ರೋಗ ನಿಯಂತ್ರಣಕ್ಕೆ ರೈತರು, ವಿಜ್ಞಾನಿಗಳ ತಂಡದೊಂದಿಗೆ ಸಭೆ
ರಾಮನಗರ: ನಗರದ ಜಿಪಂ ಸಭಾಂಗಣದಲ್ಲಿ ಕಾಸರಗೋಡು ತೆಂಗು ಬೆಳೆ ಉತ್ಪಾದನೆ ಸಂಶೋದನಾ ವಿಭಾಗ, ಜಿಲ್ಲಾ ತೋಟಗಾರಿಕೆ ಇಲಾಖೆಯಿಂದ ತೆಂಗಿನಲ್ಲಿ ಕಪ್ಪು ತಲೆ ಹುಳು, ಬಿಳಿ ನೊಣದ ನಿಯಂತ್ರಣ ಹಾಗೂ ತೆಂಗು ಬೆಳೆ ಅಭಿವೃದ್ಧಿ ಕುರಿತು ರೈತರು, ವಿಜ್ಞಾನಿಗಳ ತಂಡದೊಂದಿಗೆ ಸಭೆ ನಡೆಯಿತು.
ಚನ್ನಪಟ್ಟಣ ಶಾಸಕ ಸಿ.ಪಿ. ಯೋಗೇಶ್ವರ್ ಅಧ್ಯಕ್ಷತೆ ವಹಿಸಿದ್ದರು. ವಿಜ್ಞಾನಿಗಳು, ತೋಟಗಾರಿಕೆ ಅಧಿಕಾರಿಗಳು, ರೈತ ಮುಖಂಡರು ಸಭೆಯಲ್ಲಿ ಭಾಗವಹಿಸಿ ರೋಗ ಹತೋಟಿ, ಔಷಧ, ವ್ಯವಸಾಯ ಕ್ರಮಗಳ ಬಗ್ಗೆ ರೈತರು ವಿಜ್ಞಾನಿಗಳ ಜತೆ ಚರ್ಚಿಸಿದರು. ವಿಜ್ಞಾನಿಗಳು ರೈತರು ಕೇಳಿದ ಪ್ರಶ್ನೆಗಳಿಗೆ, ಸಮಸ್ಯೆಗಳಿಗೆ ಉತ್ತರ ನೀಡಿ ರೋಗ ಹತೋಟಿ ಕ್ರಮಗಳ ಬಗ್ಗೆ ತಿಳಿಸಿಕೊಟ್ಟರು.
ತೋಟಗಾರಿಕೆ ಜಿಲ್ಲಾ ಉಪನಿರ್ದೇಶಕ ಮುನೇಗೌಡ ಮಾತನಾಡಿ, ಜಿಲ್ಲೆಯಲ್ಲಿ ಪ್ರಮುಖ ಬೆಳೆಯಾಗಿ ತೆಂಗು ಮತ್ತು ಮಾವನ್ನು ಜಿಲ್ಲೆಯಲ್ಲಿ ಬೆಳೆಯಲಾಗುತ್ತಿದೆ. ಅದರಲ್ಲಿ 28 ಸಾವಿರ ಕುಟುಂಬಗಳು ತೆಂಗು ಬೆಳೆಗೆ ಅವಲಂಬಿತವಾಗಿದೆ. ಎರಡು ವರ್ಷಗಳಲ್ಲಿ ತೆಂಗು ಬೆಳೆ ಕುಂಠಿತಗೊಂಡಿದೆ. ಮೊದಲು 100 ರಿಂದ 150 ಕಾಯಿ ಬಿಡುತ್ತಿದ್ದು, ತೆಂಗಿನ ಮರವು ಪ್ರಸ್ತುತ 15 ರಿಂದ 20 ಕಾಯಿ ಪ್ರತಿಗೊಂಚಲಿಗೆ ಬಿಡುತ್ತಿದೆ. ಇದಕ್ಕೆ ಕಾರಣ ತೆಂಗು ಮರದಲ್ಲಿ ಕಾಣಿಸುವ ರೋಗಗಳಾಗಿದೆ. ಚನ್ನಪಟ್ಟಣದಲ್ಲಿ ತೆಂಗು ಪ್ರಾಯೋಗಿಕ ಕೇಂದ್ರ ಇದ್ದು, ಇದರ ಪ್ರಯೋಜನವನ್ನು ರೈತರು ಪಡೆದುಕೊಳ್ಳವಂತೆ ತಿಳಿಸಿದರು.
ತೆಂಗು ಬೆಳೆ ಉತ್ಪಾದನೆ ಸಂಶೋದನಾ ವಿಭಾಗದ ಸಂಶೋಧನಾಧಿಕಾರಿ ಡಾ. ವಿನಾಯಕ ಹೆಗಡೆ ಮಾತನಾಡಿ, ತೆಂಗು ಬೆಳೆಯಲ್ಲಿ ಕೀಟಬಾಧೆ ಪ್ರಾರಂಭಿಕ ಹಂತದಲ್ಲಿ ಗುರುತಿಸಿ, ನಿಯತ್ರಿಸಿದರೆ ತೆಂಗು ಬೆಳೆಯಲ್ಲಿ ವೃದ್ಧಿ ಕಾಣಬಹುದು. ತೆಂಗು ಬೆಳೆಯಲ್ಲಿ ಸುಳಿಕೊರೆ, ಕಾಂಡಸೋರುವ ರೋಗ ಮತ್ತು ಅಣಬೆ ರೋಗ ಸಾಮಾನ್ಯವಾಗಿ ಕಾಣಬಹುದು.
ಕಾಂಡಸೋರುವ ರೋಗವು ಶಿಲೀಂದ್ರದಿಂದ ಬರುವಂತಹುದು. ಈ ರೋಗವನ್ನು ಎಲ್ಲ ಪ್ರದೇಶದಲ್ಲಿ ಕಾಣಬಹುದು. ಮಣ್ಣಿನಿಂದ ಬರುವ ಶಿಲೀಂಧ್ರ ರೋಗ ಕಾಂಡದೊಳಗೆ ಪ್ರವೇಶಿಸಲ್ಪಡುತ್ತದೆ. ಈ ರೋಗದಿಂದ ಮರವು ಸಣ್ಣದಾಗಿ ಇವುಗಳನ್ನು ವೈಜ್ಞಾನಿಕವಾಗಿ ನಿರ್ವಹಣೆ ಮಾಡಿದಲ್ಲಿ ನಿಧಾನವಾಗಿ ರೋಗವು ಕಾಣೆಯಾಗುತ್ತದೆ ಎಂದರು.
ತೆಂಗು ಬೆಳೆ ಉತ್ಪಾದನೆಯ ಸಂಶೋಧನಾ ವಿಭಾಗದ ಅಧಿಕಾರಿ ಡಾ. ಜೋಸೇಪ್ ರಾಜ್ಕುಮಾರ್ ಮಾತನಾಡಿ, ಕೆಂಪು ಮೂತಿ ಹುಳು ಹಾಗೂ ಕಪ್ಪುತಲೆ ಹುಳುಗಳನ್ನು ನಿಯತ್ರಣ ಮತ್ತು ಡಾ. ಚಂದ್ರಶೇಖರ್ ರವರು ಪರೋಪಕಾರಿ ಮತ್ತು ಪರತಂತ್ರ ಜೀವಿಗಳ ಉತ್ಪಾದನೆ ಕುರಿತು ಮಾಹಿತಿ ನೀಡಿದರು.
ತೆಂಗು ಬೆಳೆ ಉತ್ಪಾದನೆ ಸಂಶೋದನಾ ವಿಭಾಗದ ಅಧಿಕಾರಿ ಡಾ. ರವಿ ಭಟ್ ಮಾತನಾಡಿ, ತೆಂಗು ಬೆಳೆ ನಾಟಿ ಕ್ರಮಬದ್ಧವಾಗಿರಬೇಕು. ನೀರು, ವಾತಾವರಣ, ಮಣ್ಣು ಪೋಷಕಾಂಶಗಳ ನಿರ್ವಹಣೆ ಬಹಳ ಮುಖ್ಯ ತೆಂಗು ನಿರಂತರ ಕೃಷಿಯಾಗಿದೆ. ಸಾಧ್ಯವಾದಷ್ಟು ಮಣ್ಣಿನ ಪರೀೆ ಮಾಡಿಸಿ ತೆಂಗಿನ ಮರಕ್ಕೆ ಸಾವಯವ ಗೊಬ್ಬರ ಬಳಸಿ ಎಂದರು.
ತೆಂಗು ಬೆಳೆ ಸಂಸ್ಥೆಯ ನಿರ್ದೇಶಕರಾದ ಡಾ. ಹೆಬ್ಬಾರ್ ಮಾತನಾಡಿ, ತೆಂಗಿನಿಂದ ನೀರಾ (ಕಲ್ಪರಸ), ಎಳೆನೀರು ಮತ್ತು ತೆಂಗಿನ ಕಾಯಿ ಯಿಂದ 200 ರಿಂದ 300 ಬಗೆಯ ಪದಾರ್ಥಗಳನ್ನು ತಯಾರಿಸಬಹುದು. ಒಂದು ಮರದ ನೀರಾದಿಂದ ಒಂದು ವರ್ಷಕ್ಕೆ ಇಪ್ಪತ್ತು ಸಾವಿರ ರೂ. ಗಳಿಸಬಹುದು ಎಂದು ತಿಳಿಸಿದರು.
ಜಿಪಂ ಸಿಇಒ ಅನ್ಮೊಲ್ ಜೈನ್, ಯೋಜನಾ ನಿರ್ದೇಶಕ ಚಿಕ್ಕಸುಬ್ಬಯ್ಯ, ತೆಂಗು ಬೆಳೆಯ ಸಂಶೋನಾಧಿಕಾರಿಗಳು, ಪ್ರಗತಿ ಪರ ರೈತರು, ರೈತ ಸಂಗಳ ಪದಾಧಿಕಾರಿಗಳು, ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.
ಕಳೆದ ವರ್ಷ ಈ ವರ್ಷ ತೆಂಗು ಮರಗಳೇ ಹಾಳಾಗಿ ಹೋಗಿವೆ. ರೈತರು ನಷ್ಟದ ಹಾದಿ ತುಳಿದಿದ್ದಾರೆ. 80 ಕೋಟಿ ತೆಂಗಿನಮರ ರೋಗಕ್ಕೆ ತುತ್ತಾಗಿವೆ. ಸಾಮೂಹಿಕ ರೋಗ ಹತೋಟಿಗೆ ಪರತಂತ್ರ ಜೀವಿಗಳನ್ನು ಏಕಕಾಲದಲ್ಲಿ ಬೆಳೆಸಿ ಹಂಚಲು ಸಾಧ್ಯವಿದೆಯೇ? ಕನಿಷ್ಠ 30 ವರ್ಷಗಳಿಂದಲೂ ದೂರದೃಷ್ಟಿ ಇಟ್ಟು ಕೀಟಬಾಧೆ ನಿಯಂತ್ರಣ ಮಾಡಲು ಇಲಾಖೆ ಮುನ್ನೆಚ್ಚರಿಕೆ ವಹಿಸಲು ಏಕೆ ಸಾಧ್ಯವಾಗಲಿಲ್ಲ? > ಸಿ. ಪುಟ್ಟಸ್ವಾಮಿ, ರೈತ ಮುಖಂಡ ಚನ್ನಪಟ್ಟಣ ಕಳೆದ 10 ವರ್ಷದಿಂದ ರೈತರ ತೆಂಗಿನಮರಗಳು ರೋಗಕ್ಕೆ ತುತ್ತಾಗಿ ಹೋಗುತ್ತಿವೆ. ಇಲ್ಲಿಯವರೆಗೆ ಒಂದೇ ಒಂದು ಮರವನ್ನು ಉಳಿಸಲು ಸಾಧ್ಯವಾಗಿಲ್ಲ. ಇಂತಹ ಸಂವಾದಗಳು ಪ್ರತಿ ತಾಲೂಕು ಹೋಬಳಿ ಮಟ್ಟದಲ್ಲಿ ಆಗಬೇಕು. ಈ ರೀತಿ ಆದರೆ ಯಾವ ಪ್ರಯೋಜನವೂ ರೈತರಿಗೆ ಸಿಗದು. ರೈತರಿಗೆ ರೋಗಗಳ ಬಗ್ಗೆ ರೋಗ ಹತೋಟಿ ಕ್ರಮಗಳ ಬ್ಗಗೆ ಸಮಗ್ರ ಮಾಹಿತಿ ಒದಗಿಸಬೇಕು. > ಬಿಳಗುಂಬ ವಾಸು, ಪ್ರಗತಿಪರ ರೈತ ವಿಜ್ಞಾನಿಗಳು ರಾಸಾಯನಿಕ ಕ್ರಮಕ್ಕೆ ಒತ್ತು ನೀಡುವುದು ಬೇಡ. ಸಾವಯವ ಕೃಷಿಗೆ ಉತ್ತೇಜನ ನೀಡುವಂತೆ ರೈತರಲ್ಲಿ ತಿಳುವಳಿಕೆ ಮೂಡಿಸಬೇಕು. ಈಗಾಗಲೇ ರಾಸಾಯನಿಕ ಔಷಧ ಸಿಂಪಡಣೆ ಪರಿಣಾಮ ಮಾವು ಹೂ, ತೆಂಗಿನಲ್ಲಿ ಪೀಚು ಕಚ್ಚುತ್ತಿಲ್ಲ. ಹೀಗೆ ನಾವು ರಾಸಾಯನಿಕದತ್ತ ಮುಖ ಮಾಡಿದರೆ 20 ವರ್ಷಗಳಲ್ಲಿ ತೆಂಗು, ಮಾವನ್ನು ಕಳೆದುಕೊಳ್ಳುತ್ತೇವೆ. > ರಾಜು, ರೈತ, ಚನ್ನಪಟ್ಟಣ.
ರೈತರಿಗೆ ಅನುಕೂಲ ತೆಂಗು ಬೆಳೆಯಲ್ಲಿ ಬಾಧಿಸುವ ಕೀಟಗಳನ್ನು ಹತೋಟಿ ಮಾಡಲು ಕ್ರಮವಹಿಸಲಾಗುತ್ತದೆ. ರೋಗಬಾಧೆ ಎಲ್ಲ ಕಡೆ ಇದ್ದು, ಇದರ ಬಗ್ಗೆ ಅರಿವು ಮೂಡಿಸಲು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕಾರ್ಯಕ್ರಮ ಏರ್ಪಡಿಸಲಾಗುವುದು. ಜಿಲ್ಲೆಯಲ್ಲಿ ತೆಂಗು ಬೆಳೆ ಅಭಿವೃದ್ಧಿಗಾಗಿ ರೈತರು ಆರ್ಥಿಕವಾಗಿ ಶಕ್ತರಾಗಬೇಕು. ನೀರಾ ಉತ್ಪಾದನೆ ಹೆಚ್ಚಿಸುವ ದೃಷ್ಠಿಯಿಂದ ಅನೇಕ ಕ್ರಮ ಕೈಗೊಳ್ಳಲಾಗಿದೆ. ಚನ್ನಪಟ್ಟಣದ ತಿಟ್ಟಮಾರನಹಳ್ಳಿಯಲ್ಲಿ ಪ್ಲಾಂಟೆಷನ್ ಮಾಡಲು ಕ್ರಮವಹಿಸಲಾಗಿದೆ. ಇದರಿಂದ ಸುತ್ತಮುತ್ತಲಿನ ರೈತರಿಗೆ ಅನುಕೂಲವಾಗಲಿದೆ, ಬೆಂಗಳೂರು & ಮೈಸೂರು ಹೆದ್ದಾರಿಯು ಚನ್ನಪಟ್ಟಣ ಮತ್ತು ರಾಮನಗರ ರೈತರಿಗೆ ಅನುಕೂಲಕರವಾಗಿರುವುದರಿಂದ ನೀರಾ ವ್ಯಾಪಾರಕ್ಕೆ ಅನುಕೂಲವಾಗಲಿದೆ. ತೆಂಗು ಬೆಳೆಗಾರರಿಗೆ ವಿಮೆ ಮಾಡಿಸಲು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಕ್ರಮವಹಿಸಬೇಕು ಎಂದು ಶಾಸಕ ಸಿ.ಪಿ. ಯೋಗೇಶ್ವರ್ ತಿಳಿಸಿದರು.