ಜಿಲ್ಲೆ

ಮಕ್ಕಳಿಗೆ ಪುಸ್ತಕ ಓದುವ ಹವ್ಯಾಸ ಬೆಳೆಸಿ: ಜಿಲ್ಲಾಧಿಕಾರಿ ಡಾ.ಕುಮಾರ ಕಿವಿಮಾತು

ಕೆ.ಎನ್.ರಾಘವೇಂದ್ರ

ಮಂಡ್ಯ: ಮಕ್ಕಳಿಗೆ ಪುಸ್ತಕ ಓದುವ ಹವ್ಯಾಸ ಬೆಳೆಸಬೇಕು. ಜತೆಗೆ ಪುಸ್ತಕಗಳ ಓದುವುದರಿಂದ ಮೌಲ್ಯ ವೃದ್ಧಿಸುತ್ತದೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿದರು.

ನಗರದ ಗಾಂಧಿಭವನದಲ್ಲಿ ಚಿರಂತ ಪ್ರಕಾಶನ ವತಿಯಿಂದ ಆಯೋಜಿಸಿದ್ದ ಸಾಹಿತಿ ಡಾ.ಪಿ.ಸುಮಾರಾಣಿ ಶಂಭು ರಚನೆಯ ‘ಮೀಡಿಯಾ ಅವಾಂತರಗಳು’ ಕೃತಿ ಬಿಡುಗಡೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಪುಸ್ತಕಗಳಿಗೆ ದಾಸರಾದರೆ ಉತ್ತಮ ಜೀವನ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ. ನಾನೂ ಕೂಡ ಒಬ್ಬ ಪುಸ್ತಕ ಪ್ರೇಮಿ. ಪ್ರಸ್ತುತ ಸಂದರ್ಭದಲ್ಲಿ ಮಕ್ಕಳು ಮೊಬೈಲ್‌ಗಳ ದಾಸರಾಗುತ್ತಿದ್ದಾರೆ. ಅಲ್ಲದೆ, ದೃಶ್ಯ ಮಾಧ್ಯಮಗಳಿಗೆ ಹೆಚ್ಚು ಅವಲಂಬಿತರಾಗಿದ್ದಾರೆ. ಇದರಿಂದ ಪುಸ್ತಕ ಓದುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಆದ್ದರಿಂದ ಮಕ್ಕಳಿಗೆ ಪುಸ್ತಕಗಳ ಓದುವುದನ್ನು ಕಲಿಸಬೇಕು ಎಂದರು.

ಮೌಲ್ಯವರ್ದಿತ ಜೀವನಕ್ಕೆ ಬರವಣಿಗೆಯೂ ಮುಖ್ಯವಾಗಿದೆ. ಎಲ್ಲ ಸಮಸ್ಯೆಗಳಿಗೂ ದೊಡ್ಡ ಔಷಧ ಬರವಣಿಗೆಯಾಗಿದೆ. ಆದ್ದರಿಂದ ಜೀವನದಲ್ಲಿ ಬರವಣಿಗೆಯನ್ನು ರೂಢಿಸಿಕೊಳ್ಳಬೇಕು. ಪರಿಪೂರ್ಣವಾದ ಜೀವನ ರೂಪಿಸುವುದೇ ಬರವಣಿಗೆಯಾಗಿದೆ. ಮನಸ್ಸು ಹಾಗೂ ಯೋಚನೆಗಳು ಪರಿಶುದ್ಧವಾಗಿದ್ದಾಗ ಮಾತ್ರ ಉತ್ತಮವಾದ ಬರವಣಿಗೆ ಬರಲು ಸಾಧ್ಯವಾಗುತ್ತದೆ. ಮನಸ್ಸು ಹಿಡಿತದಲ್ಲಿರಬೇಕು. ಮನಸ್ಸು ಮಲಿನವಾಗದಂತೆ ನೋಡಿಕೊಳ್ಳಬೇಕು. ದೇಹ ಶುದ್ಧವಾಗಿದ್ದರೆ ಮನಸ್ಸು ಶುದ್ಧವಾಗಿರುತ್ತದೆ ಎಂದರು.

ಕೃತಿ ಬಿಡುಗಡೆ ಮಾಡಿದ ನಟ ಮಂಡ್ಯ ರಮೇಶ್ ಮಾತನಾಡಿ, ರಂಗಭೂಮಿ ಅತ್ಯಂತ ಸೂಕ್ಷ್ಮ ಬದುಕನ್ನು ಕಟ್ಟಿಕೊಡುತ್ತದೆ. ರಂಗಭೂಮಿಯು ಉತ್ತಮ ಜೀವನ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಕೆ.ವಿ.ಶಂಕರಗೌಡ ಹಾಗೂ ಕೆ.ಎಸ್.ಸಚ್ಚಿದಾನಂದ ಅವರೊಂದಿಗೆ ರಂಗಭೂಮಿಯಲ್ಲಿ ಕೆಲಸ ಮಾಡಿದ್ದೇನೆ. ಅವರು ರಂಗಭೂಮಿಗಾಗಿ ದುಡಿದಿದ್ದಾರೆ. ರಂಗಭೂಮಿಯಿಂದಲೇ ನಾನು ಬದುಕು ಕಟ್ಟಿಕೊಳ್ಳಲು ಸಾಧ್ಯವಾಯಿತು. ಇಂದು ಮಾಧ್ಯಮ ಕೂಡ ಬಹಳ ಎಚ್ಚರಿಕೆಯಿಂದ ಕೆಲಸ ಮಾಡಬೇಕಾಗಿದೆ. ಸಕರಾತ್ಮಕ ಶಕ್ತಿಯನ್ನು ಸರಿಯಾಗಿ ಮಾಧ್ಯಮಗಳು ಬಳಸಬೇಕು. ಸಮಾಜದಲ್ಲಿ ಭಯ ಸೃಷ್ಟಿಸುವ ಕೆಲಸ ಮಾಡಬಾರದು. ಸುಮರಾಣಿ ಶಂಭು ಅವರು ರಚಿಸಿರುವ ‘ಮೀಡಿಯಾ ಅವಾಂತರಗಳು’ ಕೃತಿ ಮಾಧ್ಯಮಗಳ ತಲ್ಲಣಗಳ ಬಗ್ಗೆ ತಿಳಿಸಿದೆ ಎಂದು ತಿಳಿಸಿದರು.

ವಾಗ್ಮಿ ಹಾಗೂ ವಿಶ್ರಾಂತ ಪ್ರಾಂಶುಪಾಲ ಪ್ರೊ.ಎಂ.ಕೃಷ್ಣೇಗೌಡ ಅವರು ಕೃತಿ ಕುರಿತು ಮಾತನಾಡಿದರು. ಎಸ್‌ಬಿಇಟಿ ಸಮೂಹ ಸಂಸ್ಥೆಗಳ ಕಾರ್ಯದರ್ಶಿ ಮೀರಾಶಿವಲಿಂಗಯ್ಯ ಅಧ್ಯಕ್ಷತೆ ವಹಿಸಿದ್ದರು. ಕೃತಿ ಕರ್ತೃ ಡಾ.ಪಿ.ಸುಮಾರಾಣಿ ಶಂಭು, ಪ್ರಕಾಶನದ ಮುಖ್ಯಸ್ಥ ಕಬ್ಬನಹಳ್ಳಿ ಶಂಭು ಇದ್ದರು.