ಬೆಂಗಳೂರು: ಸಮಾಜದಲ್ಲಿ ಮಾಧ್ಯಮ ಅತ್ಯಂತ ಅದರಣೀಯ ಕ್ಷೇತ್ರ. ಈ ಕ್ಷೇತ್ರಕ್ಕೆ ಬರುವ ಹೊಸ ಪತ್ರಕರ್ತರು ಪರಿಷ್ಕರಣೆಗೆ ಒಳಗಾಗಬೇಕಿದೆ ಎಂದು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಹೇಳಿದ್ದಾರೆ.
ಕರ್ನಾಟಕ ಮಹಿಳಾ ಯಕ್ಷಗಾನ ಸಹಯೋಗದಲ್ಲಿ ಮೀಡಿಯಾ ಅಲೂಮ್ನಿ ಅಸೋಸಿಯೇಷನ್ ಆಫ್ಮಂಗಳಗಂಗೋತ್ರಿ ಸಂಸ್ಥೆ ವತಿಯಿಂದ ಭಾನುವಾರ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಲಾಗಿದ್ದ ‘ಯಕ್ಷಗಾನ-ಮಹಿಳೆ-ಮಾಧ್ಯಮ’ ಹಾಗೂ ಮಾಮ್ ಇನ್‌ಸ್ಪೈರ್ ಪ್ರಶಸ್ತಿ’ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.
ಸಮಾಜದ ಬೆಳವಣಿಗೆಯಲ್ಲಿ ಮಾಧ್ಯಮ ಕ್ಷೇತ್ರ ತನ್ನದೆ ಆದ ವಿಶಿಷ್ಟ ಕೊಡುಗೆ ನೀಡುತ್ತಿದೆ. ಮುಂದಿನ ಪೀಳಿಗೆ ವಿದ್ಯಾರ್ಥಿಗಳಿಗೆ ಆಸರೆಯಾಗಬೇಕೆಂಬ ದೂರದೃಷ್ಟಿಯಿಂದ 24 ವರ್ಷ ಹಿಂದೆ ಈ ಸಂಸ್ಥೆ ಸ್ಥಾಪನೆಯಾಗಿದೆ. ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ‘ಮಾಮ್’ ಕಾರ್ಯಕ್ರಮಕ್ಕೆ 30 ಸಾವಿರ ರೂ.ನೆರವು ನೀಡುವುದಾಗಿ ಯು.ಟಿ.ಖಾದರ್ ಘೋಷಿಸಿದರು.
ಹಿರಿಯ ಪತ್ರಕರ್ತ ರವಿ ಹೆಗಡೆ ಮಾತನಾಡಿ, ಇಂದಿನ ಮಾಧ್ಯಮ ಕ್ಷೇತ್ರದಲ್ಲಿ ಸ್ಫೂರ್ತಿದಾಯಕ ಅಂಶ ಕುಸಿವಾಗುತ್ತಿದೆ. ಒಂದು ಕಡೆ ವಿಪರೀತ ವ್ಯಾಪಾರೀಕರಣ, ಮತ್ತೊಂದೆಡೆ ಸೈದ್ಧಾಂತಿಕ ಬದ್ಧತೆ ಉಳಿಸಿಕೊಳ್ಳುವ ಸವಾಲು ಇದೆ. ಕೆಲ ಸಾಮಾಜಿಕ ಜಾಲತಾಣಗಳಿಂದ ಬರುವ ಸುಳ್ಳು ಸುದ್ದಿ, ಬೇಡದ ವಿಚಾರಗಳ ವೈಭವೀಕರಣದಿಂದ ಈ ಕ್ಷೇತ್ರ ಇಕ್ಕಟ್ಟಿನಲ್ಲಿದೆ. ಕೃತಕ ಬುದ್ಧಿಮತ್ತೆ ಸೇರಿ ಹೊಸ ತಂತ್ರಜ್ಞಾನ ಶುರುವಾಗಿದೆ. ಇದರಿಂದಾಗಿ ಪತ್ರಕರ್ತರು ಕೆಲಸ ಕಳೆದಕೊಳ್ಳುವ ಜತೆಗೆ ಕ್ರಿಯಾಶೀಲತೆ, ಬರೆಯುವ ಶಕ್ತಿ, ಸ್ಮರಣಾ ಸಾಮರ್ಥ್ಯವನ್ನು ಕಿತ್ತುಕೊಳ್ಳುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.
ವಿಜೇತ ಕಾಲೇಜುಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಯೂನಿವರ್ಸಲ್ ಸಮೂಹ ಸಂಸ್ಥೆಗಳ ಮುಖ್ಯಸ್ಥ ಆರ್.ಉಪೇಂದ್ರ ಶೆಟ್ಟಿ, ಪತ್ರಿಕೋದ್ಯಮ ಅಧ್ಯಯನದ ದಿನಗಳನ್ನು ನೆನಪಿಸಿಕೊಂಡರು. ಮಾಮ್‌ನ ಗೌರವಾಧ್ಯಕ್ಷ ವೇಣು ಶರ್ಮಾ, ಅಧ್ಯಕ್ಷ ನವೀನ್ ಅಮ್ಮೆಂಬಳ, ಕರ್ನಾಟಕ ಕಲಾದರ್ಶಿನಿ ನಿರ್ದೇಶಕ ಶ್ರೀನಿವಾಸ್ ಮತ್ತಿತರರಿದ್ದರು.