ತುಮಕೂರು: ಪಾಲಿಕೆಯಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದೆ. ಬ್ರೋಕರ್‌ಗಳ ಮೂಲಕ ಬಂದರೆ ಸುಲಭವಾಗಿ ಕೆಲಸಗಳಾಗುತ್ತವೆ. ಬ್ರೋಕರ್‌ಗಳ ಹಾವಳಿಗೆ ಕಡಿವಾಣ ಬೀಳಬೇಕು. ಬಾಕಿ ಇರುವ ಅರ್ಜಿಗಳನ್ನು ವಿಚಾರಿಸಿದರೆ ಸಂಬಂಧಿಸಿದ ಅಧಿಕಾರಿಗಳು ವರ್ಗಾವಣೆಯಾಗಿದ್ದಾರೆ, ರಜೆ ಮೇಲೆ ತೆರಳಿದ್ದಾರೆ ಎಂದು ಸಬೂಬು ಹೇಳುತ್ತಾರೆ ಎಂದು ಬಿಜೆಪಿಯ ನಳಿನಾ ದೂರಿದರು.
ಪಾಲಿಕೆ ಕೌನ್ಸಿಲ್ ಸಭೆಯಲ್ಲಿ ಬುಧವಾರ ಮಧ್ಯವರ್ತಿಗಳ ಹಾವಳಿ ವಿಚಾರ ಹೆಚ್ಚು ಸದ್ದು ಮಾಡಿತು. ಲಂಚ ನೀಡಿದವರ ಕೆಲಸ ಮೊದಲು ಎಂಬಂತಾಗಿದೆ. ಪಾಲಿಕೆಯಲ್ಲಿ ಕೋಟ್ಯಂತರ ರೂ.,ಗಳ ಭ್ರಷ್ಟಾಚಾರ ನಡೆದಿದ್ದರೂ ಬೆಳಕಿಗೆ ಬರುವುದೇ ಇಲ್ಲ. ಆಯುಕ್ತರು ತನಿಖೆ ನಡೆಸುವಂತೆ ಟಿ.ಎಂ.ಮಹೇಶ್ ಒತ್ತಾಯಿಸಿದರು.
ಆಯುಕ್ತೆ ಬಿ.ವಿ.ಅಶ್ವಿಜ ತಕ್ಷಣವೇ ಅಧಿಕಾರಿ ಹಾಗೂ ಜನಪ್ರತಿನಿಧಿಗಳ ನಡುವೆ ಸಮನ್ವಯತೆ ಇದ್ದಾಗ ಮಾತ್ರ ಪಾಲಿಕೆ ಅಭಿವೃದ್ಧಿ ಸಾಧ್ಯ. ಕೆಲಸಕ್ಕೆ ವೇಗ ನೀಡುವ ಸಲುವಾಗಿ ಪಾಲಿಕೆ ನೌಕರರ ಶಾಖೆಗಳನ್ನು ಬದಲಾಯಿಸಲು ಕ್ರಮ ಕೈಗೊಳ್ಳಲಾಗುವುದು. ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಕ್ರಮವಹಿಸಲಾಗುವುದು ಎಂದು ಭರವಸೆಯಿತ್ತರು.