ಆನೇಕಲ್ : ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರಂತರ ಅಪಘಾತ ನಿಯಂತ್ರಿಸಿ, ಬ್ಲಾಕ್ ಸ್ಪಾಟ್‌ಗಳನ್ನು ಸರಿಪಡಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಸಂಸದ ಡಾ.ಸಿ.ಎನ್.ಮಂಜುನಾಥ್ ಹೇಳಿದರು.
ಚಂದಾಪುರದಿಂದ ಅತ್ತಿಬೆಲೆವರೆಗೆ ರಾಷ್ಟ್ರೀಯ ಹೆದ್ದಾರಿ ಹೊಸೂರು-ಬೆಂಗಳೂರು ಮುಖ್ಯ ರಸ್ತೆಯಲ್ಲಿ ಗುರುವಾರ ಹೆದ್ದಾರಿ ಪ್ರಾಧಿಕಾರ ಹಾಗೂ ಸ್ಥಳೀಯ ಜನಪ್ರತಿನಿಧಿಗಳ ಸಮ್ಮುಖದಲ್ಲಿ ಪರಿಶೀಲನೆ ನಡೆಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಹೊಸೂರು-ಬೆಂಗಳೂರು ಮುಖ್ಯರಸ್ತೆಯ ಚಂದಾಪುರದಿಂದ ಅತ್ತಿಬೆಲೆವರೆಗೆ ನಾಲ್ಕು ಕಡೆ ಬ್ಲಾಕ್ ಸ್ಪಾಟ್ ಇದೆ ಎಂದು ಗುರುತಿಸಲಾಗಿದೆ. ಹೆದ್ದಾರಿಯಲ್ಲಿ ಪದೇಪದೆ ಅಪಘಾತಗಳು ಆಗುತ್ತಿದ್ದು, ಹೆದ್ದಾರಿ ಪ್ರಾಧಿಕಾರದ ಅಧಿಕಾರಿ ಅರ್ಚನಾ ಹಾಗೂ ಸಿಬ್ಬಂದಿ ಜತೆ ಪರಿಶೀಲನೆ ನಡೆಸಲಾಗಿದ್ದು, ಚಂದಾಪುರದಿಂದ ಅತ್ತಿಬೆಲೆವರೆಗೆ ಪ್ರತಿದಿನ ಟ್ರಾಫಿಕ್ ಜಾಮ್ ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲಿ ಟ್ರಾಫಿಕ್ ಜಾಮ್ ಹಾಗೂ ಹಳ್ಳಿಗಳಿಗೆ ಸಂಪರ್ಕ ಆಗುವ ಸ್ಥಳ ಇದೆ ಅಂತಹ ಕಡೆ ಮೇಲ್ಸೇತುವೆ ನಿರ್ಮಾಣ ಮಾಡುವುದು ಹಾಗೂ ಅಂಡರ್ ಪಾಸ್ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದರು.
160 ಕೋಟಿ ಟೆಂಡರ್ ಕರೆಯಲಾಗಿದ್ದು, ಚಂದಾಪುರ ಸಮೀಪದ ಹಳೆಯ ಚಂದಾಪುರದಲ್ಲಿ ರೈಲ್ವೆ ಅಂಡರ್ ಪಾಸ್ ಇದ್ದು, ಇಲ್ಲಿ ರಸ್ತೆ ಅಗಲೀಕರಣ ಆಗಬೇಕು ಎನ್ನುವುದು ಹಲವಾರು ವರ್ಷದ ಸ್ಥಳೀಯರ ಹೋರಾಟ. ಆದರೆ ಇದುವರೆಗೂ ಇದು ಈಡೇರಿಲಿಲ್ಲ. ಮುಂದಿನ ಎರಡು ವರ್ಷದ ಒಳಗೆ ಇದರ ಸಂಪೂರ್ಣ ಕಾಮಗಾರಿ ಮಾಡಲು ಅಧಿಕಾರಿಗಳಿಗೆ ಸೂಚಿಸಲಾಗಿದ್ದು, ಚಂದಾಪುರದಿಂದ ಅತ್ತಿಬಲೆಯವರೆಗೆ ಕಾಮಗಾರಿಗೆ ವೇಗ ನೀಡುವಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಸೂಕ್ತ ಭದ್ರತೆ ಕಲ್ಪಿಸಬೇಕಿತ್ತು
ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಗಣೇಶ ಮೆರವಣಿಗೆ ವೇಳೆ ಗಲಾಟೆ ನಡೆದಿದ್ದು, ಧಾರ್ಮಿಕ ಕಾರ್ಯಕ್ರಮಕ್ಕೆ ಸೂಕ್ತ ಭದ್ರತೆ ಕಲ್ಪಿಸಬೇಕಿತ್ತು. ಯಾವುದೇ ಸಮುದಾಯ ಆಗಿರಲಿ ಧಾರ್ಮಿಕ ಸಂದರ್ಭದಲ್ಲಿ ಅದನ್ನು ತಡೆಯುವುದು, ಗಲಾಟೆ ಮಾಡುವುದು ಸರಿಯಲ್ಲ. ಸಮಾಜದ ಸ್ವಾಸ್ಥ್ಯ ಹಾಳಾಗದಂತೆ ಆಚರಣೆಗಳು ಆಗಬೇಕಿದೆ. ಸರ್ಕಾರ ಕೂಡಲೇ ಇದಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಸಂಸದ ಡಾ.ಸಿ.ಎನ್.ಮಂಜುನಾಥ್ ಹೇಳಿದರು.
ಕೇಂದ್ರದ ಸಾರಿಗೆ ಮಂತ್ರಿ ಜತೆ ಚರ್ಚೆ
ಕಾಮಗಾರಿ ಸಂದರ್ಭದಲ್ಲಿ ಕೆಲವು ರಸ್ತೆಗಳಲ್ಲಿ ಅದಲು ಬದಲು ಹಾಗೂ ಪ್ರತ್ಯೇಕ ಮಾರ್ಗವನ್ನು ಕಲ್ಪಿಸಬೇಕಿದ್ದು, ಇದಕ್ಕೆ ಅಧಿಕಾರಿಗಳು ಕೆಲವು ಕಡೆ ಪ್ರತ್ಯೇಕ ಮಾರ್ಗ ಹೇಗಿರಬೇಕು ಎನ್ನುವ ನಿಟ್ಟಿನಲ್ಲಿ ಪರಿಶೀಲನೆ ಮಾಡಿದ್ದಾರೆ, ಸ್ಥಳೀಯರಿಗೆ ತೊಂದರೆ ಆಗಬಾರದು ಎನ್ನುವ ನಿಟ್ಟಿನಲ್ಲಿ ಹಲವು ಬಾರಿ ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ಜನ ಅಧಿಕಾರಿಗಳಿಗೆ ಮನವಿ ಮಾಡಿದ್ದು, ಇದು ಬಗೆಹರಿದಿಲ್ಲ. ಈ ನಿಟ್ಟಿನಲ್ಲಿ ಕೇಂದ್ರದ ಸಾರಿಗೆ ಮಂತ್ರಿಗಳ ಜತೆ ಚರ್ಚಿಸಿ ಸಮಸ್ಯೆಗಳನ್ನು ಬಗೆಹರಿಸಬೇಕಾದ ನಿಟ್ಟಿನಲ್ಲಿ ಅಧಿಕಾರಿಗಳ ಜತೆ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ಸಂಸದ ಡಾ.ಸಿ.ಎನ್.ಮಂಜುನಾಥ್ ಭರವಸೆ ನೀಡಿದರು. ಚಂದಾಪುರದಿಂದ ಅತ್ತಿಬಲೆವರೆಗೂ ಹಲವು ಕಡೆ ರೈತರು ಭೂಮಿಯನ್ನು ಹೆದ್ದಾರಿಗಾಗಿ ನೀಡಿದ್ದಾರೆ. ಆದರೆ ಇದೇ ರೈತರಿಗೆ ಈಗ ಮೇವು ತರುವುದು ಹಾಗೂ ಪ್ರತಿದಿನ ಜಮೀನಿಗೆ ಸಂಪರ್ಕ ಕಲ್ಪಿಸುವ ವ್ಯವಸ್ಥೆ ಇಲ್ಲದೆ ದೂರದ ಊರಿಗೆ ಹೋಗಿ ಅಲ್ಲಿಂದ ವಾಪಸ್ ಬರಬೇಕಾದ ಪರಿಸ್ಥಿತಿ ಇದ್ದು, ಇದನ್ನು ಸರಿಪಡಿಸುವ ನಿಟ್ಟಿನಲ್ಲಿ ಸ್ಥಳೀಯರು ಅಧಿಕಾರಿಗಳ ಸಮ್ಮುಖದಲ್ಲಿ ಸಮಸ್ಯೆಗಳನ್ನು ಹೇಳಿದ್ದು, ಅದನ್ನು ಕೂಡ ರೈತರ ಜತೆ ಚರ್ಚಿಸಿ ಬಗೆಹರಿಸುವ ನಿಟ್ಟಿನಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.