ಜಿಲ್ಲೆ

ಮೊಗಸಾಲೆಗೆ ಮಾಧ್ಯಮದವರಿಗೆ ನಿರ್ಬಂಧ

ಬೆಂಗಳೂರು: ವಿಧಾನಸಭೆ ಮೊಗಸಾಲೆಗೆ ಮಾಧ್ಯಮ ಪ್ರತಿನಿಧಿಗಳಿಗೆ ನಿರ್ಬಂಧ ವಿಧಿಸಿದ ಸ್ಪೀಕರ್ ಕಾಗೇರಿ ನಂತರ ತೆರವುಗೊಳಿಸಿದ್ದಾರೆ.

ಈ ಮೊದಲು ಸದನ ಕಲಾಪ ಚಿತ್ರೀಕರಣಕ್ಕೆ ನಿರ್ಬಂಧ ವಿಧಿಸಿದ್ದ ಸ್ಪೀಕರ್, ಶಾಸಕರ ಭವನ ಪ್ರವೇಶಕ್ಕೂ ತಡೆ ಒಡ್ಡಿದ್ದರು. ಅದಕ್ಕೆ ಮಾಧ್ಯಮ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಈ ವಿಚಾರವಾಗಿ ಪ್ರಮುಖ ದಿನಪತ್ರಿಕೆಗಳ ಸಂಪಾದಕರು ಸ್ಪೀಕರ್ ಕಾಗೇರಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಆದರೂ, ಸ್ಪೀಕರ್ ಜಪ್ಪಯ್ಯ ಎಂದಿರಲಿಲ್ಲ. ತಮ್ಮ ರಾಜಕೀಯ ಕಾರ್ಯದರ್ಶಿ ಎಸ್.ಆರ್. ವಿಶ್ವನಾಥ್ ಮೂಲಕ ಸಿಎಂ ಹೇಳಿ ಕಳುಹಿಸಿದರೂ ಕೇಳಲಿಲ್ಲ. ಬಜೆಟ್ ಮಂಡನೆ ದಿನ ಸಹ ಪತ್ರಕರ್ತರು ಹಾಗೂ ಶಾಸಕರಿಗೆ ಪ್ರತಿಗಳನ್ನು ವಿತರಿಸದೆ ಗೊಂದಲವಾಗಿತ್ತು. ಸಿಎಂ ಸದನದಲ್ಲಿಯೇ ಸೂಚನೆ ನೀಡಿದ ನಂತರ ಹಂಚಲಾಯಿತು.

ಸೋಮವಾರ ಇದ್ದಕ್ಕಿದ್ದಂತೆ ವಿಧಾನಸಭೆ ಮೊಗ ಸಾಲೆಗೂ ಮಾಧ್ಯಮದವರಿಗೆ ನಿರ್ಬಂಧ ವಿಧಿಸಿದ ಸುದ್ದಿ ಬಂತು. ಮೊಗಸಾಲೆಯಲ್ಲಿ ಕುಳಿತ ಕೆಲವು ಮಾಧ್ಯಮದವರನ್ನು ಮಾರ್ಷಲ್​ಗಳು ಹೊರಗೆ ಕಳುಹಿಸಿದರು. ಈ ಹಿನ್ನೆಲೆಯಲ್ಲಿ ಗೊಂದಲ ಸೃಷ್ಟಿಯಾಗಿತ್ತು. ಬಳಿಕ ನಿರ್ಬಂಧ ಮಾಧ್ಯಮದವರಿಗಲ್ಲ ಎಂದು ಮಾರ್ಷಲ್ ಮೂಲಕ ಸ್ಪೀಕರ್ ಹೇಳಿ ಕಳುಹಿಸಿದರು. ಆ ತರುವಾಯ ಸ್ಪೀಕರ್, ಸಚಿವರು ಹಾಗೂ ಶಾಸಕರ ಆಪ್ತ ಸಹಾಯಕರು(ಪಿಎ)ಗಳಿಗೆ ಮೊಗಸಾಲೆಗೆ ಬಾರದಂತೆ ನಿರ್ಬಂಧ ಹೇರಿದರು.