಿತದ ಡಿಎಮ್‌ಎಫ್ ಹಣವನ್ನು ಕ್ರೋಢೀಕರಿಸಿ ನಿರ್ಮಿಸಲಾಗುತ್ತಿದೆ. ದಾವಣಗೆರೆ, ವಿಜಯಪುರ, ಉಡುಪಿ, ಬೆಂ. ಗ್ರಾಮಾಂತರ ಸೇರಿ 9 ಜಿಲ್ಲೆಗಳಲ್ಲಿ ಖಾಸಗಿ ಹಾಗೂ ಸರ್ಕಾರಿ ಸಹಭಾಗಿತ್ವದಲ್ಲಿ ಕೇಂದ್ರದ ನೀತಿ ಆಯೋಗದ ಮಾರ್ಗಸೂಚಿ ಅನ್ವಯ ಕಾಲೇಜು ಕಾರ್ಯ ನಿರ್ವಹಿಸಲಿವೆ ಎಂದರು.

ಇತ್ತೀಚೆಗೆ ಅತಿವೃಷ್ಟಿಯಿಂದಾಗಿ ಕಾಮಗಾರಿಗಳು ಮಂದಗತಿಯಲ್ಲಿದ್ದವು. ಈಗ ಮಾನವ ಸಂಪನ್ಮೂಲವನ್ನು ಹೆಚ್ಚಿಸಿಕೊಂಡು ಕಾಮಗಾರಿಗೆ ವೇಗ ನೀಡಲಾಗಿದೆ. ಲೋಕೋಪಯೋಗಿ ಹಾಗೂ ಸಂಬಂಧಪಟ್ಟ ಇಲಾಖೆಗಳ ಪರಿಣಿತ ಅಭಿಯಂತರನ್ನು ನೇಮಿಸಿ, ಗುಣಮಟ್ಟದ ಕಾಮಗಾರಿ ಕೈಗೊಳ್ಳಲಾಗುತ್ತಿದೆ ಎಂದರು.

ವೈದ್ಯಕೀಯ ಶಿಕ್ಷಣ ಇಲಾಖೆಯ ನಿರ್ದೇಶಕಿ ಡಾ.ಸುಜಾತಾ ರಾಥೋಡ್, ಜಂಟಿ ನಿರ್ದೇಶಕ ವಿಜಯ್, ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್, ಸರ್ಕಾರಿ ವೈದ್ಯಕೀಯ ಕಾಲೇಜಿನ ಡೀನ್ ಮತ್ತು ನಿರ್ದೇಶಕ ಸಿದ್ದೀಕ್ ಎಂ. ಅಹಮದ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ಎಸ್.ಮಹೇಶ್ ಕುಮಾರ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ರಾಜಾರೆಡ್ಡಿ, ನೋಡಲ್ ಅಧಿಕಾರಿ ಡಾ.ವಿಜಯಾ ಮತ್ತಿತರರು ಇದ್ದರು.

ಸಚಿವರಿಂದ ಕಾಮಗಾರಿ ಪರಿಶೀಲನೆ: ಜಿಲ್ಲೆಯ ವೈದ್ಯಕೀಯ ಕಾಲೇಜು ಈ ಭಾಗದ ಜನರ ಆರೋಗ್ಯ ಸುಧಾರಣೆಗೆ ಸಹಕಾರಿ. ಜನರಿಗೆ ಉತ್ತಮ ಸೇವೆ ಸಿಗಲಿದೆ. ಇನ್ನು ಬೇರೆ ಕಡೆ ಮಹಾ ನಗರಗಳಿಗೆ ಚಿಕಿತ್ಸೆ ಅಲೆಯಬೇಕಾದ ದುಸ್ಥಿತಿಯು ತಪ್ಪಲಿದೆ. ಇದಕ್ಕೆ ಆದಷ್ಟು ಬೇಗ ಕಾಮಗಾರಿ ಮುಗಿಸಲು ಸಂಬಂಧಪಟ್ಟ ಗುತ್ತಿಗೆದಾರರಿಗೆ ಸೂಚಿಸಲಾಗಿದೆ ಎಂದು ಸಚಿವರು ತಿಳಿಸಿದರು. ಇದಕ್ಕೂ ಮೊದಲು ಚಿಕ್ಕಬಳ್ಳಾಪುರ ವೈದ್ಯಕೀಯ ವಿಜ್ಞಾನಗಳ ಹಾಗೂ ಸಂಶೋಧನ ಸಂಸ್ಥೆಯ ಕಟ್ಟಡ ಕಾಮಗಾರಿ ವೀಕ್ಷಿಸಿದರು.

ಸಿಎಂ ಅಭ್ಯರ್ಥಿ ಎಂದು ಘೋಷಿಸಲಿ
ಬಿಜೆಪಿ ನಾಯಕರ ಕಡೆಗಣನೆಯ ಚರ್ಚಿಸುವ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್ ಧೈರ್ಯವಿದ್ದಲ್ಲಿ ಕಾಂಗ್ರೆಸ್‌ನ ಸಿಎಂ ಅಭ್ಯರ್ಥಿ ಎಂಬುದಾಗಿ ಘೋಷಿಸಲಿ, ವರಿಷ್ಠ ರಾಹುಲ್ ಗಾಂಧಿ ಮೂಲಕ ಹೆಸರು ಪ್ರಕಟಿಸಲು ಒತ್ತಡ ಹೇರಲಿ ಎಂದು ಸಚಿವ ಡಾ. ಕೆ.ಸುಧಾಕರ್ ಹೇಳಿದರು.
ಚಿಕ್ಕಬಳ್ಳಾಪುರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್‌ನಲ್ಲಿ ಸಿಎಂ ಆಗಲು ಎಂ.ಬಿ.ಪಾಟೀಲ್‌ಗೆ ಅರ್ಹತೆ ಇಲ್ಲವಾ?. ಒಂದು ವೇಳೆ ಹೆಸರು ಘೋಷಿಸಿ ಕೊಂಡಲ್ಲಿ ಸಮು ದಾಯದ ನಾಯಕರು ಬೆಂಬಲ ನೀಡಬಹುದು. ಇದನ್ನು ಬಿಟ್ಟು ಬಿಜೆಪಿ ವಿಚಾರ ಪ್ರಸ್ತಾಪಿಸುತ್ತಿದ್ದಾರೆ ಎನ್ನುವ ಮೂಲಕ ಮುಖ್ಯಮಂತ್ರಿ ಸ್ಥಾನದಿಂದ ತೆಗೆದು, ಇಳಿ ವಯಸ್ಸಿನಲ್ಲಿ ಯಡಿಯೂರಪ್ಪಗೆ ಒಂದು ಹುದ್ದೆ ನೀಡಲಾಗಿದೆ ಎಂಬ ಪಾಟೀಲ್ ಟೀಕೆಗೆ ವ್ಯಂಗ್ಯವಾಡಿದರು. ಕೇಂದ್ರ ಸಂಸದೀಯ ಮಂಡಳಿಯಲ್ಲಿ ರಾಜ್ಯದ ಇಬ್ಬರು ಹಿರಿಯ ನಾಯಕರಿಗೆ ಹುದ್ದೆ ಸಿಕ್ಕಿರುವುದು ಸಂತಸದ ವಿಚಾರ ಎಂದರು.